ತೆಲಂಗಾಣದಲ್ಲಿ ಬಿಜೆಪಿ- ಟಿಆರ್ ಎಸ್ ಸಂಘರ್ಷ ತಾರಕಕ್ಕೆ: ಬಿಜೆಪಿ ರಾಜ್ಯಾಧ್ಯಕ್ಷ ಬಂಡಿ ಸಂಜಯ್ ಕುಮಾರ್ ಸೇರಿ ಹಲವರ ಬಂಧನ

ತೆಲಂಗಾಣದಲ್ಲಿ ಟಿಆರ್ ಎಸ್-ಬಿಜೆಪಿ ನಾಯಕರ ಸಂಘರ್ಷ ತಾರಕಕ್ಕೇರಿದೆ. ಇಂದು ಮಂಗಳವಾರ ಬೆಳಗ್ಗೆ ರಾಜ್ಯ ಬಿಜೆಪಿ ಅಧ್ಯಕ್ಷ ಬಂಡಿ ಸಂಜಯ್ ಕುಮಾರ್ ಸೇರಿದಂತೆ ಹಲವು ಬಿಜೆಪಿ ನಾಯಕರನ್ನು ಬಂಧಿಸಲಾಗಿದೆ. 
ಜಂಗೌನ್ ನಲ್ಲಿ ಪೊಲೀಸರಿಂದ ಬಿಜೆಪಿ ರಾಜ್ಯಾಧ್ಯಕ್ಷ ಬಂಡಿ ಸಂಜಯ್ ಕುಮಾರ್ ಬಂಧನ
ಜಂಗೌನ್ ನಲ್ಲಿ ಪೊಲೀಸರಿಂದ ಬಿಜೆಪಿ ರಾಜ್ಯಾಧ್ಯಕ್ಷ ಬಂಡಿ ಸಂಜಯ್ ಕುಮಾರ್ ಬಂಧನ

ಹೈದರಾಬಾದ್: ತೆಲಂಗಾಣದಲ್ಲಿ ಟಿಆರ್ ಎಸ್-ಬಿಜೆಪಿ ನಾಯಕರ ಸಂಘರ್ಷ ತಾರಕಕ್ಕೇರಿದೆ. ಇಂದು ಮಂಗಳವಾರ ಬೆಳಗ್ಗೆ ರಾಜ್ಯ ಬಿಜೆಪಿ ಅಧ್ಯಕ್ಷ ಬಂಡಿ ಸಂಜಯ್ ಕುಮಾರ್ ಸೇರಿದಂತೆ ಹಲವು ಬಿಜೆಪಿ ನಾಯಕರನ್ನು ಬಂಧಿಸಲಾಗಿದೆ. 

ದೆಹಲಿ ಲಿಕ್ಕರ್ ಹಗರಣದಲ್ಲಿ ಟಿಆರ್ ಎಸ್ ನಾಯಕರ ಪಾತ್ರವಿದೆ ಎಂದು ಆರೋಪಿಸಿ ಬಿಜೆಪಿ ನಾಯಕರು ಇಂದು ಬೆಳಗ್ಗೆ ಹೈದರಾಬಾದ್ ನಲ್ಲಿ ಪ್ರತಿಭಟನೆ ನಡೆಸಲು ಸಜ್ಜಾಗುತ್ತಿದ್ದ ವೇಳೆ ಬಂಧಿಸಲಾಗಿದೆ.

ಘಾನ್ಪುರ್ ಕ್ಷೇತ್ರದ ನಿಲ್ದಾಣದಲ್ಲಿ ಇಂದು ಬೆಳಗ್ಗೆ ಬೃಹತ್ ಸಂಖ್ಯೆಯಲ್ಲಿ ಜಮಾಯಿಸಿದ ಪೊಲೀಸರು ಹಿರಿಯ ಬಿಜೆಪಿ ನಾಯಕರನ್ನು ಬಂಧಿಸಲು ಮುಂದಾದರು. ಈ ವೇಳೆ ಬಂಡಿ ಸಂಜಯ್ ಕುಮಾರ್ ಅವರ ಬೆಂಬಲಿಗರು ಸಾಕಷ್ಟು ವಿರೋಧ ವ್ಯಕ್ತಪಡಿಸಿದರು.ಈ ಮಧ್ಯೆ ಭಾರೀ ಹೈಡ್ರಾಮಾ ನಡೆದಿದ್ದು ಪೊಲೀಸರು ಬಿಜೆಪಿ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಬಂಡಿ ಸಂಜಯ್ ಕುಮಾರ್ ಆರೋಪಿಸಿದ್ದಾರೆ. 

ಪ್ರತಿಭಟನೆ ಏಕೆ: ದೆಹಲಿ ಲಿಕ್ಕರ್ ಹಗರಣದಲ್ಲಿ ತೆಲಂಗಾಣ ಮುಖ್ಯಮಂತ್ರಿ ಚಂದ್ರಶೇಖರ್ ರಾವ್ ಅವರ ಪುತ್ರಿ ಶಾಸಕಿ ಕೆ ಕವಿತಾ ಅವರ ಪಾತ್ರವಿದೆ ಎಂದು ಆರೋಪಿಸಿ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿ ಬಿಜೆಪಿ ನಾಯಕರು ಮತ್ತು ಕಾರ್ಯಕರ್ತರು ನಿನ್ನೆಯಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ನಿನ್ನೆ ಕವಿತಾ ಅವರ ನಿವಾಸದ ಮುಂದೆ ಶಾಂತಿಯುತ ಪ್ರತಿಭಟನೆ ಮಾಡಿದ್ದರು. 

ಇಂದು ಸಂಜಯ್ ಕುಮಾರ್ ಅವರು ಕಪ್ಪು ಪಟ್ಟಿ ಧರಿಸಿ ತಮ್ಮ ಪಕ್ಷದ ನಾಯಕರು ಮತ್ತು ಕಾರ್ಯಕರ್ತರೊಂದಿಗೆ ಪಾದಯಾತ್ರೆ ಸಾಗಲು ಮುಂದಾಗುತ್ತಿದ್ದ ವೇಳೆ ಪೊಲೀಸರು ಬಂದು ಅವರನ್ನು ಬಂಧಿಸಲು ಮುಂದಾದರು.ಈ ನಡುವೆ ಭಾರೀ ಹೈಡ್ರಾಮ ನಡೆದು ಪೊಲೀಸರು ಅವರನ್ನು ವಾಹನದಲ್ಲಿ ಕುಳ್ಳಿರಿಸಲು ಸಾಧ್ಯವಾದರೂ ಸಂಜಯ್ ಅವರ ಬೆಂಬಲಿಗರು ವಾಹನ ಮುಂದಕ್ಕೆ ಹೋಗದಂತೆ ತಡೆದರು.

ಬಿಜೆಪಿಯವರ ಆರೋಪವೇನು?: ದೇಶದ ರಾಜಕೀಯ ವಲಯದಲ್ಲಿ ಸಂಚಲನ ಸೃಷ್ಟಿಸಿರುವ ದೆಹಲಿ ಸರ್ಕಾರದ ಲಿಕ್ಕರ್ ಹಗರಣದಲ್ಲಿ ತೆಲಂಗಾಣ ಮುಖ್ಯಮಂತ್ರಿ ಚಂದ್ರಶೇಖರ್ ರಾವ್ ಅವರ ಪುತ್ರಿ ಕವಿತಾ ಅವರ ಪಾತ್ರವಿದೆ ಎಂಬುದು ಬಿಜೆಪಿ ನಾಯಕರ ಆರೋಪವಾಗಿದೆ. ಆದರೆ ಕವಿತಾ ಅವರು ತಮ್ಮ ಮೇಲಿನ ಆರೋಪವನ್ನು ತಳ್ಳಿ ಹಾಕಿದ್ದು ಬಿಜೆಪಿ ನಾಯಕರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ಹೇಳಿದ್ದಾರೆ.

ನಿನ್ನೆ ಕವಿತಾ ಅವರ ನಿವಾಸ ಮುಂದೆ ಭಾರೀ ಸಂಖ್ಯೆಯಲ್ಲಿ ಸೇರಿದ ಟಿಆರ್ ಎಸ್ ನಾಯಕರು ಮತ್ತು ಸಚಿವರು ಕವಿತಾ ಅವರಿಗೆ ಬೆಂಬಲ ಸೂಚಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com