ಗುಜರಾತ್: ಆನಂದ್ ಜಿಲ್ಲೆಯಲ್ಲಿ ಭೀಕರ ಅಪಘಾತ; ಕಾರು, ಆಟೋ, ಬೈಕ್ ಡಿಕ್ಕಿಯಾಗಿ 6 ಮಂದಿ ಸಾವು
ಗುಜರಾತ್ ರಾಜ್ಯದ ಆನಂದ್ ಜಿಲ್ಲೆಯಲ್ಲಿ ಕಾರು- ಆಟೋ ರಿಕ್ಷಾ ಮತ್ತು ಬೈಕ್ ಡಿಕ್ಕಿಯಾಗಿ ಆರು ಜನರು ಮೃತಪಟ್ಟಿರುವ ದುರ್ಘಟನೆ ಕಳೆದ ರಾತ್ರಿ ನಡೆದಿದೆ.
Published: 12th August 2022 08:47 AM | Last Updated: 12th August 2022 01:01 PM | A+A A-

ಅಪಘಾತಗೊಂಡ ವಾಹನಗಳು
ಆನಂದ್(ಗುಜರಾತ್): ಗುಜರಾತ್ ರಾಜ್ಯದ ಆನಂದ್ ಜಿಲ್ಲೆಯಲ್ಲಿ ಕಾರು- ಆಟೋ ರಿಕ್ಷಾ ಮತ್ತು ಬೈಕ್ ಡಿಕ್ಕಿಯಾಗಿ ಆರು ಜನರು ಮೃತಪಟ್ಟಿರುವ ದುರ್ಘಟನೆ ಕಳೆದ ರಾತ್ರಿ ನಡೆದಿದೆ.
ದುರ್ಘಟನೆಯಲ್ಲಿ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದರೆ, ನಾಲ್ವರು ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಅಸುನೀಗಿದ್ದಾರೆ. ಮೃತರಲ್ಲಿ ಇಬ್ಬರು ಸಹೋದರಿಯರು ಹಾಗೂ ಅವರ ತಾಯಿ ಸೇರಿದಂತೆ ಒಂದೇ ಕುಟುಂಬದ ಮೂವರು ಸೇರಿದ್ದಾರೆ. ನಿನ್ನೆ ರಾತ್ರಿ 7 ಗಂಟೆ ಸುಮಾರಿಗೆ ಕಾರು, ಬೈಕ್ ಮತ್ತು ಆಟೋ ರಿಕ್ಷಾ ನಡುವೆ ಸಂಭವಿಸಿದ ಅಪಘಾತದಲ್ಲಿ ಆರು ಮಂದಿ ಸಾವನ್ನಪ್ಪಿದ್ದಾರೆ ಎಂದು ಆನಂದ್‌ನ ಸಹಾಯಕ ಪೊಲೀಸ್ ವರಿಷ್ಠಾಧಿಕಾರಿ ಅಭಿಷೇಕ್ ಗುಪ್ತಾ ತಿಳಿಸಿದ್ದಾರೆ.
ಸೋಜಿತ್ರಾ ತಾಲೂಕಿನ ದಾಳಿ ಗ್ರಾಮದ ಬಳಿ ಜಿಜೆ-23-ಸಿಡಿ-4404 ಸಂಖ್ಯೆಯ ಕಾರು ಆಟೋ ರಿಕ್ಷಾ ಮತ್ತು ಬೈಕ್‌ಗೆ ಡಿಕ್ಕಿ ಹೊಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆಟೋ ರಿಕ್ಷಾ ಚಾಲಕ ಮತ್ತು ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟರೆ, ಆಟೋ ರಿಕ್ಷಾದಲ್ಲಿ ಸವಾರಿ ಮಾಡುತ್ತಿದ್ದ ಇತರ ಮೂವರು ಮತ್ತು ಬೈಕ್ ನಲ್ಲಿದ್ದ ಹಿಂಬದಿ ಸವಾರ ಗಾಯಗೊಂಡು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ಕುಟುಂಬಸ್ಥರು ನಿನ್ನೆ ರಕ್ಷಾಬಂಧನ ಆಚರಿಸಿ ಮನೆಗೆ ವಾಪಸ್ಸಾಗುತ್ತಿದ್ದ ವೇಳೆ ಆನಂದ್ ಬಳಿಯ ಸೋಜಿತ್ರಾ ಬಳಿ ಅಪಘಾತ ಸಂಭವಿಸಿದೆ.
ಈ ಮಧ್ಯೆ, ಆನಂದ್ ಪೊಲೀಸರು, ಆರೋಪಿಯನ್ನು ಬಂಧಿಸಲಾಗಿದೆ. ಐಪಿಸಿ ಸೆಕ್ಷನ್ 304ರಡಿ ಆರೋಪಿಯನ್ನು ಬಂಧಿಸಲಾಗಿದೆ. ಆರು ಮೃತರ ವಿವರಗಳು ಪತ್ತೆಯಾಗಿವೆ. ಆರೋಪಿ ಕೇತನ್ ಪಾಧಿಯಾರ್ ಕಾಂಗ್ರೆಸ್ ಶಾಸಕರ ಅಳಿಯನಾಗಿದ್ದಾರೆ ಎಂದಿದ್ದಾರೆ. ಕಾಂಗ್ರೆಸ್ ಶಾಸಕ ಪೂನಂಭಾಯಿ ಪರ್ಮಾರ್ ಅವರ ಸಂಬಂಧಿ ಕೇತನ್ ಪಾಧಿಯಾರ್ ಹೆಸರಿನಲ್ಲಿ ಕಾರು ನೋಂದಣಿಯಾಗಿದೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.