ಆಸ್ತಿ ವಿವರ ಬಹಿರಂಗಪಡಿಸುವಂತೆ ಯುಪಿ ಸಚಿವರು, ಐಎಎಸ್, ಐಪಿಎಸ್ ಅಧಿಕಾರಿಗಳಿಗೆ ಸಿಎಂ ಯೋಗಿ ಸೂಚನೆ
ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಮಂಗಳವಾರ ತಮ್ಮ ಸಂಪುಟದ ಸಚಿವರು ಮತ್ತು ಅವರ ಕುಟುಂಬದ ಒಡೆತನದ ಎಲ್ಲಾ ಆಸ್ತಿಯನ್ನು ಮೂರು ತಿಂಗಳೊಳಗೆ ಘೋಷಿಸುವಂತೆ ಸೂಚಿಸಿದ್ದಾರೆ.
Published: 26th April 2022 08:35 PM | Last Updated: 27th April 2022 01:12 PM | A+A A-

ಯೋಗಿ ಆದಿತ್ಯನಾಥ್
ಲಖನೌ: ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಮಂಗಳವಾರ ತಮ್ಮ ಸಂಪುಟದ ಸಚಿವರು ಮತ್ತು ಅವರ ಕುಟುಂಬದ ಒಡೆತನದ ಎಲ್ಲಾ ಆಸ್ತಿಯನ್ನು ಮೂರು ತಿಂಗಳೊಳಗೆ ಘೋಷಿಸುವಂತೆ ಸೂಚಿಸಿದ್ದಾರೆ. ಅಲ್ಲದೆ ರಾಜ್ಯದ ಐಎಎಸ್ ಮತ್ತು ಐಪಿಎಸ್ ಅಧಿಕಾರಿಗಳೂ ಸಹ ತಮ್ಮ ಆಸ್ತಿ ವಿವರಗಳನ್ನು ಆನ್ ಲೈನ್ ನಲ್ಲಿ ಹಾಕುವಂತೆ ಸೂಚಿಸಿದ್ದಾರೆ.
ಇದೇ ವೇಳೆ ಸರ್ಕಾರದ ಕೆಲಸದಲ್ಲಿ ಸಚಿವರ ಕುಟುಂಬಸ್ಥರು ಹಸ್ತಕ್ಷೇಪ ಮಾಡಬಾರದು ಎಂದು ಸಿಎಂ ಯೋಗಿ ಆದಿತ್ಯನಾಥ್ ಸೂಚಿಸಿದ್ದಾರೆ.
ಇಂದು ಸಂಪುಟ ಸಭೆಯ ನಂತರ ವಿಶೇಷ ಸಭೆಯನ್ನುದ್ದೇಶಿಸಿ ಮಾತನಾಡಿದ ಸಿಎಂ ಯೋಗಿ, ಐಎಎಸ್, ಐಪಿಎಸ್ ಮತ್ತು ಪ್ರಾಂತೀಯ ನಾಗರಿಕ ಸೇವಾ ಅಧಿಕಾರಿಗಳು ತಮ್ಮ ಮತ್ತು ತಮ್ಮ ಕುಟುಂಬ ಸದಸ್ಯರ ಆಸ್ತಿಯನ್ನು ಘೋಷಿಸಬೇಕು ಮತ್ತು ಅದನ್ನು ಜನರು ನೋಡುವಂತೆ ಆನ್‌ಲೈನ್ ಪೋರ್ಟಲ್‌ನಲ್ಲಿ ಲಭ್ಯವಾಗುವಂತೆ ಮಾಡಬೇಕು ಎಂದು ಹೇಳಿದ್ದಾರೆ.
ಇದನ್ನು ಓದಿ: ಗಲಭೆ ನಿಯಂತ್ರಿಸಲು ಉತ್ತರ ಪ್ರದೇಶ, ಮಧ್ಯಪ್ರದೇಶದ ಮಾದರಿಗಳು ಕೆಲಸ ಮಾಡಿದೆ: ಜಗದೀಶ್ ಶೆಟ್ಟರ್
ಆರೋಗ್ಯಕರ ಪ್ರಜಾಪ್ರಭುತ್ವಕ್ಕಾಗಿ, ಸಾರ್ವಜನಿಕ ಪ್ರತಿನಿಧಿಗಳ ನಡವಳಿಕೆ ಬಹಳ ಮುಖ್ಯ. ಈ ಮನೋಭಾವದ ಪ್ರಕಾರ ಎಲ್ಲಾ ಗೌರವಾನ್ವಿತ ಮಂತ್ರಿಗಳು ತಮ್ಮ ಮತ್ತು ತಮ್ಮ ಕುಟುಂಬದ ಸದಸ್ಯರ ಎಲ್ಲಾ ಚರ ಮತ್ತು ಸ್ಥಿರ ಆಸ್ತಿಯನ್ನು ಮುಂದಿನ ಮೂರು ತಿಂಗಳ ಅವಧಿಯಲ್ಲಿ ಸಾರ್ವಜನಿಕವಾಗಿ ಘೋಷಣೆ ಮಾಡಬೇಕು ಎಂದು ಸಿಎಂ ಯೋಗಿ ಆದಿತ್ಯನಾಥ್ ಸೂಚಿಸಿದ್ದಾರೆ.
ಸರ್ಕಾರದ ಕೆಲಸದಲ್ಲಿ ಕುಟುಂಬದ ಸದಸ್ಯರ ಹಸ್ತಕ್ಷೇಪ ಆಗದಂತೆ ಎಲ್ಲ ಸಚಿವರು ನಿಗಾವಹಿಸಬೇಕು, ನಮ್ಮ ನಡತೆಯಿಂದ ನಾವು ಮಾದರಿಯಾಗಬೇಕು ಎಂದು ಹೇಳಿದ್ದಾರೆ.