ಹುತಾತ್ಮ ಯೋಧರ ಕುಟುಂಬಕ್ಕೆ ಪರಿಹಾರವನ್ನು 1 ಲಕ್ಷ ರೂ. ನಿಂದ 1 ಕೋಟಿಗೆ ಹೆಚ್ಚಿಸಿದ ಗುಜರಾತ್ ಸರ್ಕಾರ!

ರಾಜ್ಯದಲ್ಲಿ ಪ್ರತಿಭಟನೆ ನಡೆಸುತ್ತಿರುವ ಮಾಜಿ ಯೋಧರನ್ನು ಸಮಾಧಾನಪಡಿಸುವ ಉದ್ದೇಶದಿಂದ ಗುಜರಾತ್ ಸರ್ಕಾರವು ಹುತಾತ್ಮ ಯೋಧರ ಕುಟುಂಬಗಳಿಗೆ ನೀಡುವ ಪರಿಹಾರವನ್ನು ಗಮನಾರ್ಹವಾಗಿ ಹೆಚ್ಚಳ ಮಾಡಿದೆ.
ಭಾರತೀಯ ಯೋಧ
ಭಾರತೀಯ ಯೋಧ

ಅಹಮದಾಬಾದ್: ರಾಜ್ಯದಲ್ಲಿ ಪ್ರತಿಭಟನೆ ನಡೆಸುತ್ತಿರುವ ಮಾಜಿ ಯೋಧರನ್ನು ಸಮಾಧಾನಪಡಿಸುವ ಉದ್ದೇಶದಿಂದ ಗುಜರಾತ್ ಸರ್ಕಾರವು ಹುತಾತ್ಮ ಯೋಧರ ಕುಟುಂಬಗಳಿಗೆ ನೀಡುವ ಪರಿಹಾರವನ್ನು ಗಮನಾರ್ಹವಾಗಿ ಹೆಚ್ಚಳ ಮಾಡಿದೆ.

ಕರ್ತವ್ಯದ ವೇಳೆ ಸಾವನ್ನಪ್ಪಿದ ಯೋಧನ ಪತ್ನಿ ಅಥವಾ ಕುಟುಂಬಕ್ಕೆ ನೀಡುವ ಪರಿಹಾರವನ್ನು ಪ್ರಸ್ತುತ 1 ಲಕ್ಷದಿಂದ 1 ಕೋಟಿಗೆ ಹೆಚ್ಚಿಸಲಾಗಿದೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ. ಇದೇ ವೇಳೆ ಶೌರ್ಯ ಪದಕ ವಿಜೇತರಿಗೆ ನೀಡಲಾಗುವ ನಗದು ಬಹುಮಾನಗಳಲ್ಲಿ ಗಮನಾರ್ಹ ಹೆಚ್ಚಳ ಮಾಡಲಾಗಿದೆ.

ಗುಜರಾತಿನ 500 ಮಾಜಿ ಸೈನಿಕರು ಬೆಳಿಗ್ಗೆ ಗಾಂಧಿನಗರದಲ್ಲಿ ಜಮಾಯಿಸಿ ಹುತಾತ್ಮ ಯೋಧರ ಕುಟುಂಬಗಳಿಗೆ ಹೆಚ್ಚಿನ ಪರಿಹಾರ ಸೇರಿದಂತೆ ತಮ್ಮ ಬಹುಕಾಲದ ಬೇಡಿಕೆಗಳು ಈಡೇರಿಸುವಂತೆ ಪ್ರತಿಭಟನೆ ನಡೆಸಿದ ಗಂಟೆಗಳ ನಂತರ ಈ ಘೋಷಣೆ ಮಾಡಲಾಗಿದೆ.

ಗುಜರಾತ್ ಪ್ರವಾಸದಲ್ಲಿರುವ ಆಮ್ ಆದ್ಮಿ ಪಕ್ಷದ(ಎಎಪಿ) ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ಈ ನಿರ್ಧಾರಕ್ಕೆ ಪ್ರತಿಕ್ರಿಯಿಸಿ, ಎರಡು ತಿಂಗಳು ರಾಜ್ಯಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಪ್ರತಿಭಟನಾ ನಿರತ ಮಾಜಿ ಸೈನಿಕರಿಗೆ ಇದೇ ರೀತಿಯ ಭರವಸೆ ನೀಡಿದ ಕೆಲವು ದಿನಗಳ ನಂತರ ರಾಜ್ಯ ಸರ್ಕಾರದ ಈ ಕ್ರಮವು ಬಂದಿದೆ ಎಂದು ಹೇಳಿದ್ದಾರೆ. ಅಲ್ಲದೆ ದೆಹಲಿಯಲ್ಲಿ ಮಾಡಿದಂತೆ ಹುತಾತ್ಮ ಪೊಲೀಸರಿಗೆ ಗುಜರಾತ್ ಸರ್ಕಾರ ರಕ್ಷಣೆ ನೀಡಬೇಕು ಎಂದು ಕೇಜ್ರಿವಾಲ್ ಆಗ್ರಹಿಸಿದರು.

ಒಂದು ವೇಳೆ ರಾಜ್ಯ ಸರ್ಕಾರ ವಿಫಲವಾದಲ್ಲಿ ಎಎಪಿ ಸರ್ಕಾರ ರಚಿಸಿದ ನಂತರ ಹಣ ಪಾವತಿಸಲು ಆರಂಭಿಸುತ್ತೇವೆ ಎಂದು ಕೇಜ್ರಿವಾಲ್ ಹೇಳಿದ್ದಾರೆ. ಏತನ್ಮಧ್ಯೆ, 1 ಕೋಟಿ ರೂಪಾಯಿಗಳ ಹೊಸ ಪರಿಹಾರವು ಮಾಜಿ ಸೈನಿಕರ ಬೇಡಿಕೆಗಳಿಗೆ ಅನುಗುಣವಾಗಿದ್ದರೂ, ಅವರ ಎಲ್ಲಾ 14 ಬೇಡಿಕೆಗಳನ್ನು ಸರ್ಕಾರ ಒಪ್ಪಿಕೊಂಡು ಸರ್ಕಾರಿ ನಿರ್ಣಯವನ್ನು (ಜಿಆರ್) ಹೊರಡಿಸಬೇಕೆಂದು ಅವರು ಬಯಸುತ್ತಾರೆ.

ಹುತಾತ್ಮ ಯೋಧನ ವಿಧವೆಯರಿಗೆ ಪ್ರಸ್ತುತ ನೀಡುತ್ತಿರುವ ಮಾಸಿಕ 1,000 ರೂ.ಗಳ ಪರಿಹಾರವನ್ನು 5,000 ರೂ.ಗೆ ಹೆಚ್ಚಿಸಲಾಗಿದೆ ಎಂದು ರಾಜ್ಯ ಸರ್ಕಾರ ಬಿಡುಗಡೆ ಮಾಡಿದೆ.

ಅದೇ ರೀತಿ, ಹುತಾತ್ಮರ ಪ್ರತಿ ಮಗುವಿಗೆ ಗರಿಷ್ಠ ಎರಡು ಮಕ್ಕಳಿದ್ದರೆ, ಅವರು ತಮ್ಮ ಅಧ್ಯಯನವನ್ನು ಮುಗಿಸುವವರೆಗೆ ಅಥವಾ 25 ವರ್ಷ ತುಂಬುವವರೆಗೆ 500 ರೂಪಾಯಿಗಳ ಬದಲಿಗೆ 5,000 ರೂಪಾಯಿಗಳ ಮಾಸಿಕ ಸಹಾಯವನ್ನು ಪಡೆಯುತ್ತಾರೆ.

ರಾಜ್ಯ ಸರ್ಕಾರವು ಪ್ರಸ್ತುತ 50,000 ರೂಗಳನ್ನು ಒಂದು ಬಾರಿ ಪರಿಹಾರವಾಗಿ ಮತ್ತು ಅವಿವಾಹಿತ ಹುತಾತ್ಮರ ಪ್ರತಿಯೊಬ್ಬ ಪೋಷಕರಿಗೆ ಮಾಸಿಕ 500 ರೂ. ನೀಡುತ್ತಿತ್ತು. ಈಗ ಪೋಷಕರಿಗೆ ತಲಾ 5 ಲಕ್ಷ ರೂ.ಗಳನ್ನು ಒಂದು ಬಾರಿ ಪರಿಹಾರ ಮತ್ತು ಮಾಸಿಕ 5,000 ರೂ.ಗಳನ್ನು ನೀಡಲಾಗುತ್ತದೆ ಎಂದು ಪ್ರಕಟಣೆ ತಿಳಿಸಿದೆ.

ಅತ್ಯುನ್ನತ ಸೇನಾ ಪ್ರಶಸ್ತಿಯಾದ ಪರಮವೀರ ಚಕ್ರ ಪುರಸ್ಕೃತರ ನಗದು ಬಹುಮಾನವನ್ನು 22,500 ರಿಂದ 1 ಕೋಟಿಗೆ ಹೆಚ್ಚಿಸಲಾಗಿದ್ದು, ಅಶೋಕ ಚಕ್ರ ಪುರಸ್ಕೃತರು 20,000 ರೂಪಾಯಿಗಳ ಬದಲಿಗೆ 1 ಕೋಟಿ ರೂಪಾಯಿಯನ್ನು ರಾಜ್ಯ ಸರ್ಕಾರದಿಂದ ಪಡೆಯುತ್ತಾರೆ ಎಂದು ಪ್ರಕಟನೆಯಲ್ಲಿ ತಿಳಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com