ಯಡಿಯೂರಪ್ಪನವರಿಂದ ಕರ್ನಾಟಕದಲ್ಲಿ ಬಿಜೆಪಿಗೆ ಭಾರೀ ಸಹಾಯ, ಪಕ್ಷದ 'ಮಿಷನ್ ಸೌತ್' ಪ್ರಗತಿ ಕಾಣುತ್ತಿದೆ: ಅರುಣ್ ಸಿಂಗ್

ಅರುಣ್ ಸಿಂಗ್, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮತ್ತು ಕರ್ನಾಟಕ ಹಾಗೂ ರಾಜಸ್ತಾನ ರಾಜ್ಯಗಳ ಬಿಜೆಪಿ ಉಸ್ತುವಾರಿ 2024ರಲ್ಲಿ ಪಕ್ಷ 2019ರ ಲೋಕಸಭೆ ಚುನಾವಣೆಗಿಂತ ಹೆಚ್ಚು ಸ್ಥಾನಗಳನ್ನು ಗೆಲ್ಲುತ್ತದೆ ಎಂದು ಆತ್ಮವಿಶ್ವಾಸದಿಂದ ನುಡಿದಿದ್ದಾರೆ.
ಬಿ ಎಸ್ ಯಡಿಯೂರಪ್ಪ
ಬಿ ಎಸ್ ಯಡಿಯೂರಪ್ಪ

ಅರುಣ್ ಸಿಂಗ್, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮತ್ತು ಕರ್ನಾಟಕ ಹಾಗೂ ರಾಜಸ್ತಾನ ರಾಜ್ಯಗಳ ಬಿಜೆಪಿ ಉಸ್ತುವಾರಿ 2024ರಲ್ಲಿ ಪಕ್ಷ 2019ರ ಲೋಕಸಭೆ ಚುನಾವಣೆಗಿಂತ ಹೆಚ್ಚು ಸ್ಥಾನಗಳನ್ನು ಗೆಲ್ಲುತ್ತದೆ ಎಂದು ಆತ್ಮವಿಶ್ವಾಸದಿಂದ ನುಡಿದಿದ್ದಾರೆ.

ಮಿಷನ್ ದಕ್ಷಿಣ ಭಾಗವಾಗಿ ಬಿಜೆಪಿ ಪಕ್ಷ ಉತ್ತಮವಾಗಿ ಪ್ರಗತಿ ಹೊಂದುತ್ತಿದೆ. ಕೇಂದ್ರ ಸಂಸದೀಯ ಮತ್ತು ಚುನಾವಣಾ ಸಮಿತಿಯಲ್ಲಿ ಬಿ ಎಸ್ ಯಡಿಯೂರಪ್ಪನವರ(B S Yedyurappa) ಸೇರ್ಪಡೆ ಸಂಘಟನೆ ದೃಷ್ಟಿಯಿಂದ ದಕ್ಷಿಣ ಭಾರತದಲ್ಲಿ ಮಾತ್ರವಲ್ಲದೆ ದೇಶದ ಇತರ ಕಡೆಗಳಲ್ಲಿ ಪ್ರಯೋಜನಕಾರಿಯಾಗಲಿದೆ ಎಂದು ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಯ ರಾಜೇಶ್ ಕುಮಾರ್ ಠಾಕೂರ್ ಅವರಿಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

ಮಿಷನ್ ಸೌತ್ ಭಾಗವಾಗಿ ಕರ್ನಾಟಕದಲ್ಲಿ ಬಿಜೆಪಿ ಮತ್ತೆ ಅಧಿಕಾರ ಪಡೆಯಲು ಹೇಗೆ ಸಿದ್ಧತೆ ಮಾಡಿಕೊಂಡಿದೆ? 
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಉಸ್ತುವಾರಿಯಲ್ಲಿ ರಾಜ್ಯ ಸರ್ಕಾರ ರೈತರು ಸೇರಿದಂತೆ ಜನಪರ ಕೆಲಸಗಳನ್ನು ಸಾಕಷ್ಟು ಮಾಡಿದೆ. ಕರ್ನಾಟಕದಲ್ಲಿ ‘ಡಬಲ್ ಇಂಜಿನ್’ ಸರ್ಕಾರವಿದೆ. ಸಿಎಂ ನೇತೃತ್ವದಲ್ಲಿ ರಾಜ್ಯ ಬಿಜೆಪಿ ಒಗ್ಗಟ್ಟಾಗಿ ನಿಂತಿದೆ.
ಆದರೆ ಕಾಂಗ್ರೆಸ್ ನಲ್ಲಿ, ಸಿದ್ದರಾಮಯ್ಯ ಮತ್ತು ಡಿ ಶಿವಕುಮಾರ್ ಬೆಂಬಲಿಗರ ಒಳ ಜಗಳದಿಂದ ಕಾಂಗ್ರೆಸ್ ಒಡೆದ ಮನೆಯಾಗಿದೆ. ಹಿಜಾಬ್ ವಿವಾದದಂತಹ ಪ್ರತಿಪಕ್ಷಗಳು ಸೃಷ್ಟಿಸಿದ ಎಲ್ಲಾ ಸಮಸ್ಯೆಗಳನ್ನು ಬಿಜೆಪಿ ನಿಭಾಯಿಸಿದೆ. ಬಿಜೆಪಿಯ ಯುಎಸ್‌ಪಿ 'ರಾಜಿಯಿಲ್ಲದ ಅಭಿವೃದ್ಧಿ' ಆಗಿರುತ್ತದೆ.

ಇತ್ತೀಚೆಗಷ್ಟೇ ನಡೆದ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಿದೆ. ಹಳೆ ಮೈಸೂರು ಪ್ರದೇಶ ಮತ್ತು ಕಲ್ಯಾಣ-ಕರ್ನಾಟಕ ಪ್ರದೇಶಗಳಲ್ಲಿ ತಳಮಟ್ಟದ ಹಲವು ನಾಯಕರು ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ.

ವಿಧಾನಸಭೆ ಚುನಾವಣೆಗೆ ಮುನ್ನ ಕರ್ನಾಟಕ ಬಿಜೆಪಿಯಲ್ಲಿ ಭಾರೀ ಬದಲಾವಣೆ ಬಗ್ಗೆ ಗುಸುಗುಸು ಕೇಳಿಬರುತ್ತಿದೆಯಲ್ಲವೇ?
ಇದೆಲ್ಲ ಕಾಂಗ್ರೆಸ್‌ನ ಸೃಷ್ಟಿ. ತಮ್ಮ ವಿಫಲ ಚುನಾವಣಾ ಕಾರ್ಯತಂತ್ರದ ಭಾಗವಾಗಿ ವದಂತಿಗಳನ್ನು ಹಬ್ಬಿಸುವುದನ್ನು ಬಿಟ್ಟರೆ ಅವರಿಗೆ ಮಾಡಲು ಏನೂ ಇಲ್ಲ. ಮುಖ್ಯಮಂತ್ರಿ ಬದಲಾವಣೆಯ ಪ್ರಶ್ನೆಯೇ ಇಲ್ಲ. ಬೊಮ್ಮಾಯಿ ಅವರು ಪ್ರಬುದ್ಧ, ಅನುಭವಿ ನಾಯಕರಾಗಿದ್ದು, ಪಕ್ಷದ ‘ಸಬ್ಕಾ ಸಾಥ್ ಸಬ್ಕಾ ವಿಕಾಸ್’ ಸಿದ್ಧಾಂತದಲ್ಲಿ ನಂಬಿಕೆ ಇಟ್ಟಿದ್ದಾರೆ.

ಸಂಸದೀಯ ಮಂಡಳಿಗೆ ಸೇರ್ಪಡೆಯಾದ ನಂತರ ಯಡಿಯೂರಪ್ಪ ಪಕ್ಷಕ್ಕೆ ಹೇಗೆ ಸಹಾಯ ಮಾಡುತ್ತಾರೆ?
ಅವರು ಪಕ್ಷದ ಅತ್ಯಂತ ಅನುಭವಿ ನಾಯಕರಲ್ಲಿ ಒಬ್ಬರು. ನಾಲ್ಕು ಬಾರಿ ಮುಖ್ಯಮಂತ್ರಿಯಾಗಿದ್ದ ಅವರು ಮೂರು ಬಾರಿ ವಿರೋಧ ಪಕ್ಷದ ನಾಯಕರಾಗಿದ್ದರು. ಎಂಟು ಬಾರಿ ಶಾಸಕರಾಗಿದ್ದರು. ಅವರ ಮಾರ್ಗದರ್ಶನದಲ್ಲಿ ಬಿಜೆಪಿ ಮುಂದಿನ ಚುನಾವಣೆ ಎದುರಿಸಲಿದೆ. ಅವರು ಸಾರ್ವಜನಿಕ ಸಭೆಗಳನ್ನು ಉದ್ದೇಶಿಸಿ, ಪ್ರವಾಸ ಮತ್ತು ಪಕ್ಷದ ಪ್ರಚಾರ ನಡೆಸಲಿದ್ದಾರೆ.

ಸಂಸದೀಯ ಮಂಡಳಿಗೆ ಸೇರ್ಪಡೆಗೊಂಡರೆ ಪಕ್ಷಕ್ಕೆ ಲಾಭವಾಗಲಿದ್ದು, ಯಡಿಯೂರಪ್ಪ ಅವರ ಮಾರ್ಗದರ್ಶನದಲ್ಲಿ ಬಿಎಸ್ ಬೊಮ್ಮಾಯಿ ನೇತೃತ್ವದಲ್ಲಿ ಪಕ್ಷ ಚುನಾವಣೆ ಎದುರಿಸಲಿದೆ.

ಕೇಂದ್ರ ನಾಯಕತ್ವದೊಂದಿಗಿನ ಭಿನ್ನಾಭಿಪ್ರಾಯದಿಂದಾಗಿ ನಿತಿನ್ ಗಡ್ಕರಿ ಅವರನ್ನು ಕೈಬಿಡಲಾಗಿದೆ ಎಂಬ ಮಾತು ಕೇಳಿಬರುತ್ತಿದೆ? ಇದು ಎಷ್ಟರ ಮಟ್ಟಿಗೆ ನಿಜ?
ಇದು ಸಂಪೂರ್ಣವಾಗಿ ತಪ್ಪುದಾರಿಗೆಳೆಯುವ ಮತ್ತು ಸುಳ್ಳು ಸುದ್ದಿ. ಪಕ್ಷದೊಳಗೆ ವ್ಯವಸ್ಥೆಯಲ್ಲಿ ಬದಲಾವಣೆ ಆಗುತ್ತಲೇ ಇರುತ್ತದೆ. ಇದು ಪಕ್ಷದ ಪ್ರತಿಷ್ಠೆಯನ್ನು ಹೆಚ್ಚಿಸುತ್ತದೆ, ಪಕ್ಷದ ಆಂತರಿಕ ಪ್ರಜಾಪ್ರಭುತ್ವದ ಭಾಗವಾಗಿದೆ. ಇದು ನಾಯಕರ ಮಧ್ಯೆ ಯಾವುದೇ ವ್ಯತ್ಯಾಸ, ಭಿನ್ನಾಭಿಪ್ರಾಯವನ್ನುಂಟುಮಾಡುವುದಿಲ್ಲ.

ಬಿಜೆಪಿಯ ‘ಮಿಷನ್ ಸೌತ್’ ಎಷ್ಟು ಪ್ರಗತಿ ಸಾಧಿಸಿದೆ?
ಮುಂದಿನ ದಿನಗಳಲ್ಲಿ ದಕ್ಷಿಣದ ರಾಜ್ಯಗಳಲ್ಲಿ ಬಿಜೆಪಿ ಭಾರಿ ಸ್ಥಾನಗಳನ್ನು ಗೆಲ್ಲುವ ಭರವಸೆಯಲ್ಲಿದೆ. ತೆಲಂಗಾಣದಲ್ಲಿ ಪಕ್ಷ ತನ್ನ ಬೆಂಬಲದ ನೆಲೆಯನ್ನು ವಿಸ್ತರಿಸುತ್ತಿದೆ. ಪಕ್ಷವು ದಕ್ಷಿಣ ಭಾರತದಾದ್ಯಂತ ಜನರನ್ನು ತಲುಪುತ್ತಿದೆ. ಮಿಷನ್ ಸೌತ್’ ಭಾಗವಾಗಿ, ಕರ್ನಾಟಕದ ನಂತರ ತೆಲಂಗಾಣ ಪಕ್ಷದ ಪ್ರಮುಖ ಆದ್ಯತೆಯಾಗಿದ್ದು, ನಾವು ಅಧಿಕಾರಕ್ಕೆ ಬರಲು ಶ್ರಮಿಸುತ್ತಿದ್ದೇವೆ. 

ತೆಲಂಗಾಣದ ಪ್ರಮುಖ ನಾಯಕರೊಬ್ಬರನ್ನು ಸಂಸದೀಯ ಮಂಡಳಿಗೆ ಸೇರಿಸಲಾಗಿದೆ. ಅವರು ಯುಪಿಯಿಂದ ರಾಜ್ಯಸಭಾ ಸಂಸದರಾಗಿರುವ ಒಬಿಸಿ ಮೋರ್ಚಾದ ರಾಷ್ಟ್ರೀಯ ಅಧ್ಯಕ್ಷ ಡಾ ಕೆ ಲಕ್ಷ್ಮಣ್. ಜಿ ಕೃಷ್ಣಾ ರೆಡ್ಡಿ ಅವರು ಸಹ ಪಕ್ಷದ ಪ್ರಮುಖ ಮತ್ತು ಪ್ರಭಾವಿ ನಾಯಕರು.

ರಾಜಸ್ತಾನ ಬಿಜೆಪಿಯಲ್ಲಿ ಆಂತರಿಕ ಕಚ್ಚಾಟ ನಡೆಯುತ್ತಿದೆ. ಹೀಗಿರುವಾಗ ಪಕ್ಷ ಅಧಿಕಾರಕ್ಕೆ ಬರುವುದು ಹೇಗೆ?
ಕಾಂಗ್ರೆಸ್ ಆಡಳಿತವಿರುವ ರಾಜಸ್ತಾನದಲ್ಲಿ ನಿಯಂತ್ರಣ ಮೀರಿದ ಅಧರ್ಮವಿದೆ. ರಾಜ್ಯವು ಅತಿರೇಕದ ಭ್ರಷ್ಟಾಚಾರದಿಂದ ಜಂಗಲ್ ರಾಜ್‌ಗೆ ಮರಳಿದೆ. ಅಶೋಕ್ ಗಹ್ಲೋಟ್ ತಮ್ಮ ಸಿಎಂ ಕುರ್ಚಿ ಉಳಿಸಿಕೊಳ್ಳಲು ಸಾಕಷ್ಟು ಪ್ರಯತ್ನ ನಡೆಸಿದ್ದಾರೆ. ಬಿಜೆಪಿಯು ಪ್ರಧಾನಿ ಮೋದಿಯವರ ಸಾಮೂಹಿಕ ನಾಯಕತ್ವದೊಂದಿಗೆ ಅಪರಾಧ ಮತ್ತು ಭ್ರಷ್ಟಾಚಾರದ ವಿಷಯಗಳನ್ನು ಮುಂದಿಟ್ಟುಕೊಂಡು ಇಲ್ಲಿ ವಿಧಾನಸಭೆ ಚುನಾವಣೆಯನ್ನು ಎದುರಿಸಲಿದೆ. ಪಕ್ಷದ ರಾಜ್ಯ ಘಟಕದಲ್ಲಿ ಯಾವುದೇ ಆಂತರಿಕ ಕಚ್ಚಾಟ ಇಲ್ಲ.

ರಾಜಸ್ತಾನದ ಎಷ್ಟು ಕಾಂಗ್ರೆಸ್ ಶಾಸಕರು ನಿಮ್ಮ ಸಂಪರ್ಕದಲ್ಲಿದ್ದಾರೆ?
ರಾಜಸ್ತಾನದಲ್ಲಿ ಹಲವು ಕಾಂಗ್ರೆಸ್ ನಾಯಕರು ಬಿಜೆಪಿ ಸೇರಲು ಬಯಸಿದ್ದಾರೆ. ರಾಜಸ್ತಾನದಲ್ಲಿ ನಮ್ಮದು ಹಳೆಯ ಪಕ್ಷ. ಸೂಕ್ತ ಸಮಾಲೋಚನೆಯ ನಂತರ ಅಂತಹ ನಾಯಕರನ್ನು ಸ್ವಾಗತಿಸುವ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳುತ್ತೇವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com