ಪಶ್ಚಿಮ ಬಂಗಾಳ: ಅತ್ಯಾಚಾರ ಯತ್ನದ ದೂರು ಹಿಂಪಡೆಯುವಂತೆ ಬೆದರಿಕೆ; 14 ವರ್ಷದ ಬಾಲಕಿ ಆತ್ಮಹತ್ಯೆಗೆ ಶರಣು!
ಅತ್ಯಾಚಾರ ಯತ್ನ ದೂರನ್ನು ಹಿಂಪಡೆಯುವಂತೆ ಬೆದರಿಕೆ ಹಾಕಿದ ಹಿನ್ನಲೆಯಲ್ಲಿ 14 ವರ್ಷದ ಬಾಲಕಿಯೊಬ್ಬಳು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದು ಸುಮಾರು ಹದಿನೈದು ದಿನಗಳ ಕಾಲ ಜೀವನ್ಮರಣ ಹೋರಾಟ ನಡೆಸಿ ಸಾವನ್ನಪ್ಪಿದ್ದಾಳೆ.
Published: 25th April 2022 03:13 PM | Last Updated: 25th April 2022 03:13 PM | A+A A-

ಸಂಗ್ರಹ ಚಿತ್ರ
ಜಲ್ಪೈಗುರಿ: ಅತ್ಯಾಚಾರ ಯತ್ನ ದೂರನ್ನು ಹಿಂಪಡೆಯುವಂತೆ ಬೆದರಿಕೆ ಹಾಕಿದ ಹಿನ್ನಲೆಯಲ್ಲಿ 14 ವರ್ಷದ ಬಾಲಕಿಯೊಬ್ಬಳು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದು ಸುಮಾರು ಹದಿನೈದು ದಿನಗಳ ಕಾಲ ಜೀವನ್ಮರಣ ಹೋರಾಟ ನಡೆಸಿ ಸಾವನ್ನಪ್ಪಿದ್ದಾಳೆ.
ಪಶ್ಚಿಮ ಬಂಗಾಳದ ಜಲ್ಪೈಗುರಿ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಈ ಪ್ರಕರಣವನ್ನು ಸಿಬಿಐಗೆ ನೀಡುವಂತೆ ಮೃತ ಬಾಲಕಿಯ ಕುಟುಂಬ ಒತ್ತಾಯಿಸಿದೆ. ಫೆಬ್ರವರಿ 28ರಂದು ಮೇನಗುರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ತನ್ನ ನಿವಾಸದಲ್ಲಿ ಒಬ್ಬಂಟಿಯಾಗಿದ್ದಾಗ ವ್ಯಕ್ತಿಯೊಬ್ಬ ಬಾಲಕಿಯ ಮೇಲೆ ಅತ್ಯಾಚಾರ ಮಾಡಲು ಯತ್ನಿಸಿದ್ದನಾದರೂ ಆಕೆ ಎಚ್ಚರಿಕೆ ನೀಡಿದ್ದರಿಂದ ಆರೋಪಿ ಸ್ಥಳದಿಂದ ಪರಾರಿಯಾಗಿದ್ದನು.
ಈ ಸಂಬಂಧ ಕುಟುಂಬದವರು ಪೊಲೀಸರಿಗೆ ದೂರು ನೀಡಿದ್ದು ಆರೋಪಿಯನ್ನು ಬಂಧಿಸಲಾಗಿದೆ. ಆದರೆ ನಂತರ ಆರೋಪಿ ಜಾಮೀನು ಪಡೆದು ಹೊರಬಂದಿದ್ದಾರೆ. ಇನ್ನು ಏಪ್ರಿಲ್ 13ರಂದು ಇಬ್ಬರು ವ್ಯಕ್ತಿಗಳು ಮುಖವನ್ನು ಮುಚ್ಚಿಕೊಂಡು ಹುಡುಗಿಯ ಮನೆಗೆ ಆಗಮಿಸಿ ದೂರನ್ನು ಹಿಂಪಡೆಯುವಂತೆ ಬೆದರಿಕೆ ಹಾಕಿದರು. ಒಂದು ವೇಳೆ ದೂರು ಹಿಂಪಡೆಯದಿದ್ದರೆ ಬಾಲಕಿಯ ಮೇಲೆ ಅತ್ಯಾಚಾರವೆಸಗಲಾಗುತ್ತದೆ. ಆಕೆಯ ಕುಟುಂಬದವರು ಕೊಲೆ ಮಾಡುವುದಾಗಿ ಬೆದರಿಸಿದ್ದರು.
ಇದರಿಂದ ಭಯಭೀತಳಾದ ಬಾಲಕಿ ಮರುದಿನ ಬೆಂಕಿ ಹಚ್ಚಿಕೊಂಡಿದ್ದಳು. ಆದರೆ ಅವಳನ್ನು ರಕ್ಷಿಸಿ ಜಲ್ಪೈಗುರಿ ಆಸ್ಪತ್ರೆಗೆ ದಾಖಲಿಸಲಾಯಿತು. ನಂತರ ಉತ್ತರ ಬಂಗಾಳದ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಅಲ್ಲಿ ಅವಳು ಸೋಮವಾರ ಮುಂಜಾನೆ ಸಾವನ್ನಪ್ಪಿದ್ದಾಳೆ.
ಪ್ರಕರಣದ ಎಲ್ಲಾ ನಾಲ್ವರು ಆರೋಪಿಗಳನ್ನು ಬಂಧಿಸಿ 14 ದಿನಗಳವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಜಲ್ಪೈಗುರಿ ಪೊಲೀಸ್ ವರಿಷ್ಠಾಧಿಕಾರಿ ದೇಬರ್ಶಿ ದತ್ತಾ ತಿಳಿಸಿದ್ದಾರೆ.