ದೆಹಲಿ ಹೊಸ ಅಬಕಾರಿ ನೀತಿ ಎಫೆಕ್ಟ್: ಖಾಸಗಿ ಮದ್ಯದ ಅಂಗಡಿಗಳಿಗೆ ಬೀಗ.. ತಲೆ ಎತ್ತಲಿವೆ 300 ಸರ್ಕಾರಿ ಬೃಹತ್ ವೈನ್ ಶಾಪ್ ಗಳು!
ದೆಹಲಿ ಸರ್ಕಾರ ಜಾರಿಗೆ ತಂದಿರುವ ಅಬಕಾರಿ ನೀತಿಯಿಂದಾಗಿ ಖಾಸಗಿ ಮದ್ಯದ ಅಂಗಡಿಗಳಿಗೆ ಬೀಗ ಬೀಳಲಿದ್ದು, ಅದರ ಬದಲಿಗೆ ಸುಮಾರು 300 ಸರ್ಕಾರಿ ಬೃಹತ್ ವೈನ್ ಶಾಪ್ ಗಳು ತಲೆ ಎತ್ತಲಿವೆ.
Published: 31st August 2022 07:27 PM | Last Updated: 31st August 2022 07:27 PM | A+A A-

ಮದ್ಯ ಮಾರಾಟ
ನವದೆಹಲಿ: ದೆಹಲಿ ಸರ್ಕಾರ ಜಾರಿಗೆ ತಂದಿರುವ ಅಬಕಾರಿ ನೀತಿಯಿಂದಾಗಿ ಖಾಸಗಿ ಮದ್ಯದ ಅಂಗಡಿಗಳಿಗೆ ಬೀಗ ಬೀಳಲಿದ್ದು, ಅದರ ಬದಲಿಗೆ ಸುಮಾರು 300 ಸರ್ಕಾರಿ ಬೃಹತ್ ವೈನ್ ಶಾಪ್ ಗಳು ತಲೆ ಎತ್ತಲಿವೆ.
ಹೌದು.. ದೆಹಲಿಯಲ್ಲಿ ಅಬಕಾರಿ ನೀತಿ 2021-22ರ ಬದಲಿಗೆ ಮತ್ತೆ ಹಳೆಯ ವ್ಯವಸ್ಥೆ ಜಾರಿಗೆ ಬರಲಿರುವುದರಿಂದ ನಾಳೆಯಿಂದ (ಗುರುವಾರ) ಖಾಸಗಿ ಮದ್ಯದ ಅಂಗಡಿಗಳು ಬಾಗಿಲೆಳೆದುಕೊಳ್ಳಲಿವೆ. ಇವುಗಳ ಜಾಗದಲ್ಲಿ 300ಕ್ಕೂ ಹೆಚ್ಚು ಬೃಹತ್ ಸರ್ಕಾರಿ ವೈನ್ ಶಾಪ್ ಗಳು ತಲೆ ಎತ್ತಲಿವೆ. ಈ ಬೃಹತ್ ವೈನ್ ಶಾಪ್ ಗಳನ್ನು ದೆಹಲಿ ಸರ್ಕಾರವೇ ರಾಷ್ಟ್ರ ರಾಜಧಾನಿಯಲ್ಲಿ ತೆರೆಯಲಿವೆ. ಈಗಾಗಲೇ ಹಿಂತೆಗೆದುಕೊಂಡಿರುವ ಅಬಕಾರಿ ನೀತಿ 2021-22 ಅಡಿಯಲ್ಲಿ ಪರವಾನಗಿ ಪಡೆದಿರುವ ಸುಮಾರು 250 ಖಾಸಗಿ ಮದ್ಯ ಮಾರಾಟ ಮಳಿಗೆಗಳು ನಗರದಲ್ಲಿ ಪ್ರಸ್ತುತ ಕಾರ್ಯನಿರ್ವಹಿಸುತ್ತಿವೆ. ಹೆಚ್ಚಿನ ಅಂಗಡಿಗಳನ್ನು ಸರ್ಕಾರ ತೆರೆಯುವುದರಿಂದ ಸೆಪ್ಟೆಂಬರ್ ಮೊದಲ ವಾರದಿಂದ ಮದ್ಯದ ಪೂರೈಕೆ ಸುಧಾರಿಸುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ: 'ಅಧಿಕಾರದ ಅಮಲು': ಅಬಕಾರಿ ನೀತಿ ಕುರಿತು ಕೇಜ್ರಿವಾಲ್ ಸರ್ಕಾರ ಟೀಕಿಸಿದ ಅಣ್ಣಾ ಹಜಾರೆ
"ಪ್ರಸ್ತುತ ಸುಮಾರು 250 ಖಾಸಗಿ ಮದ್ಯದ ಅಂಗಡಿಗಳು ದೆಹಲಿಯಲ್ಲಿವೆ. ಇವುಗಳ ಜಾಗದಲ್ಲಿ 300ಕ್ಕೂ ಹೆಚ್ಚು ಸರ್ಕಾರಿ ಮದ್ಯದ ಅಂಗಡಿಗಳು ಬರಲಿವೆ. ಆದ್ದರಿಂದ ಹೆಚ್ಚಿನ ಮದ್ಯದ ಅಂಗಡಿಗಳು ಇರಲಿದ್ದು, ಮುಂದಿನ ದಿನಗಳಲ್ಲಿ ಈ ಸಂಖ್ಯೆಯು ಮತ್ತಷ್ಟು ಹೆಚ್ಚಿಸುವ ಸಾಧ್ಯತೆ ಇದೆ. ಕಾರಣ ದೆಹಲಿ ಸರ್ಕಾರದ ನಾಲ್ಕು ಉದ್ಯಮಗಳು 500 ಅಂಗಡಿಗಳನ್ನು ತೆರೆಯಲು ನಿರ್ಧರಿಸಿವೆ ಎಂದು ದೆಹಲಿ ಸರಕಾರದ ಅಬಕಾರಿ ಇಲಾಖೆಯ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ: ದೆಹಲಿ ಅಬಕಾರಿ ನೀತಿ ವಿವಾದ: ತನಿಖಾ ಸಂಸ್ಥೆಗಳ ದುರ್ಬಳಕೆ ಖಂಡಿಸಿ ನಿರ್ಣಯ ಅಂಗೀಕರಿಸಿದ ಆಮ್ ಆದ್ಮಿ ಪಕ್ಷ
ಅಬಕಾರಿ ಇಲಾಖೆ ಅಭಿವೃದ್ಧಿಪಡಿಸಿರುವ ಮೊಬೈಲ್ ಅಪ್ಲಿಕೇಶನ್ ಅಬಕಾರಿದೆಹಲಿ (mAbkaridelhi) ಸೆಪ್ಟೆಂಬರ್‌ನಿಂದ ಕಾರ್ಯಾರಂಭ ಮಾಡಲಿದ್ದು, ಗ್ರಾಹಕರಿಗೆ ಅವರ ನೆರೆಹೊರೆಯಲ್ಲಿರುವ ಮದ್ಯದಂಗಡಿಗಳ ಸ್ಥಳ ಮತ್ತು ಬಾರ್‌ಗಳ ಸಮಯದ ಬಗ್ಗೆ ಮಾಹಿತಿಯನ್ನು ನೀಡಲಿದೆ. ಹಲವಾರು ಸರ್ಕಾರಿ ಮಾರಾಟ ಮಳಿಗೆಗಳನ್ನು ಮಾಲ್‌ಗಳಲ್ಲಿ ತೆರೆಯಲಾಗಿದ್ದು, ಮೆಟ್ರೋ ನಿಲ್ದಾಣಗಳ ಬಳಿಯೂ ಇವುಗಳು ಇರಲಿವೆ. ದೆಹಲಿ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳಾದ ಡಿಟಿಟಿಡಿಸಿ, ಡಿಎಸ್‌ಎಸ್‌ಐಡಿಸಿ, ಡಿಎಸ್‌ಸಿಎಸ್‌ಸಿ ಮತ್ತು ಡಿಸಿಸಿಡಬ್ಲ್ಯೂಎಸ್‌ಗೆ ಈ ವರ್ಷದ ಅಂತ್ಯದ ವೇಳೆಗೆ ನಗರದಲ್ಲಿ 700 ಮದ್ಯದಂಗಡಿಗಳನ್ನು ತೆರೆಯುವ ಗುರಿಯನ್ನು ನೀಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.