ಚೀನಾಕ್ಕೆ ಅದರದ್ದೆ ಭಾಷೆಯಲ್ಲಿ ಭಾರತದ ಪ್ರತ್ಯುತ್ತರ!! ಪ್ರವಾಸಿ ವೀಸಾ ಅಮಾನತು
ಭಾರತವು ಚೀನಾದ ಪ್ರಜೆಗಳ ಪ್ರವಾಸಿ ವೀಸಾಗಳನ್ನು ಅಮಾನತುಗೊಳಿಸಿದೆ. ಚೀನಾದಲ್ಲಿ ಅಧ್ಯಯನ ನಡೆಸುತ್ತಿದ್ದ 22 ಸಾವಿರಕ್ಕೂ ಹೆಚ್ಚು ಭಾರತೀಯ ವಿದ್ಯಾರ್ಥಿಗಳು ಚೀನಾಕ್ಕೆ ಮರಳಲು ಅವಕಾಶ ನೀಡುತ್ತಿಲ್ಲ. ಈ ಹಿನ್ನೆಲೆಯಲ್ಲಿ ಭಾರತ ಈ ನಿರ್ಧಾರ ಕೈಗೊಂಡಿದೆ.
Published: 24th April 2022 04:28 PM | Last Updated: 24th April 2022 04:28 PM | A+A A-

ಭಾರತ ಮತ್ತು ಚೀನಾದ ರಾಷ್ಟ್ರ ಧ್ವಜಗಳ ಸಾಂದರ್ಭಿಕ ಚಿತ್ರ
ನವದೆಹಲಿ: ಭಾರತ ಮತ್ತೊಮ್ಮೆ ಚೀನಾಕ್ಕೆ ತನ್ನದೇ ಭಾಷೆಯಲ್ಲಿ ಪ್ರತ್ಯುತ್ತರ ನೀಡಿದೆ. ಜಾಗತಿಕ ವಿಮಾನಯಾನ ಸಂಸ್ಥೆ (IATA) ಪ್ರಕಾರ, ಭಾರತವು ಚೀನಾದ ಪ್ರಜೆಗಳ ಪ್ರವಾಸಿ ವೀಸಾಗಳನ್ನು ಅಮಾನತುಗೊಳಿಸಿದೆ. ಚೀನಾದಲ್ಲಿ ಅಧ್ಯಯನ ನಡೆಸುತ್ತಿದ್ದ 22 ಸಾವಿರಕ್ಕೂ ಹೆಚ್ಚು ಭಾರತೀಯ ವಿದ್ಯಾರ್ಥಿಗಳು ಚೀನಾಕ್ಕೆ ಮರಳಲು ಅವಕಾಶ ನೀಡುತ್ತಿಲ್ಲ. ಈ ಹಿನ್ನೆಲೆಯಲ್ಲಿ ಭಾರತ ಈ ನಿರ್ಧಾರ ಕೈಗೊಂಡಿದೆ.
ಕೊರೊನಾದಿಂದಾಗಿ 22 ಸಾವಿರಕ್ಕೂ ಹೆಚ್ಚು ಭಾರತೀಯ ವಿದ್ಯಾರ್ಥಿಗಳು ತಾಯ್ನಾಡಿಗೆ ಚೀನಾದಿಂದ ಮರಳಿದ್ದರು. ಈಗ ಈ ವಿದ್ಯಾರ್ಥಿಗಳು ತಮ್ಮ ಅಧ್ಯಯನವನ್ನು ಪೂರ್ಣಗೊಳಿಸಲು ಚೀನಾಕ್ಕೆ ಹಿಂತಿರುಗಬೇಕಾಗಿತ್ತು. ಆದರೆ ಚೀನಾದ ಆಡಳಿತವು ಈ ವಿದ್ಯಾರ್ಥಿಗಳಿಗೆ ಹಿಂತಿರುಗಲು ಅವಕಾಶ ನೀಡುತ್ತಿಲ್ಲ. ಈ ವಿದ್ಯಾರ್ಥಿಗಳನ್ನು ಚೀನಾ ವೇಯ್ಟಿಂಗ್ ಲಿಸ್ಟ್ ನಲ್ಲಿ ಇರಿಸಿದೆ. ಚೀನಾದ ಪ್ರಜೆಗಳಿಗೆ ಭಾರತ ನೀಡುವ ಪ್ರವಾಸಿ ವೀಸಾಗಳು ಇನ್ನು ಮುಂದೆ ಮಾನ್ಯವಾಗಿಲ್ಲ ಎಂದು ಐಎಟಿಎ ಹೇಳಿದೆ. ಆದಾಗ್ಯೂ, ಚೀನಾದ ಪ್ರಜೆಗಳಿಗೆ ವ್ಯಾಪಾರ, ಉದ್ಯೋಗ, ರಾಜತಾಂತ್ರಿಕ ಮತ್ತು ಅಧಿಕೃತ ವೀಸಾಗಳನ್ನು ನೀಡಲಾಗುತ್ತಿದೆ.
ಚೀನಾದ ಹಠಮಾರಿ ನಿಲುವು: ಚೀನಾದ ಹಠಮಾರಿ ನಿಲುವಿನಿಂದಾಗಿ ಇಂದು ಭಾರತದ ಸಾವಿರಾರು ವಿದ್ಯಾರ್ಥಿಗಳ ಭವಿಷ್ಯ ತೂಗುಗತ್ತಿಯಲ್ಲಿದೆ. ವಿದೇಶಾಂಗ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ಮಾರ್ಚ್ 17 ರಂದು, ಕಟ್ಟುನಿಟ್ಟಾದ ನಿರ್ಬಂಧಗಳ ಮುಂದುವರಿಕೆಯು ಸಾವಿರಾರು ಭಾರತೀಯ ವಿದ್ಯಾರ್ಥಿಗಳ ಶೈಕ್ಷಣಿಕ ವೃತ್ತಿಜೀವನವನ್ನು ಅಪಾಯಕ್ಕೆ ಸಿಲುಕಿಸುತ್ತಿರುವುದರಿಂದ ಈ ವಿಷಯದಲ್ಲಿ “ಸೌಹಾರ್ದಯುತ ನಿಲುವು” ತೆಗೆದುಕೊಳ್ಳುವಂತೆ ಭಾರತವು ಬೀಜಿಂಗ್ ನ್ನು ಒತ್ತಾಯಿಸಿದೆ ಎಂದು ಹೇಳಿದ್ದರು. ಈ ವಿಷಯವನ್ನು ಪರಿಗಣಿಸುವುದಾಗಿ ಚೀನಾ ಮೊದಲು ಹೇಳಿತ್ತು, ಆದರೆ ಇದರ ಹೊರತಾಗಿಯೂ ಚೀನಾದಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ಬಾಗ್ಚಿ ಹೇಳಿದರು.
ಐಎಟಿಎ ಪ್ರಕಾರ, ಈಗ ಭೂತಾನ್, ನೇಪಾಳ, ಮಾಲ್ಡೀವ್ಸ್‌ನಿಂದ ನಿವಾಸ ಪರವಾನಗಿ ಹೊಂದಿರುವ ಪ್ರಯಾಣಿಕರು, ಭಾರತದಿಂದ ನೀಡಲಾದ ವೀಸಾ ಅಥವಾ ಇ-ವೀಸಾ ಹೊಂದಿರುವ ಪ್ರಯಾಣಿಕರು, ಭಾರತದ ಸಾಗರೋತ್ತರ ನಾಗರಿಕ (OCI) ಕಾರ್ಡ್‌ಗಳು ಅಥವಾ ಬುಕ್‌ಲೆಟ್‌ಗಳನ್ನು ಹೊಂದಿರುವ ಪ್ರಯಾಣಿಕರು, ಭಾರತೀಯ ಮೂಲದ ವ್ಯಕ್ತಿ (PIO) ಕಾರ್ಡ್ ಹೊಂದಿರುವ ಪ್ರಯಾಣಿಕರು ಮತ್ತು ರಾಜತಾಂತ್ರಿಕ ಪಾಸ್‌ಪೋರ್ಟ್ ಹೊಂದಿರುವ ಪ್ರಯಾಣಿಕರಿಗೆ ಭಾರತಕ್ಕೆ ಭೇಟಿ ನೀಡಲು ಅವಕಾಶವಿದೆ. 10 ವರ್ಷಗಳ ಮಾನ್ಯತೆ ಹೊಂದಿರುವ ಪ್ರವಾಸಿ ವೀಸಾಗಳು ಇನ್ನು ಮುಂದೆ ಮಾನ್ಯವಾಗಿಲ್ಲ ಎಂದು ಅದು ಹೇಳಿದೆ.