
ಮತಾಂತರ ನಿಷೇಧ ಮಸೂದೆ ವಿರೋಧಿಸಿ ಕಾಂಗ್ರೆಸ್ ಶಾಸಕರ ಪ್ರತಿಭಟನೆ
ಡೆಹ್ರಾಡೂನ್: ಪೂರಕ ಬಜೆಟ್ ಅಧಿವೇಶನದ ಎರಡನೇ ದಿನವಾದ ಗುರುವಾರ ಉತ್ತರಾಖಂಡ ವಿಧಾನಸಭೆಯಲ್ಲಿ ಎರಡು ಪ್ರಮುಖ ಮಸೂದೆಗಳನ್ನು ಧ್ವನಿ ಮತದ ಮೂಲಕ ಅಂಗೀಕರಿಸಲಾಗಿದೆ.
ಉತ್ತರಾಖಂಡ್ ಧಾರ್ಮಿಕ ಸ್ವಾತಂತ್ರ್ಯ(ತಿದ್ದುಪಡಿ) ಮಸೂದೆ 2022 ಅನ್ನು ಅಂಗೀಕರಿಸುವ ಮೂಲಕ ರಾಜ್ಯದಲ್ಲಿ ಧಾರ್ಮಿಕ ಮತಾಂತರಕ್ಕೆ ಸಂಬಂಧಿಸಿದಂತೆ ಕಠಿಣ ಕಾನೂನಿಗೆ ಅವಕಾಶ ಕಲ್ಪಿಸಲಾಗಿದೆ. ಇದಲ್ಲದೆ, ಉತ್ತರಾಖಂಡ ಸಾರ್ವಜನಿಕ ಸೇವಾ(ಮಹಿಳೆಯರಿಗೆ ಮೀಸಲಾತಿ) ಮಸೂದೆ 2022 ಅನ್ನು ಅಂಗೀಕರಿಸಲಾಗಿದ್ದು, ರಾಜ್ಯದಲ್ಲಿ ಮಹಿಳೆಯರಿಗೆ ಶೇ. 30 ರಷ್ಟು ಮೀಸಲಾತಿ ಜಾರಿಗೆ ತರಲಾಗಿದೆ.
ಬಲವಂತದ ಮತಾಂತರವನ್ನು ಅಪರಾಧ ಎಂದು ಘೋಷಿಸಲಾಗಿದ್ದು, ಇದಕ್ಕೆ 10 ವರ್ಷಗಳ ಜೈಲು ಶಿಕ್ಷೆ ವಿಧಿಸಲು ಮಸೂದೆಯಲ್ಲಿ ಅವಕಾಶ ನೀಡಲಾಗಿದೆ.
ಇದನ್ನು ಓದಿ: ವೈವಾಹಿಕ ವಿವಾದ ಪ್ರಕರಣಗಳಿಗಾಗಿ ಸುಪ್ರೀಂ ಕೋರ್ಟ್ ನಿಂದ ಮಹಿಳಾ ಪೀಠ ರಚನೆ
ಮತಾಂತರ ನಿಷೇಧ ಹಾಗೂ ಮಹಿಳಾ ಮೀಸಲಾತಿ ವಿಧೇಯಕಗಳು ವಿಧಾನಸಭೆಯಲ್ಲಿ ಅಂಗೀಕಾರಗೊಂಡಿದ್ದು, ರಾಜ್ಯದಲ್ಲಿ ಇವುಗಳನ್ನು ಜಾರಿಗೊಳಿಸಲು ಶೀಘ್ರದಲ್ಲೇ ಅಧಿಸೂಚನೆ ಹೊರಡಿಸುವ ಸಾಧ್ಯತೆ ಇದೆ.
"ಉತ್ತರಾಖಂಡವು ದೇವಭೂಮಿ. ಮತಾಂತರದಂತಹ ವಿಷಯಗಳು ನಮಗೆ ಮಾರಕವಾಗಿವೆ, ಆದ್ದರಿಂದ ರಾಜ್ಯದಲ್ಲಿ ಧಾರ್ಮಿಕ ಮತಾಂತರವನ್ನು ನಿಷೇಧಿಸಲು ಕಠಿಣ ಕಾನೂನುಗಳನ್ನು ಜಾರಿಗೆ ತರಲು ಸರ್ಕಾರ ನಿರ್ಧರಿಸಿದೆ" ಎಂದು ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಹೇಳಿದ್ದಾರೆ.