
ಸಂಗ್ರಹ ಚಿತ್ರ
ಬೀಡ್: ಮಹಾರಾಷ್ಟ್ರದ ಬೀಡ್ ಜಿಲ್ಲೆಯಲ್ಲಿ ಭಾನುವಾರ ಬೆಳಗ್ಗೆ ಕಾರು ಮತ್ತು ಟೆಂಪೋ ಮುಖಾಮುಖಿ ಡಿಕ್ಕಿಯಾಗಿ ಆರು ಮಂದಿ ಮೃತಪಟ್ಟಿರೋ ದಾರುಣ ಘಟನೆ ನಡೆದಿದೆ.
ಮಂಜರಸುಂಬ-ಪಟೋಡ ಹೆದ್ದಾರಿಯಲ್ಲಿ ಮುಂಜಾನೆ 5.30ರ ಸುಮಾರಿಗೆ ಅಪಘಾತ ಸಂಭವಿಸಿದೆ.
ಪ್ರಾಥಮಿಕ ಮಾಹಿತಿಯ ಪ್ರಕಾರ, ಕೇಜ್ ತಹಸಿಲ್‌ನ ಜಿವಾಚಿವಾಡಿ ಗ್ರಾಮದ ಕುಟುಂಬವೊಂದು ಮದುವೆ ಸಮಾರಂಭದಲ್ಲಿ ಭಾಗವಹಿಸಲು ಪುಣೆಗೆ ಕಾರಿನಲ್ಲಿ ಹೋಗುತ್ತಿದ್ದಾಗ ಅವರ ವಾಹನ ಮತ್ತು ಟೆಂಪೋ ಪರಸ್ಪರ ಡಿಕ್ಕಿ ಹೊಡೆದಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಒಂದೇ ಕುಟುಂಬದ ಐವರು ಸೇರಿದಂತೆ ಒಟ್ಟು 6 ಮಂದಿ ರಸ್ತೆಯ ಮೇಲೆ ಪ್ರಾಣಬಿಟ್ಟಿದ್ದಾರೆ. ಅಪಘಾತದ ಭೀಕರತೆ ಹೇಗಿತ್ತೆಂದರೆ ಎರಡು ವಾಹನಗಳನ್ನು ಬೇರ್ಪಡಿಸಲು ಪೊಲೀಸರು ಕ್ರೇನ್ ಬಳಸಬೇಕಾಯಿತು ಎಂದು ಅವರು ಹೇಳಿದರು.
ಸಂತ್ರಸ್ತರನ್ನು ಗುರುತಿಸುವ ಪ್ರಕ್ರಿಯೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.