ಆಗ್ರಾ: ದೇವಾಲಯ ಸ್ಥಳಾಂತರಕ್ಕೆ ರೈಲ್ವೆಯಿಂದ ನೋಟಿಸ್, ಹಿಂದೂ ಕಾರ್ಯಕರ್ತರಿಂದ ಸಾಮೂಹಿಕ ಆತ್ಮಹತ್ಯೆ ಬೆದರಿಕೆ!
ಆಗ್ರಾದಲ್ಲಿನ ರಾಜಾ ಕಿ ಮಂಡಿ ರೈಲ್ವೆ ನಿಲ್ದಾಣದ ಆವರಣದಲ್ಲಿರುವ 250 ವರ್ಷ ಹಳೆಯದಾದ ಚಾಮುಂಡ ದೇವಿ ದೇವಾಲಯ ಸ್ಥಳಾಂತರಕ್ಕೆ ರೈಲ್ವೆ ನೋಟಿಸ್ ಹೊರಡಿಸಿದ ಬಳಿಕ ಹಿಂದೂ ಸಂಘಟನೆ ಕಾರ್ಯಕರ್ತರು ಜೀವ ಬೆದರಿಕೆ ಹಾಕಿದ್ದಾರೆ.
Published: 30th April 2022 07:12 PM | Last Updated: 30th April 2022 08:14 PM | A+A A-

ಸಾಂದರ್ಭಿಕ ಚಿತ್ರ
ಲಖನೌ: ಆಗ್ರಾದಲ್ಲಿನ ರಾಜಾ ಕಿ ಮಂಡಿ ರೈಲ್ವೆ ನಿಲ್ದಾಣದ ಆವರಣದಲ್ಲಿರುವ 250 ವರ್ಷ ಹಳೆಯದಾದ ಚಾಮುಂಡ ದೇವಿ ದೇವಾಲಯ ಸ್ಥಳಾಂತರಕ್ಕೆ ರೈಲ್ವೆ ನೋಟಿಸ್ ಹೊರಡಿಸಿದ ಬಳಿಕ ಹಿಂದೂ ಸಂಘಟನೆ ಕಾರ್ಯಕರ್ತರು ಜೀವ ಬೆದರಿಕೆ ಹಾಕಿದ್ದಾರೆ. ಒಂದು ವೇಳೆ ರೈಲ್ವೆ ಪ್ರಾಧಿಕಾರ ಇದನ್ನು ಮುಂದುವರೆಸಿದ್ದಲ್ಲಿ ಸಾಮೂಹಿಕ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹಿಂದೂ ಕಾರ್ಯಕರ್ತರು ಬೆದರಿಕೆ ಹಾಕಿದ್ದಾರೆ.
ರೈಲ್ವೆ ನಿಲ್ದಾಣದಿಂದ ದೇವಾಲಯ ಸ್ಥಳಾಂತರಕ್ಕೆ ರೈಲ್ವೆ ವಿಭಾಗೀಯ ಮ್ಯಾನೇಜರ್ ಆನಂದ್ ಸ್ವರೂಪ್ ಏಪ್ರಿಲ್ 20 ರಂದು ದೇವಾಲಯ ಆಡಳಿತ ಮಂಡಳಿಗೆ ನೋಟಿಸ್ ಕಳುಹಿಸಿದ್ದರು. ಪ್ರಯಾಣಿಕರಿಗೆ ತೊಂದರೆಯಾಗುತ್ತಿರುವುದರಿಂದ ದೇವಾಲಯವನ್ನು ಸ್ಥಳಾಂತರಿಸಲಾಗುತ್ತಿದೆ. ಒಂದು ವೇಳೆ ದೇವಾಲಯ ಸ್ಥಳಾಂತರಿಸದಿದ್ದಲ್ಲಿ, ರೈಲ್ವೆ ಫ್ಲಾಟ್ ಫಾರಂನ್ನು ಸ್ಥಳಾಂತರಿಸಬೇಕಾಗುತ್ತದೆ ಎಂದು ನೋಟಿಸ್ ನಲ್ಲಿ ಉಲ್ಲೇಖಿಸಲಾಗಿತ್ತು.
ಸಮೀಪದಲ್ಲಿದ್ದ ಮಸೀದಿ, ದರ್ಗಾಗಳಿಗೂ ಇದೇ ರೀತಿಯ ನೋಟಿಸ್ ಕಳುಹಿಸಲಾಗಿತ್ತು. ಈ ನೋಟಿಸ್ ಗೆ ವಿಶ್ವ ಹಿಂದೂ ಪರಿಷತ್ ಹಾಗೂ ಭಜರಂಗ ದಳ ಕಾರ್ಯಕರ್ತರು ವಿರೋಧ ವ್ಯಕ್ತಪಡಿಸಿ, ಆಗ್ರಾದಲ್ಲಿನ ರೈಲ್ವೆ ವಿಭಾಗೀಯ ಕಚೇರಿ ಮುಂದೆ ಶುಕ್ರವಾರ ಪ್ರತಿಭಟನೆ ನಡೆಸಿದರು. 300 ವರ್ಷ ಹಳೆಯದಾದ ದೇವಾಲಯವನ್ನು ಯಾವುದೇ ಕಾರಣಕ್ಕೂ ಸ್ಥಳಾಂತರಿಸಬಾರದು ಎಂದು ಅವರು ಆಗ್ರಹಿಸಿದರು.