ರಾಣಾ ದಂಪತಿ ಬಂಧನ ಪ್ರಕರಣ: ಮಹಾರಾಷ್ಟ್ರ ಸರ್ಕಾರಕ್ಕೆ ವರದಿ ಕೇಳಿದ ಕೇಂದ್ರ ಗೃಹ ಸಚಿವಾಲಯ!
ಸಂಸದೆ ನವನೀತ್ ರಾಣಾ ದಂಪತಿ ಬಂಧನ ಮತ್ತು ಅವರ ಮೇಲೆ ಪೊಲೀಸರಿಂದ ಅಮಾನವೀಯ ವರ್ತನೆ ಆರೋಪದ ಕುರಿತು ಕೇಂದ್ರ ಗೃಹ ಸಚಿವಾಲಯವು ಮಹಾರಾಷ್ಟ್ರ ಸರ್ಕಾರದಿಂದ ವರದಿಯನ್ನು ಕೇಳಿದೆ.
Published: 26th April 2022 03:00 PM | Last Updated: 26th April 2022 03:40 PM | A+A A-

ನವನೀತ್ ರಾಣಾ
ನವದೆಹಲಿ: ಸಂಸದೆ ನವನೀತ್ ರಾಣಾ ದಂಪತಿ ಬಂಧನ ಮತ್ತು ಅವರ ಮೇಲೆ ಪೊಲೀಸರಿಂದ ಅಮಾನವೀಯ ವರ್ತನೆ ಆರೋಪದ ಕುರಿತು ಕೇಂದ್ರ ಗೃಹ ಸಚಿವಾಲಯವು ಮಹಾರಾಷ್ಟ್ರ ಸರ್ಕಾರದಿಂದ ವರದಿಯನ್ನು ಕೇಳಿದೆ.
ಮುಂಬೈನಲ್ಲಿರುವ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರ ಖಾಸಗಿ ನಿವಾಸ 'ಮಾತೋಶ್ರೀ' ಮುಂದೆ ಹನುಮಾನ್ ಚಾಲೀಸಾವನ್ನು ಪಠಿಸುವುದಾಗಿ ಘೋಷಿಸಿದ್ದಕ್ಕಾಗಿ ಅಮರಾವತಿಯ ಸ್ವತಂತ್ರ ಸಂಸದೆ ಮತ್ತು ಅವರ ಶಾಸಕ-ಪತಿ ರವಿ ರಾಣಾ ಅವರನ್ನು ಬಂಧಿಸಲಾಗಿತ್ತು.
ಮುಂಬೈನ ಖಾರ್ ಪೊಲೀಸ್ ಠಾಣೆಯಲ್ಲಿ ತನ್ನ ಬಂಧನ ಮತ್ತು ಅಮಾನವೀಯ ವರ್ತನೆ ಬಗ್ಗೆ ಶ್ರೀಮತಿ ರಾಣಾ ಅವರ ಆರೋಪದ ಕುರಿತು ಗೃಹ ಸಚಿವಾಲಯವು ಮಹಾರಾಷ್ಟ್ರ ಸರ್ಕಾರದಿಂದ ವರದಿಯನ್ನು ಕೇಳಿದೆ ಎಂದು ಗೃಹ ಸಚಿವಾಲಯದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇದನ್ನೂ ಓದಿ: ಹನುಮಾನ್ ಚಾಲೀಸ ವಿವಾದ: ರಾಣಾ ದಂಪತಿ ವಿರುದ್ಧದ ಎಫ್ಐಆರ್ ರದ್ದುಗೊಳಿಸಲು ಹೈಕೋರ್ಟ್ ನಕಾರ
ಲೋಕಸಭೆಯ ವಿಶೇಷಾಧಿಕಾರ ಮತ್ತು ನೈತಿಕ ಸಮಿತಿಯು ಮಹಾರಾಷ್ಟ್ರ ಸರ್ಕಾರದಿಂದ ವರದಿ ಕೇಳುವಂತೆ ಗೃಹ ಸಚಿವಾಲಯಕ್ಕೆ ಸೂಚಿಸಿದ ನಂತರ ಈ ಕ್ರಮ ಕೈಗೊಳ್ಳಲಾಗಿದೆ.
ಶಾಸಕ ದಂಪತಿಗಳ ಮೇಲೆ ದ್ವೇಷವನ್ನು ಉತ್ತೇಜಿಸುವ ಜೊತೆಗೆ ದೇಶದ್ರೋಹದ ಆರೋಪವನ್ನು ಹೊರಿಸಲಾಗಿದೆ ಮತ್ತು ಕರ್ತವ್ಯ ನಿರ್ವಹಣೆಯನ್ನು ತಡೆಯಲು ಪೊಲೀಸ್ ಅಧಿಕಾರಿ ಮೇಲೆ ಹಲ್ಲೆ ನಡೆಸಿರುವ ಆರೋಪವಿದೆ.
ಏತನ್ಮಧ್ಯೆ, ಮುಂಬೈನ ಸೆಷನ್ಸ್ ನ್ಯಾಯಾಲಯವು ನವನೀತ್ ರಾಣಾ ಮತ್ತು ಅವರ ಪತಿಯ ಜಾಮೀನು ಅರ್ಜಿಗೆ ಶುಕ್ರವಾರದೊಳಗೆ ಉತ್ತರ ಸಲ್ಲಿಸುವಂತೆ ಪೊಲೀಸರಿಗೆ ಸೂಚಿಸಿದೆ.