ಮಹಿಳಾ ಟೆಕ್ಕಿ ಸಾವು: ಪೊಲೀಸ್ ಪೇದೆ, ಆಕೆಯ ಸಹೋದ್ಯೋಗಿಯ ಬಂಧನ; ಮತ್ತೋರ್ವನಿಗಾಗಿ ಹುಡುಕಾಟ

ಬಂಧಿತ ಪೊಲೀಸ್ ಕಾನ್ಸ್‌ಟೇಬಲ್ ನೋಯ್ಡಾ ಸೆಕ್ಟರ್ 49ರ ಪೊಲೀಸ್ ಠಾಣೆಯಲ್ಲಿ ಕಂಪ್ಯೂಟರ್ ಆಪರೇಟರ್ ಆಗಿ ಕೆಲಸ ಮಾಡುತ್ತಿದ್ದರೆ, ಮತ್ತೋರ್ವ ಪ್ರಮುಖ ಎಂಎನ್‌ಸಿಯಲ್ಲಿ ಕೆಲಸ ಮಾಡುತ್ತಿದ್ದ ಮೃತ ಮಹಿಳೆಯ ಸಹೋದ್ಯೋಗಿಯಾಗಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸಾವಿಗೀಡಾಗಿದ್ದ ಮಹಿಳಾ ಟೆಕ್ಕಿ
ಸಾವಿಗೀಡಾಗಿದ್ದ ಮಹಿಳಾ ಟೆಕ್ಕಿ

ನೋಯ್ಡಾ: ಇಲ್ಲಿನ ಹೋಟೆಲ್‌ನಲ್ಲಿ ಆಗಸ್ಟ್ 2 ರಂದು 26 ವರ್ಷದ ಮಹಿಳಾ ಟೆಕ್ಕಿಯ ಶವ ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ನೋಯ್ಡಾ ಪೊಲೀಸರು ಕಾನ್‌ಸ್ಟೇಬಲ್ ಮತ್ತು ಐಟಿ ವೃತ್ತಿಪರರೊಬ್ಬರನ್ನು ಬಂಧಿಸಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ಪೊಲೀಸ್ ಕಾನ್ಸ್‌ಟೇಬಲ್ ನೋಯ್ಡಾ ಸೆಕ್ಟರ್ 49ರ ಪೊಲೀಸ್ ಠಾಣೆಯಲ್ಲಿ ಕಂಪ್ಯೂಟರ್ ಆಪರೇಟರ್ ಆಗಿ ಕೆಲಸ ಮಾಡುತ್ತಿದ್ದರೆ, ಮತ್ತೋರ್ವ ಪ್ರಮುಖ ಎಂಎನ್‌ಸಿಯಲ್ಲಿ ಕೆಲಸ ಮಾಡುತ್ತಿದ್ದ ಮೃತ ಮಹಿಳೆಯ ಸಹೋದ್ಯೋಗಿಯಾಗಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಹಂತ 2ರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಹಿಳೆ ಆಗಸ್ಟ್ 2 ರಂದು ಹೋಟೆಲ್ ಕೊಠಡಿಯೊಳಗೆ ಸೀಲಿಂಗ್ ಫ್ಯಾನ್‌ಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಇದನ್ನು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿತ್ತು.

ಯುವತಿಯ ಕುಟುಂಬದವರು ಶಂಕೆ ವ್ಯಕ್ತಪಡಿಸಿದ್ದರಿಂದ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 376 (ಅತ್ಯಾಚಾರ) ಮತ್ತು 302 (ಕೊಲೆ) ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿತ್ತು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

'ಪೊಲೀಸ್ ಪೇದೆ ಮತ್ತು ಮಹಿಳೆಯ ಸಹೋದ್ಯೋಗಿ ಇಬ್ಬರನ್ನೂ ಶುಕ್ರವಾರ ಸಂಜೆ ಬಂಧಿಸಲಾಗಿದೆ. ಮೂವರು ಪರಸ್ಪರ ಸ್ನೇಹಿತರಾಗಿದ್ದರು. ಮಹಿಳೆ ಸಾವಿನಲ್ಲಿ ಇಬ್ಬರದ್ದೂ ಪಾತ್ರವಿರುವ ಬಗ್ಗೆ ತಿಳಿದುಬಂದಿದ್ದು, ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ' ಎಂದು ಅಧಿಕಾರಿ ತಿಳಿಸಿದ್ದಾರೆ.

ಎಫ್‌ಐಆರ್‌ನಲ್ಲಿ ಆರೋಪಿ ಎಂದು ಹೆಸರಿಸಲಾಗಿರುವ ಮಹಿಳೆಯ ಮತ್ತೊಬ್ಬ ಸಹೋದ್ಯೋಗಿ ಪರಾರಿಯಾಗಿದ್ದು, ಆತನ ಬಂಧನಕ್ಕಾಗಿ ಶೋಧಕಾರ್ಯ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.

ಈನ್ಮಧ್ಯೆ, ಬಂಧಿತ ಪೊಲೀಸ್ ಪೇದೆಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ಸೇವೆಯಿಂದ ಅಮಾನತುಗೊಳಿಸಲಾಗಿದೆ ಮತ್ತು ಅವರ ವಿರುದ್ಧ ಇಲಾಖಾ ವಿಚಾರಣೆಯನ್ನು ಪ್ರಾರಂಭಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮರಣೋತ್ತರ ಪರೀಕ್ಷೆಯ ವರದಿಯು ಅತ್ಯಾಚಾರವಾಗಿರುವುದನ್ನು ತಳ್ಳಿಹಾಕಿದೆ. ಆದರೆ, ನೇಣು ಹಾಕಿರುವ ಪರಿಣಾಮವಾಗಿ ಉಸಿರುಕಟ್ಟಿ ಅವರು ಮೃತಪಟ್ಟಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಪ್ರಕರಣ ಸಂಬಂಧ ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com