ಅಮಿತ್ ಶಾ- ಜೂನಿಯರ್ ಎನ್ ಟಿಆರ್ ಮಾತುಕತೆ: ಕುತೂಹಲ ಹುಟ್ಟುಹಾಕಿದ ಭೇಟಿ; ರಾಜಕೀಯ ಊಹಾಪೋಹ ಸೃಷ್ಟಿ

ಸೋಷಿಯಲ್ ಮೀಡಿಯಾದಲ್ಲಿ ನಿನ್ನೆಯಿಂದ ಒಂದು ಫೋಟೋ-ವಿಡಿಯೊ ದೊಡ್ಡ ಮಟ್ಟದಲ್ಲಿ ಹರಿದಾಡುತ್ತಿದ್ದು ಸಂಚಲನ ಸೃಷ್ಟಿಸಿದೆ. ತೆಲಂಗಾಣದಲ್ಲಿ ನಿನ್ನೆ ಭಾನುವಾರ ನಡೆದ 'ಮುನುಗೋಡು ಸಮರಭೇರಿ' ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಲು ಕೇಂದ್ರ ಗೃಹ ಸಚಿವ ಅಮಿತ್ ಶಾ ಆಗಮಿಸಿದ್ದರು. 
ಅಮಿತ್ ಶಾ-ಜೂ.ಎನ್ ಟಿಆರ್ ಮಾತುಕತೆ
ಅಮಿತ್ ಶಾ-ಜೂ.ಎನ್ ಟಿಆರ್ ಮಾತುಕತೆ

ಹೈದರಾಬಾದ್: ಸೋಷಿಯಲ್ ಮೀಡಿಯಾದಲ್ಲಿ ನಿನ್ನೆಯಿಂದ ಒಂದು ಫೋಟೋ-ವಿಡಿಯೊ ದೊಡ್ಡ ಮಟ್ಟದಲ್ಲಿ ಹರಿದಾಡುತ್ತಿದ್ದು ಸಂಚಲನ ಸೃಷ್ಟಿಸಿದೆ. ತೆಲಂಗಾಣದಲ್ಲಿ ನಿನ್ನೆ ಭಾನುವಾರ ನಡೆದ 'ಮುನುಗೋಡು ಸಮರಭೇರಿ' ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಲು ಕೇಂದ್ರ ಗೃಹ ಸಚಿವ ಅಮಿತ್ ಶಾ ಆಗಮಿಸಿದ್ದರು. 

ಅದಷ್ಟೇ ಆಗುತ್ತಿದ್ದರೆ ಸುದ್ದಿಯಾಗುತ್ತಿರಲಿಲ್ಲ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಟಿಡಿಪಿ ಸಂಸ್ಥಾಪಕ ಮತ್ತು ಸಂಯುಕ್ತ ಆಂಧ್ರಪ್ರದೇಶದ ಮಾಜಿ ಸಿಎಂ ದಿವಂಗತ ಎನ್‌ಟಿ ರಾಮರಾವ್ ಅವರ ಮೊಮ್ಮಗ ಟಾಲಿವುಡ್ ನಟ ಜೂನಿಯರ್ ಎನ್‌ಟಿಆರ್ ಅವರನ್ನು ಭೇಟಿ ಮಾಡಿದ್ದಾರೆ. ಇದು ರಾಜಕೀಯ ಊಹಾಪೋಹಗಳಿಗೆ ಸುದ್ದಿ ಮಾಡಿಕೊಟ್ಟಿದೆ. ಭಾನುವಾರ ರಾತ್ರಿ ಶಂಶಾಬಾದ್‌ನ ನೊವೊಟೆಲ್ ಹೋಟೆಲ್‌ನಲ್ಲಿ ಇಬ್ಬರೂ ಸುಮಾರು 10-15 ನಿಮಿಷಗಳ ಕಾಲ ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ತುಂಬಾ ಆತ್ಮೀಯವಾಗಿ ಮಾತನಾಡಿದ್ದಾರೆ.

2009ರ ವಿಧಾನಸಭೆ ಚುನಾವಣೆಯಲ್ಲಿ ಜೂನಿಯರ್ ಎನ್ ಟಿಆರ್ ಟಿಡಿಪಿ ಪರ ಪ್ರಚಾರ ಮಾಡಿದ್ದರು. ಆದರೆ ನಂತರ ರಾಜಕೀಯದಿಂದ ಹಿಂದೆ ಸರಿದು ತಮ್ಮ ಸಿನಿ ವೃತ್ತಿಯತ್ತ ಗಮನ ಹರಿಸಿದರು. ಅವರ ಚಿಕ್ಕಪ್ಪ ಮತ್ತು ಆಂಧ್ರ ಪ್ರದೇಶದ ಮಾಜಿ ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು ಅವರೊಂದಿಗಿನ ಸಂಬಂಧ ಇತ್ತೀಚಿನ ದಿನಗಳಲ್ಲಿ ಅಷ್ಟೊಂದು ಉತ್ತಮವಾಗಿಲ್ಲ. 
ರಾಜಮೌಳಿ ನಿರ್ದೇಶನದ ಇತ್ತೀಚೆಗೆ ತೆರೆಕಂಡ ಆರ್‌ಆರ್‌ಆರ್ ಚಿತ್ರದಲ್ಲಿ ಜೂನಿಯರ್ ಎನ್‌ಟಿಆರ್ ಅಭಿನಯವನ್ನು ಮೆಚ್ಚಿ ಅಮಿತ್ ಶಾ ಮನಸಾರೆ ಹೊಗಳಿದ್ದಾರೆ. ಅಮಿತ್ ಶಾ ತಮ್ಮ ಬಿಡುವಿಲ್ಲದ ಸಮಯ ನಡುವೆ ಜೂನಿಯರ್ ಎನ್‌ಟಿಆರ್‌ಗೆ ಸಮಯಾವಕಾಶ ನೀಡಿ ಭೇಟಿ ಮಾಡಿದ್ದಾರೆ. ಆರ್‌ಆರ್‌ಆರ್ ಆಸ್ಕರ್‌ಗೆ ನಾಮನಿರ್ದೇಶನಗೊಳ್ಳುತ್ತಿದೆ ಎಂದು ಕೂಡ ಇತ್ತೀಚೆಗೆ ಸುದ್ದಿಯಾಗಿತ್ತು.

ಬಿಜೆಪಿ ಮೂಲಗಳ ಪ್ರಕಾರ, ಶಾ ಮತ್ತು ಜೂನಿಯರ್ ಎನ್‌ಟಿಆರ್ ನಡುವಿನ ಅನೌಪಚಾರಿಕ ಖಾಸಗಿ ಮಾತುಕತೆಯು ಆರ್‌ಆರ್‌ಆರ್ ಯಶಸ್ಸಿನ ಮೇಲೆ ಹೆಚ್ಚಾಗಿತ್ತು. ಆದರೆ ಇಲ್ಲಿ ಗಮನಿಸಬೇಕಾದ ವಿಚಾರವೆಂದರೆ ಜೂನಿಯರ್ ಎನ್‌ಟಿಆರ್ ಅವರನ್ನು ಮಾತ್ರ ಶಾ ಭೇಟಿ ಮಾಡಿದ್ದಾರೆ. ಚಲನಚಿತ್ರದ ನಿರ್ದೇಶಕ ಎಸ್‌ಎಸ್ ರಾಜಮೌಳಿ ಅವರನ್ನು ಭೇಟಿ ಮಾಡಿಲ್ಲ, ಅವರ ತಂದೆ ಎಸ್‌ಎಸ್ ವಿಜಯೇಂದ್ರ ಪ್ರಸಾದ್ ಅವರನ್ನು ರಾಜ್ಯಸಭೆಗೆ ನಾಮನಿರ್ದೇಶನ ಮಾಡಿದ್ದರೂ, ಜೂನಿಯರ್ ಎನ್‌ಟಿಆರ್ ಅವರೊಂದಿಗೆ ಶಾ ನಡೆಸಿದ ಮಾತುಕತೆ ರಾಜಕೀಯ ವಿಷಯದ ಬಗ್ಗೆ ಊಹಾಪೋಹಗಳಿಗೆ ಕಾರಣವಾಗಿದೆ.

ಜ್ಯೂನಿಯರ್ ಎನ್‌ಟಿಆರ್‌ಗೆ ಆಂಧ್ರ ಮತ್ತು ತೆಲಂಗಾಣದಲ್ಲಿ ಸಾಕಷ್ಟು ಅಭಿಮಾನಿಗಳಿದ್ದಾರೆ. ತೆಲಂಗಾಣದಲ್ಲಿ ಕಮ್ಮ ವೋಟ್ ಬ್ಯಾಂಕ್ ನ್ನು ಸೆಳೆಯಲು ಬಿಜೆಪಿಯು ಜ್ಯೂನಿಯರ್ ಎನ್ ಟಿಆರ್ ಅವರ ಸ್ಟಾರ್ ಗಿರಿಯನ್ನು ಸೆಳೆಯಲು ಯತ್ನಿಸುತ್ತಿದ್ದು ನಟ ಬಿಜೆಪಿ ಪರವಾಗಿದ್ದಾರೆ ಎಂದು ಜನರ ಮನಸ್ಸಿನಲ್ಲಿ ಮೂಡುವಂತೆ ಮಾಡಲು ಪ್ರಯತ್ನಗಳು ನಡೆಯುತ್ತಿವೆ ಎಂದು ಹೇಳಲಾಗುತ್ತಿದೆ.

ಬಿಜೆಪಿಯು ಸಿನಿಮಾ ನಟ ನಟಿಯರನ್ನು ತಮ್ಮ ಪಕ್ಷದ ವ್ಯವಹಾರಗಳಲ್ಲಿ ಮತ್ತು ರಾಜಕೀಯ ಪ್ರಚಾರಗಳಲ್ಲಿ ಬಳಸಿಕೊಳ್ಳುತ್ತಿರುವುದು ಇದೇ ಮೊದಲಲ್ಲ. ನಟಿ ವಿಜಯಶಾಂತಿ, ಹಾಸ್ಯನಟ ಮತ್ತು ಮಾಜಿ ಶಾಸಕ ಬಾಬು ಮೋಹನ್, ಹಿರಿಯ ನಟಿ ಗೌತಮಿ, ಮಾಜಿ ಸಂಸದ ಮತ್ತು ಹಿರಿಯ ಟಾಲಿವುಡ್ ನಟ ಕೃಷ್ಣಂ ರಾಜು ಅವರ ಸೇವೆಗಳನ್ನು ಕೇಸರಿ ಪಕ್ಷವು ಹಿಂದೆ ಬಳಸಿಕೊಂಡಿತ್ತು.

ನಿನ್ನೆ ಭಾನುವಾರ ಸಂಜೆ ಮುನುಗೋಡಿನಲ್ಲಿ ನಡೆದ ಸಾರ್ವಜನಿಕ ಸಭೆಯ ಮುಕ್ತಾಯದ ನಂತರ ಅಮಿತ್ ಶಾ ಅವರು ಮಾಧ್ಯಮ ಉದ್ಯಮಿ ಚೆರುಕುರಿ ರಾಮೋಜಿ ರಾವ್ ಅವರನ್ನು ಭೇಟಿ ಮಾಡಿದ್ದಾರೆ, ರಾಮೋಜಿ ಫಿಲ್ಮ್ ಸಿಟಿಯಲ್ಲಿ 20 ನಿಮಿಷಗಳ ಕಾಲ ಅವರೊಂದಿಗೆ ಖಾಸಗಿಯಾಗಿ ಭೇಟಿಯಾದರು. ಕೇಂದ್ರ ಪ್ರವಾಸೋದ್ಯಮ ಮತ್ತು ಸಂಸ್ಕೃತಿ ಖಾತೆ ಸಚಿವ ಜಿ ಕಿಶನ್ ರೆಡ್ಡಿ ಮತ್ತು ಇತರ ಮುಖಂಡರು ಅವರೊಂದಿಗೆ ಉಪಸ್ಥಿತರಿದ್ದರೂ, ಇಬ್ಬರ ನಡುವೆ ಖಾಸಗಿಯಾಗಿ ಸಭೆ ನಡೆಯಿತು. ಆ ಸಭೆಯಲ್ಲಿ ಮಾಜಿ ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು ಹಾಜರಿದ್ದರು ಎಂಬುದನ್ನು ಬಿಜೆಪಿ ನಾಯಕರು ಖಚಿತಪಡಿಸಿಯೂ ಇಲ್ಲ ನಿರಾಕರಿಸಿಯೂ ಇಲ್ಲ.

ನಿನ್ನೆ ಭಾನುವಾರ ಮಧ್ಯಾಹ್ನ ಬೇಗಂಪೇಟೆ ವಿಮಾನ ನಿಲ್ದಾಣದಲ್ಲಿ ಬಂದಿಳಿದ ಅಮಿತ್ ಶಾ ಅವರು ಸಿಕಂದರಾಬಾದ್‌ನ ಪ್ರಸಿದ್ಧ ಉಜ್ಜೈನಿ ಮಹಾಂಕಾಳಿ ದೇವಸ್ಥಾನಕ್ಕೆ ತೆರಳಿ ಪ್ರಾರ್ಥನೆ ಸಲ್ಲಿಸಿದರು, ನಂತರ ಅವರು ನೇರವಾಗಿ ಸಿಕಂದರಾಬಾದ್‌ನ ಸಾಂಬಮೂರ್ತಿ ನಗರ ಪ್ರದೇಶದಲ್ಲಿರುವ ಬಿಜೆಪಿಯ ಎಸ್‌ಸಿ ಮೋರ್ಚಾ ಕಾರ್ಯಕರ್ತ ಎನ್ ಸತ್ಯನಾರಾಯಣ ಅವರ ಮನೆಗೆ ತೆರಳಿದರು. ದೆಹಲಿಗೆ ಹಿಂತಿರುಗುವ ಮೊದಲು, ಶಾ ಅವರು ಪಕ್ಷದ ಆಯ್ದ ನಾಯಕರೊಂದಿಗೆ ಸಭೆ ನಡೆಸಿದರು. ಪಕ್ಷದಲ್ಲಿ ಭವಿಷ್ಯದ ಕ್ರಮಗಳ ಬಗ್ಗೆ ನಿರ್ದೇಶನಗಳನ್ನು ನೀಡಿದರು ಎಂದು ವರದಿಯಾಗಿದೆ.

ಬಿಜೆಪಿ ಮೂಲಗಳ ಪ್ರಕಾರ, ಶಾ ಮತ್ತು ಎನ್‌ಟಿಆರ್ ನಡುವಿನ ಅನೌಪಚಾರಿಕ ಖಾಸಗಿ ಸಂವಾದವು ಹೆಚ್ಚಾಗಿ RRR ಚಿತ್ರದ ಯಶಸ್ಸಿನ ಮೇಲೆ ಇತ್ತು. ಭೇಟಿ ಬಳಿಕ ಅಮಿತ್ ಶಾ ಅವರು, ಹೈದರಾಬಾದಿನಲ್ಲಿ ಅತ್ಯಂತ ಪ್ರತಿಭಾವಂತ ನಟ ಮತ್ತು ನಮ್ಮ ತೆಲುಗು ಚಿತ್ರರಂಗದ ರತ್ನ ಜೂನಿಯರ್ ಎನ್‌ಟಿಆರ್ ಅವರೊಂದಿಗೆ ಉತ್ತಮ ಸಂವಾದ ನಡೆಸಿದೆ ಎಂದು ಬರೆದುಕೊಂಡಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com