ವಿರೋಧ ಪಕ್ಷಗಳನ್ನು ನಾಶಪಡಿಸಲು ಕೇಂದ್ರ ಸರ್ಕಾರ ಇ.ಡಿಯನ್ನು ಸಾಧನವನ್ನಾಗಿ ಮಾಡಿಕೊಂಡಿದೆ: ಕಾಂಗ್ರೆಸ್

ಲೋಕಸಭೆಯಲ್ಲಿ ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಅವರು ಸಂಸತ್ತಿನಲ್ಲಿ ಕೇಂದ್ರ ಸರ್ಕಾರವು ಇ.ಡಿಯನ್ನು ದುರ್ಬಳಕೆ ಮಾಡಿಕೊಂಡಿರುವ ವಿಚಾರವನ್ನು ಪ್ರಸ್ತಾಪಿಸಲು ಪಕ್ಷಕ್ಕೆ ಅವಕಾಶ ನೀಡುತ್ತಿಲ್ಲ ಎಂದು ಆರೋಪಿಸಿದರು.
ಅಧೀರ್ ರಂಜನ್ ಚೌಧರಿ
ಅಧೀರ್ ರಂಜನ್ ಚೌಧರಿ

ನವದೆಹಲಿ: ವಿರೋಧ ಪಕ್ಷಗಳನ್ನು ನಾಶಪಡಿಸಲು ಬಿಜೆಪಿ ನೇತೃತ್ವದ ಕೇಂದ್ರದ ಕೈಯಲ್ಲಿ ಜಾರಿ ನಿರ್ದೇಶನಾಲಯವು (ಇ.ಡಿ) ಸಾಧನವಾಗಿ ಮಾರ್ಪಟ್ಟಿದೆ ಎಂದು ಕಾಂಗ್ರೆಸ್ ಬುಧವಾರ ಆರೋಪಿಸಿದೆ.

ಲೋಕಸಭೆಯಲ್ಲಿ ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಅವರು ಸಂಸತ್ತಿನಲ್ಲಿ ಕೇಂದ್ರ ಸರ್ಕಾರವು ಇ.ಡಿಯನ್ನು ದುರ್ಬಳಕೆ ಮಾಡಿಕೊಂಡಿರುವ ವಿಚಾರವನ್ನು ಪ್ರಸ್ತಾಪಿಸಲು ಪಕ್ಷಕ್ಕೆ ಅವಕಾಶ ನೀಡುತ್ತಿಲ್ಲ ಎಂದು ಆರೋಪಿಸಿದರು.

ಸದ್ಯ ನಡೆಯುತ್ತಿರುವ ಹಣ ಅಕ್ರಮ ವರ್ಗಾವಣೆ ಪ್ರಕರಣದ ತನಿಖೆಯ ಭಾಗವಾಗಿ ಕಾಂಗ್ರೆಸ್ ಪಕ್ಷದ ಒಡೆತನದ ನ್ಯಾಷನಲ್ ಹೆರಾಲ್ಡ್ ಪತ್ರಿಕೆಯ ಮುಖ್ಯ ಕಚೇರಿ ಮತ್ತು ಇತರ ಸ್ಥಳಗಳ ಮೇಲೆ ಇ.ಡಿ ದಾಳಿ ನಡೆಸಿದ ಒಂದು ದಿನದ ನಂತರ ಚೌಧರಿ ಅವರು ಈ ಹೇಳಿಕೆ ನೀಡಿದ್ದಾರೆ.

'ಲೋಕಸಭೆಯಲ್ಲಿ ಕಾಂಗ್ರೆಸ್ ನಾಯಕರು ಕೇಂದ್ರದ ಇ.ಡಿ ದುರ್ಬಳಕೆಯ ವಿಚಾರವನ್ನು ಪ್ರಸ್ತಾಪಿಸಿದಾಗ ಮೂರು ಬಾರಿ ಸದನವನ್ನು ಮುಂದೂಡಿಕೆ ಮಾಡಿದ್ದಾರೆ. ಆಡಳಿತ ಪಕ್ಷವು ಈ ವಿಷಯವನ್ನು ಪ್ರಸ್ತಾಪಿಸಲು ನಮಗೆ ಅವಕಾಶ ನೀಡುತ್ತಿಲ್ಲ. ಸಂಸತ್ತಿನಲ್ಲಿ ನಮ್ಮ ವಿಷಯವನ್ನು ಮಂಡಿಸಲು ಸರ್ಕಾರ ಏಕೆ ಹೆದರುತ್ತಿದೆ' ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು.

ಚೌಧರಿ ಅವರು ಲೋಕಸಭೆಯಲ್ಲಿ ನ್ಯಾಷನಲ್ ಹೆರಾಲ್ಡ್ ಪತ್ರಿಕೆಯ ತನಿಖೆಯ ವಿಷಯವನ್ನು ಪ್ರಸ್ತಾಪಿಸಲು ಪ್ರಯತ್ನಿಸಿದರು. ಆದರೆ, ಸಭಾಪತಿ ಅವರಿಗೆ ಅವಕಾಶ ನೀಡಲಿಲ್ಲ.

ಹಣ ಅಕ್ರಮ ವರ್ಗಾವಣೆ ಪ್ರಕರಣದ ತನಿಖೆಗೆ ಸಂಬಂಧಿಸಿದಂತೆ ನ್ಯಾಷನಲ್ ಹೆರಾಲ್ಡ್ ಪತ್ರಿಕೆಯ ಆವರಣದ ಮೇಲಿನ ದಾಳಿ ಸೇರಿದಂತೆ ವಿವಿಧ ವಿಷಯಗಳ ಕುರಿತು ವಿರೋಧ ಪಕ್ಷದ ಸದಸ್ಯರ ಪ್ರತಿಭಟನೆಯ ನಡುವೆ ಲೋಕಸಭೆಯ ಕಲಾಪವನ್ನು ಮಧ್ಯಾಹ್ನ 2 ಗಂಟೆಗೆ ಮುಂದೂಡಲಾಯಿತು.

ರಾಷ್ಟ್ರೀಯ ಚಳುವಳಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಕಾಂಗ್ರೆಸ್ ಮತ್ತು ಪತ್ರಿಕೆಯ ಇಮೇಜ್‌ಗೆ ಕಳಂಕ ತರಲು ಇ.ಡಿಯನ್ನು ಬಳಸಲಾಗುತ್ತಿದೆ ಎಂದು ಚೌಧರಿ ಆರೋಪಿಸಿದರು.

'ಸ್ವಾತಂತ್ರ್ಯ ಹೋರಾಟದ ಧ್ವನಿಯಾದ ನ್ಯಾಷನಲ್ ಹೆರಾಲ್ಡ್ ಪತ್ರಿಕೆಯ ಪ್ರತಿಷ್ಠೆಯನ್ನು ಕೆಟ್ಟ ಉದ್ದೇಶದಿಂದ ಹಾಳು ಮಾಡಲಾಗುತ್ತಿದೆ. ಇ.ಡಿಯನ್ನು ದುರುಪಯೋಗಪಡಿಸಿಕೊಳ್ಳಲಾಗುತ್ತಿದೆ ಮತ್ತು ನಮ್ಮ ವಿರುದ್ಧ ಷಡ್ಯಂತ್ರ ರೂಪಿಸಲಾಗಿದೆ. ಇ.ಡಿಯನ್ನು ದುರುಪಯೋಗ ಪಡಿಸಿಕೊಳ್ಳುವ ಮೂಲಕ ಪ್ರತಿಪಕ್ಷಗಳ ಸರ್ಕಾರಗಳನ್ನು ಅಸ್ಥಿರಗೊಳಿಸಲಾಗುತ್ತಿದೆ' ಎಂದು ಕಾಂಗ್ರೆಸ್ ನಾಯಕ ಹೇಳಿದರು.

'ಇ.ಡಿ ವಿರೋಧ ಪಕ್ಷಗಳನ್ನು ನಾಶಮಾಡಲು ಮತ್ತು ಪ್ರತಿಪಕ್ಷಗಳ ರಾಜ್ಯ ಸರ್ಕಾರಗಳನ್ನು ಅಸ್ಥಿರಗೊಳಿಸಲು ಸರ್ಕಾರದ ಕೈಯಲ್ಲಿನ ಒಂದು ಸಾಧನವಾಗಿ ಬದಲಾಗಿದೆ. ಪ್ರಧಾನಿ ನರೇಂದ್ರ ಮೋದಿಗೆ ಕಾಂಗ್ರೆಸ್ ಮುಕ್ತ ಭಾರತ ಮಾತ್ರವಲ್ಲ, ವಿರೋಧ ಪಕ್ಷಗಳು ಮುಕ್ತ ಭಾರತ ಬೇಕು. ಇದನ್ನೆಲ್ಲ ಮುಂದಿಡಲು ನಮಗೆ ಎರಡು ನಿಮಿಷ ಬೇಕು. ಆದರೆ, ಅವಕಾಶ ನೀಡುತ್ತಿಲ್ಲ' ಎಂದು ದೂರಿದರು.

ನ್ಯಾಷನಲ್ ಹೆರಾಲ್ಡ್ ಕಚೇರಿ ಮೇಲಿನ ಇ.ಡಿ ದಾಳಿಯನ್ನು ಕಾಂಗ್ರೆಸ್ ಮಂಗಳವಾರ 'ರಾಜಕೀಯ ಅಜೆಂಡಾ' ಎಂದು ಬಣ್ಣಿಸಿದೆ. ಅಲ್ಲದೆ, ಅಂತಹ ಕ್ರಮಗಳಿಗೆ ಹೆದರುವುದಿಲ್ಲ ಮತ್ತು ಸರ್ಕಾರದ ವೈಫಲ್ಯಗಳನ್ನು ಬಹಿರಂಗಪಡಿಸುವುದನ್ನು ಮುಂದುವರಿಸುವುದಾಗಿ ಹೇಳಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com