ಗುಜರಾತ್ ಕಾಂಗ್ರೆಸ್ ನಾಯಕತ್ವದ ಬಗ್ಗೆ ಅಸಮಾಧಾನವಿದೆ, ರಾಹುಲ್ ಅಥವಾ ಪ್ರಿಯಾಂಕಾ ಬಗ್ಗೆ ಅಲ್ಲ: ಹಾರ್ದಿಕ್ ಪಟೇಲ್
ಕಾಂಗ್ರೆಸ್ ನಾಯಕ ಹಾರ್ದಿಕ್ ಪಟೇಲ್ ಅವರು ಬಿಜೆಪಿ ಸೇರುತ್ತಾರೆಂಬ ವದಂತಿಗಳನ್ನು ಖುದ್ದು ಹಾರ್ದಿಕ್ ಪಟೇಲ್ ಅವರೇ ಸೋಮವಾರ ಸ್ಪಷ್ಟವಾಗಿ ತಳ್ಳಿಹಾಕಿದ್ದಾರೆ.
Published: 25th April 2022 09:20 PM | Last Updated: 26th April 2022 01:39 PM | A+A A-

ಹಾರ್ದಿಕ್ ಪಟೇಲ್
ತಾಪಿ(ಗುಜರಾತ್): ಕಾಂಗ್ರೆಸ್ ನಾಯಕ ಹಾರ್ದಿಕ್ ಪಟೇಲ್ ಅವರು ಬಿಜೆಪಿ ಸೇರುತ್ತಾರೆಂಬ ವದಂತಿಗಳನ್ನು ಖುದ್ದು ಹಾರ್ದಿಕ್ ಪಟೇಲ್ ಅವರೇ ಸೋಮವಾರ ಸ್ಪಷ್ಟವಾಗಿ ತಳ್ಳಿಹಾಕಿದ್ದಾರೆ.
ಗುಜರಾತ್ ಪ್ರದೇಶ ಕಾಂಗ್ರೆಸ್ ಸಮಿತಿಯ ಕಾರ್ಯಾಧ್ಯಕ್ಷ ಹಾರ್ದಿಕ್ ಪಟೇಲ್ ಇಂದು ಬಿಜೆಪಿ ಸೇರುವ ವದಂತಿಗಳನ್ನು ತಳ್ಳಿಹಾಕಿದ್ದು, ನನಗೆ ಅಂತಹ ಯಾವುದೇ ಯೋಚನೆ ಇಲ್ಲ. ಆದರೆ ಗುಜರಾತ್ ಕಾಂಗ್ರೆಸ್ ನಾಯಕತ್ವದ ಬಗ್ಗೆ ಅಸಮಾಧಾನವಿದೆ. ರಾಹುಲ್ ಗಾಂಧಿ ಅಥವಾ ಪ್ರಿಯಾಂಕಾ ಗಾಂಧಿ ಅವರ ಬಗ್ಗೆ ಯಾವುದೇ ಅಸಮಾಧಾನ ಇಲ್ಲ ಎಂದು ಹೇಳಿದ್ದಾರೆ.
“ಜನರು ಬಹಳಷ್ಟು ವಿಷಯಗಳನ್ನು ಹೇಳುತ್ತಾರೆ. ಜೋ ಬೈಡನ್ ಯುಎಸ್ ಚುನಾವಣೆಯಲ್ಲಿ ಗೆದ್ದಾಗ, ನಾನು ಅವರನ್ನು ಹೊಗಳಿದ್ದೆ. ಇದಕ್ಕೆ ಕಾರಣ ಅವರ ಉಪಾಧ್ಯಕ್ಷರು ಭಾರತೀಯ ಮೂಲದವರು. ಆದರೆ ಇದರರ್ಥ ನಾನು ಬೈಡನ್ ಅವರ ಪಕ್ಷಕ್ಕೆ ಸೇರುತ್ತೇನೆಯೇ?” ಎಂದು ಹಾರ್ದಿಕ್ ಪಟೇಲ್ ಮಾಧ್ಯಮಗಳನ್ನು ಪ್ರಶ್ನಿಸಿದರು.
ಇದನ್ನು ಓದಿ: ಬಿಜೆಪಿಯಲ್ಲಿ ಕೆಲ ಒಳ್ಳೆಯ ವಿಷಯಗಳಿವೆ: ಕಾಂಗ್ರೆಸ್ ಗೆ ಶಾಕ್ ಕೊಟ್ಟ ಹಾರ್ದಿಕ್ ಪಟೇಲ್!
ಹಾರ್ದಿಕ್ ಪಟೇಲ್ ಇತ್ತೀಚಿನ ದಿನಗಳಲ್ಲಿ ಆಡಳಿತಾರೂಢ ಬಿಜೆಪಿಯನ್ನು ಹೊಗಳಿದ್ದರು. 370ನೇ ವಿಧಿ ಹಿಂಪಡೆತ, ರಾಮಮಂದಿರ ನಿರ್ಮಾಣ ವಿಚಾರದಲ್ಲಿ ಬಿಜೆಪಿಯನ್ನು ಶ್ಲಾಘಿಸಿದ್ದರು.
ಬಿಜೆಪಿಯನ್ನು ಹೊಗಳಿರುವ ಬಗ್ಗೆ ಸ್ಪಷ್ಟನೆ ನೀಡಿದ ಕಾಂಗ್ರೆಸ್ ನಾಯಕ, ಪ್ರತಿಸ್ಪರ್ಧಿಗೆ ಉತ್ತಮ ಗುಣವಿದ್ದರೆ, ರಾಜಕೀಯದಲ್ಲಿ ನಾವು ಅದರ ಬಗ್ಗೆ ಯೋಚಿಸಬೇಕಾಗುತ್ತದೆ. ಅವರು ದಿಟ್ಟ ನಿರ್ಧಾರಗಳನ್ನು ತೆಗೆದುಕೊಂಡರೆ, ನಾವು ಕೂಡ ಧೈರ್ಯದಿಂದ ತೆಗೆದುಕೊಳ್ಳಬೇಕಾಗುತ್ತದೆ. ನೀವು ಸಮಯ ಹಾಳು ಮಾಡಿಕೊಂಡರೆ ಜನ ನಿಮ್ಮನ್ನು ಬಿಟ್ಟು ಹೋಗುತ್ತಾರೆ. ಪಕ್ಷಕ್ಕಾಗಿ ದುಡಿಯಲು ಬಯಸುವ ಅನೇಕ ಯುವಕರಿದ್ದಾರೆ. ಅಂತಹ ಯುವಕರಿಗೆ ಅವಕಾಶ ಸಿಗಲಿ ಎಂದು ನಾನು ಮುಕ್ತಕಂಠದಿಂದ ಹಾರೈಸುತ್ತೇನೆ. ಪಕ್ಷದ ನಾಯಕರಾದ ರಾಹುಲ್ ಗಾಂಧಿ ಅಥವಾ ಪ್ರಿಯಾಂಕಾ ಗಾಂಧಿ ಬಗ್ಗೆ ನನಗೆ ಅಸಮಾಧಾನವಿಲ್ಲ. ಆದರೆ ರಾಜ್ಯ ನಾಯಕತ್ವದ ಬಗ್ಗೆ ನನಗೆ ಅಸಮಾಧಾನವಿದೆ ಎಂದು ಹಾರ್ದಿಕ್ ಪಟೇಲ್ ಹೇಳಿದ್ದಾರೆ.
ಹಾರ್ದಿಕ್ ಪಟೇಲ್ ಅವರು 2015 ರಲ್ಲಿ ಗುಜರಾತ್ನಲ್ಲಿ ಪಾಟಿದಾರ್ ಸಮುದಾಯಕ್ಕೆ ಮೀಸಲಾತಿಗಾಗಿ ಒತ್ತಾಯಿಸಿ ದೊಡ್ಡ ಆಂದೋಲನ ನಡೆಸಿ ನಾಯಕರಾಗಿ ಹೊರಹೊಮ್ಮಿದರು ಮತ್ತು ನಂತರ ಕಾಂಗ್ರೆಸ್ ಸೇರಿದರು.