ಆರ್ಜೆಡಿಗೆ ರಾಜೀನಾಮೆ ಘೋಷಿಸಿದ ಲಾಲು ಹಿರಿಯ ಪುತ್ರ ತೇಜ್ ಪ್ರತಾಪ್ ಯಾದವ್
ಪಕ್ಷದ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಿದ ಆರೋಪ ಎದುರಿಸುತ್ತಿರುವ ಆರ್ ಜೆಡಿ ವರಿಷ್ಠ ಲಾಲು ಪ್ರಸಾದ್ ಯಾದವ್ ಅವರ ಹಿರಿಯ ಪುತ್ರ ತೇಜ್ ಪ್ರತಾಪ್ ಯಾದವ್ ಅವರು ಪಕ್ಷಕ್ಕೆ ರಾಜೀನಾಮೆ...
Published: 25th April 2022 11:18 PM | Last Updated: 25th April 2022 11:18 PM | A+A A-

ತೇಜ್ ಪ್ರತಾಪ್ ಯಾದವ್
ಪಾಟ್ನಾ: ಪಕ್ಷದ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಿದ ಆರೋಪ ಎದುರಿಸುತ್ತಿರುವ ಆರ್ ಜೆಡಿ ವರಿಷ್ಠ ಲಾಲು ಪ್ರಸಾದ್ ಯಾದವ್ ಅವರ ಹಿರಿಯ ಪುತ್ರ ತೇಜ್ ಪ್ರತಾಪ್ ಯಾದವ್ ಅವರು ಪಕ್ಷಕ್ಕೆ ರಾಜೀನಾಮೆ ನೀಡುವುದಾಗಿ ಸೋಮವಾರ ಘೋಷಿಸಿದ್ದಾರೆ.
“ನನ್ನ ತಂದೆಯೊಂದಿಗೆ ಇಂದು ಸಭೆ ನಡೆಸಿದ ನಂತರ ನಾನು ಆರ್ಜೆಡಿಯ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಲು ನಿರ್ಧರಿಸಿದ್ದೇನೆ. ನಾನು ಯಾವಾಗಲೂ ನನ್ನ ತಂದೆಯ ಆದರ್ಶಗಳನ್ನು ಅನುಸರಿಸಲು ಪ್ರಯತ್ನಿಸುತ್ತೇನೆ ಮತ್ತು ಪಕ್ಷದ ಕಾರ್ಯಕರ್ತರನ್ನು ಗೌರವಿಸುತ್ತೇನೆ ಎಂದು ಆರೋಪದಿಂದ ನೊಂದ ತೇಜ್ ಪ್ರತಾಪ್ ಯಾದವ್ ಅವರು ಟ್ವೀಟ್ ಮಾಡಿದ್ದಾರೆ.
ಇದನ್ನು ಓದಿ: ಡೊರಾಂಡಾ ಖಜಾನೆ ಮೇವು ಹಗರಣ ಪ್ರಕರಣ: ಲಾಲೂ ಪ್ರಸಾದ್ ಯಾದವ್ ಗೆ ಜಾರ್ಖಂಡ್ ಹೈಕೋರ್ಟ್ ಜಾಮೀನು ಮಂಜೂರು
ಕಳೆದ ಶುಕ್ರವಾರ ಮಾಜಿ ಮುಖ್ಯಮಂತ್ರಿ ಹಾಗೂ ಆರ್ ಜೆಡಿ ನಾಯಕಿ ರಾಬ್ರಿ ದೇವಿ ಅವರ ಸರ್ಕ್ಯುಲರ್ ರಸ್ತೆಯಲ್ಲಿ ಪಕ್ಷ ಆಯೋಜಿಸಿದ್ದ ಇಫ್ತಾರ್ ಕೂಟದ ವೇಳೆ ತೇಜ್ ಪ್ರತಾಪ್ ಅವರು ತಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರ್ ಜೆಡಿ ನಾಯಕ ರಾಮರಾಜ್ ಯಾದವ್ ಅವರು ಆರೋಪಿಸಿದ್ದರು.
ತಮ್ಮ ವಿರುದ್ಧದ ಆರೋಪವನ್ನು ತಳ್ಳಿಹಾಕಿರುವ ತೇಜ್ ಪ್ರತಾಪ್ ಯಾದವ್, ಆರ್ಜೆಡಿ ರಾಜ್ಯಾಧ್ಯಕ್ಷ ಜಗದಾನಂದ್ ಸಿಂಗ್, ಪಕ್ಷದ ಎಂಎಲ್ಸಿ ಸುನೀಲ್ ಸಿಂಗ್ ಮತ್ತು ಸಂಜಯ್ ಯಾದವ್ ಅವರು ತಮ್ಮ ವಿರುದ್ಧ ಪಿತೂರಿ ನಡೆಸಿದ್ದಾರೆ ಎಂದು ದೂರಿದ್ದಾರೆ.