ಕಾಂಗ್ರೆಸ್ ಸಂಸದರ ಅಮಾನತು ರದ್ದು; ಬೆಲೆ ಏರಿಕೆ ಕುರಿತು ಸದನದಲ್ಲಿ ಕಾವೇರಿದ ಚರ್ಚೆ

ನಾಲ್ವರು ಕಾಂಗ್ರೆಸ್ ಸಂಸದರ ಅಮಾನತು ಹಿಂಪಡೆಯಲಾಗಿದ್ದು, ಈ ಕುರಿತು ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರು ಅಧಿಕೃತ ಘೋಷಣೆ ಮಾಡಿದ್ದಾರೆ.
ಲೋಕಸಭೆ
ಲೋಕಸಭೆ

ನವದೆಹಲಿ: ನಾಲ್ವರು ಕಾಂಗ್ರೆಸ್ ಸಂಸದರ ಅಮಾನತು ಹಿಂಪಡೆಯಲಾಗಿದ್ದು, ಈ ಕುರಿತು ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರು ಅಧಿಕೃತ ಘೋಷಣೆ ಮಾಡಿದ್ದಾರೆ.

ಲೋಕಸಭೆಯಲ್ಲಿ ಕಾಂಗ್ರೆಸ್ ಸಂಸದರಾದ ಮಣಿಕಂ ಟ್ಯಾಗೋರ್, ರಮ್ಯಾ ಹರಿದಾಸ್, ಜ್ಯೋತಿಮಣಿ ಮತ್ತು ಟಿಎನ್ ಪ್ರತಾಪ ಅವರನ್ನು ಜುಲೈ 26ರಂದು ಸದನದ ಕಲಾಪಗಳಿಂದ ಅಮಾನತುಗೊಳಿಸಲಾಗಿತ್ತು. ಸದನದಲ್ಲಿ ಪ್ಲೆಕಾರ್ಡ್ ಹಿಡಿದು ಘೋಷಣೆ ಕೂಗಿದ್ದಕ್ಕೆ ಸ್ಪೀಕರ್ ಓಂ ಬಿರ್ಲಾ ಅವರು ಸಂಸದರನ್ನು ಅಮಾನತುಗೊಳಿಸಿದ್ದರು. ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರು ಕಾಂಗ್ರೆಸ್ ಸಂಸದರ ಅಮಾನತು ಕ್ರಮವನ್ನು ಸೋಮವಾರ ಹಿಂಪಡೆದಿದ್ದಾರೆ. ಸಂಸತ್ತಿನ ಉಭಯ ಸದನಗಳನ್ನು ಇಂದು ಮಧ್ಯಾಹ್ನ 2 ಗಂಟೆಯವರೆಗೆ ಮುಂದೂಡಲಾಗಿತ್ತು. ಪ್ರಕ್ರಿಯೆಗಳು ಪುನರಾರಂಭಗೊಂಡಿದ್ದು, ಬೆಲೆ ಏರಿಕೆ ಕುರಿತು ಚರ್ಚೆ ನಡೆಯುತ್ತಿದೆ.

ಲೋಕಸಭೆಯಲ್ಲಿ ಸಂಸದರ ಅಮಾನತು ತೆಗೆದುಹಾಕುವ ಪ್ರಸ್ತಾವನೆ ಅಂಗೀಕಾರಗೊಂಡ ನಂತರ ಸೋಮವಾರ ಕೆಳಮನೆಯಲ್ಲಿ ಗದ್ದಲ ಕೊನೆಗೊಂಡಿದ್ದು,  ಬೆಲೆ ಏರಿಕೆ ಕುರಿತು ಸದನದಲ್ಲಿ ಕಾವೇರಿದ ಚರ್ಚೆ ಆರಂಭವಾಗಿದೆ. ಚರ್ಚೆ ಆರಂಭಿಸಿದ ಕಾಂಗ್ರೆಸ್ ಸಂಸದ ಮನೀಶ್ ತಿವಾರಿ ಅವರು ಎಂಟು ವರ್ಷಗಳ ಆರ್ಥಿಕ ದುರುಪಯೋಗದ ಪರಿಣಾಮ ಇದಾಗಿದೆ. ಸರ್ಕಾರ ತನ್ನ ಬೊಕ್ಕಸ ತುಂಬಿಸುತ್ತಲೇ ಸಾರ್ವಜನಿಕರ ಜೇಬಿಗೆ ಕತ್ತರಿ ಹಾಕುತ್ತಿದೆ ಎಂದರು.

ಕೋವಿಡ್ -19 ನಿಂದ ಬಳಲುತ್ತಿರುವ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮರಳಿದ ನಂತರ ಸಂಸತ್ತಿನಲ್ಲಿ ಬೆಲೆ ಏರಿಕೆ ಕುರಿತು ಚರ್ಚೆ ನಡೆಸಲಾಗುವುದು ಎಂದು ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಕಳೆದ ವಾರ ಭರವಸೆ ನೀಡಿದ್ದರು. ಇತರ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಹಣದುಬ್ಬರ ನಿಯಂತ್ರಣದಲ್ಲಿದೆ ಎಂದು ಸಚಿವರು ಹೇಳಿದರು.

ಕಳೆದ ವಾರದ ಕೊನೆಯಲ್ಲಿ ಗುಜರಾತ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಕಾರ್ಯಕ್ರಮ ಸೇರಿದಂತೆ ಅಧಿಕೃತ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದ ಸೀತಾರಾಮನ್ ಈಗ ಕೋವಿಡ್‌ ಸೋಂಕಿನಿಂದ ಗುಣಮುಖರಾಗಿದ್ದಾರೆ. 

ಹಣದುಬ್ಬರ ವಿಚಾರಕ್ಕೆ ಬರುವುದಾದರೆ, ಜೂನ್‌ನಲ್ಲಿ ಸತತ ಆರನೇ ತಿಂಗಳಿಗೆ ಭಾರತದ ಚಿಲ್ಲರೆ ಹಣದುಬ್ಬರವು ಭಾರತೀಯ ರಿಸರ್ವ್ ಬ್ಯಾಂಕ್‌ನ ಮೇಲಿನ ಸಹಿಷ್ಣುತೆಯ ಬ್ಯಾಂಡ್ 6 ಶೇಕಡಾವನ್ನು ಮೀರಿದೆ. ಚಿಲ್ಲರೆ ಹಣದುಬ್ಬರವು ಜೂನ್‌ನಲ್ಲಿ ಶೇ 7.01 ರಷ್ಟಿತ್ತು. ಜೂನ್‌ನಲ್ಲಿ ಸಗಟು ಹಣದುಬ್ಬರವು ಶೇಕಡಾ 15.18 ರಷ್ಟಿದೆ ಎಂದು ಅಧಿಕೃತ ಅಂಕಿಅಂಶಗಳು ತೋರಿಸಿವೆ. ಜೂನ್‌ನ ಸಗಟು ಹಣದುಬ್ಬರವು ಹಿಂದಿನ ತಿಂಗಳಲ್ಲಿ ವರದಿಯಾದ 15.88 ಶೇಕಡಾಕ್ಕಿಂತ ಸ್ವಲ್ಪ ಕಡಿಮೆಯಾಗಿದೆ. ಸಗಟು ಬೆಲೆ ಸೂಚ್ಯಂಕ (ಡಬ್ಲ್ಯುಪಿಐ) ಆಧಾರಿತ ಹಣದುಬ್ಬರವು ಈಗ ಸತತವಾಗಿ 15 ತಿಂಗಳುಗಳಿಂದ ಎರಡಂಕಿಯಲ್ಲಿದೆ.

ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ, ಹಣದುಬ್ಬರ, ಬೆಲೆ ಏರಿಕೆ ಮತ್ತು ದೈನಂದಿನ ಅಗತ್ಯ ವಸ್ತುಗಳ ಮೇಲಿನ ಜಿಎಸ್‌ಟಿ ಹೆಚ್ಚಳದ ವಿಷಯಗಳ ಕುರಿತು ಪ್ರತಿಪಕ್ಷಗಳ ಸದಸ್ಯರ ಗದ್ದಲದ ನಡುವೆ ಕಲಾಪವನ್ನು ಹಲವು ಬಾರಿ ಮುಂದೂಡಲಾಯಿತು. ಕಾಂಗ್ರೆಸ್, ಎನ್‌ಸಿಪಿ, ಡಿಎಂಕೆ ಮತ್ತು ಎಡಪಕ್ಷಗಳು ಸೇರಿದಂತೆ ವಿರೋಧ ಪಕ್ಷಗಳ ನಾಯಕರು ಮೊಸರು, ಬ್ರೆಡ್ ಮತ್ತು ಪನೀರ್‌ನಂತಹ ಸರಕುಗಳ ಮೇಲಿನ ಜಿಎಸ್‌ಟಿ ದರಗಳ ಹೆಚ್ಚಳವನ್ನು ಹಿಂಪಡೆಯುವಂತೆ ಒತ್ತಾಯಿಸಿ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com