ಮುಂಬೈ ಬೀದಿ ಕಾಮಣ್ಣರಿಂದ ರಕ್ಷಿಸಿದ ಭಾರತದ 'ಜಂಟಲ್ ಮನ್' ಗಳಿಗೆ ಟ್ರೀಟ್ ಕೊಟ್ಟ ಕೊರಿಯನ್ ಯೂಟ್ಯೂಬರ್!

ಮುಂಬೈ ಬೀದಿಯಲ್ಲಿ ಲೈವ್ ಸ್ಟ್ರೀಮಿಂಗ್ ಮಾಡುತ್ತಿದ್ದ ವೇಳೆ ಬೀದಿ ಕಾಮಣ್ಣರಿಂದ ತೊಂದರೆಗೆ ಒಳಗಾಗಿದ್ದ ತಮ್ಮನ್ನು ರಕ್ಷಣೆ ಮಾಡಿದ್ದ ಭಾರತೀಯ ಯುವಕರಿಗೆ ಕೊರಿಯನ್ ಯೂಟ್ಯೂಬರ್ ಟ್ರೀಟ್ ನೀಡಿದ್ದಾರೆ.
ಕೊರಿಯಾ ಯೂಟ್ಯೂಬರ್ ಗೆ ಕಿರುಕುಳ
ಕೊರಿಯಾ ಯೂಟ್ಯೂಬರ್ ಗೆ ಕಿರುಕುಳ

ಮುಂಬೈ: ಮುಂಬೈ ಬೀದಿಯಲ್ಲಿ ಲೈವ್ ಸ್ಟ್ರೀಮಿಂಗ್ ಮಾಡುತ್ತಿದ್ದ ವೇಳೆ ಬೀದಿ ಕಾಮಣ್ಣರಿಂದ ತೊಂದರೆಗೆ ಒಳಗಾಗಿದ್ದ ತಮ್ಮನ್ನು ರಕ್ಷಣೆ ಮಾಡಿದ್ದ ಭಾರತೀಯ ಯುವಕರಿಗೆ ಕೊರಿಯನ್ ಯೂಟ್ಯೂಬರ್ ಟ್ರೀಟ್ ನೀಡಿದ್ದಾರೆ.

ಹೌದು.. ಮುಂಬೈನಲ್ಲಿ ಕಿರುಕುಳಕ್ಕೊಳಗಾಗಿ ವ್ಯಾಪಕ ಸುದ್ದಿಗೆ ಗ್ರಾಸವಾಗಿದ್ದ ದಕ್ಷಿಣ ಕೊರಿಯಾದ ಯೂಟ್ಯೂಬರ್ ಮ್ಯೋಚಿ ಅವರು ತಮ್ಮನ್ನು ರಕ್ಷಿಸಿದ ಭಾರತೀಯ ಯುವಕರಿಗೆ ಧನ್ಯವಾದ ಹೇಳಿದ್ದು ಮಾತ್ರವಲ್ಲದೇ ಅವರೊಂದಿಗೆ ಡಿನ್ನರ್ ಮಾಡಿದ್ದಾರೆ. ಈ ಕುರಿತ ಫೋಟೋವನ್ನು ಅವರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿ ಸಂತಸ ಹಂಚಿಕೊಂಡಿದ್ದಾರೆ. 

ಪೋಸ್ಟ್ ನಲ್ಲಿ 'ಮುಂಬೈ ಬೀದಿಯಲ್ಲಿ ಸಂಕಷ್ಟಕ್ಕೆ ಸಿಲುಕಿದ್ದಾಗ ನನನ್ನು ರಕ್ಷಿಸಿದ ಭಾರತೀಯ ಇಬ್ಬರು ಜೆಂಟಲ್ ಮೆನ್ ಗಳಾದ ಆದಿತ್ಯ ಮತ್ತು ಅಥರ್ವ ಅವರೊಂದಿಗೆ ಊಟ ಮಾಡಿದೆ' ಎಂದು ಅವರು ಟ್ವೀಟ್ ಮಾಡಿದ್ದಾರೆ.

ಖಾರ್‌ನ ಜನನಿಬಿಡ ಎಸ್‌ವಿ ರಸ್ತೆಯಲ್ಲಿ ಮ್ಯೋಚಿ ವಿಡಿಯೋವನ್ನು ಲೈವ್-ಸ್ಟ್ರೀಮ್ ಮಾಡುತ್ತಿದ್ದಾಗ ಇಬ್ಬರು ವ್ಯಕ್ತಿಗಳು ಕಿರುಕುಳ ನೀಡಿದ್ದರು. ಈ ವೇಳೆ ಆನ್‌ಲೈನ್‌ನಲ್ಲಿ ಹಂಚಿಕೊಂಡ ವೀಡಿಯೊವನ್ನು ಮುಂಬೈ ಮೂಲದ ಬ್ಲಾಗರ್ ಆದಿತ್ಯ ಅವರು ಮುಂಬೈ ಪೊಲೀಸರಿಗೆ ಟ್ಯಾಗ್ ಮಾಡಿ ಟ್ವೀಟ್ ಮಾಡಿದ್ದರು. ಈ ವಿಡಿಯೋ ವೈರಲ್ ಆಗುತ್ತಲೇ ಪೊಲೀಸರು ಸ್ವಯಂ ಪ್ರೇರಿತ ಎಫ್‌ಐಆರ್ ದಾಖಲಿಸಿಕೊಂಡು ಇಬ್ಬರು ಆರೋಪಿಗಳಾದ ಮುಬಿನ್ ಶೇಖ್ ಮತ್ತು ಮೊಹಮ್ಮದ್ ಅನ್ಸಾರಿ ಎಂಬುವವರನ್ನು ಬಂಧಿಸಿದ್ದಾರೆ.

ಆದಿತ್ಯಾ ತಮ್ಮ ಪೋಸ್ಟ್ ನಲ್ಲಿ “ಕೊರಿಯಾದ ಸ್ಟ್ರೀಮರ್‌ಗೆ ಕಳೆದ ರಾತ್ರಿ ಖಾರ್‌ನಲ್ಲಿ ಈ ಹುಡುಗರು ಸಾವಿರಾರು ಜನರ ಮುಂದೆ ಕಿರುಕುಳ ನೀಡಿದ್ದಾರೆ. ಇದು ಅಸಹ್ಯಕರ ಘಟನೆಯಾಗಿದ್ದು, ಕ್ರಮಗಳ ಅಗತ್ಯವಿದೆ. ಅವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು. ಇದನ್ನು ಶಿಕ್ಷಿಸದೆ ಇರಲು ಸಾಧ್ಯವಿಲ್ಲ ಎಂದು ಟ್ವೀಟ್ ಮಾಡಿದ್ದರು. 

ಏನಿದು ಘಟನೆ?
ಮುಂಬೈನ ಖಾರ್ ನಲ್ಲಿ(Khar) ಕೊರಿಯಾದ ಮಹಿಳಾ ಯೂಟ್ಯೂಬರ್ ನೇರ ಪ್ರಸಾರ ಮಾಡುವಾಗ ಆಕೆಯ ಬಳಿ ಬೈಕ್ ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಆಕೆಯೊಂದಿಗೆ ಅಸಭ್ಯವಾಗಿ ವರ್ತಿಸಿದ್ದರು. ಓರ್ವ ಪುಂಡ ಆಕೆಗೆ ಮುತ್ತು ಕೊಡುವಂತೆ ಬಲವಂತ ಮಾಡಿದ್ದು ಇದರಿಂದ ವಿಚಲಿತಳಾದ ಆಕೆ ಅವರಿಂದ ತಪ್ಪಿಸಿಕೊಳ್ಳಲು ಯತ್ನಿಸಿದ್ದರು. ಆದರೂ ಬಿಡದ ಆತ ಆಕೆಯನ್ನು ಬೈಕ್ ಮೇಲೆ ಕೂರುವಂತೆ ಒತ್ತಾಯಿಸಿದ್ದ. ಈ ವೇಳೆ ಆಕೆ ಆತನಿಂದ ತಪ್ಪಿಸಿಕೊಂಡು ಮುಂದಕ್ಕೆ ಹೋಗಿದ್ದು, ಆಕೆಯನ್ನು ಮತ್ತೆ ಹಿಂಬಾಲಿಸಿದ ಇಬ್ಬರು ಡ್ರಾಪ್ ಮಾಡುತ್ತೇನೆ ಬಾ ಎಂದು ಕೂಗುತ್ತಾರೆ. ಆದರೆ, ಆಕೆ ಅದನ್ನು ನಿರಾಕರಿಸಿದ್ದು, ನನ್ನ ಮನೆ ಸಮೀಪದಲ್ಲಿಯೇ ಇದೆ.. ನಾನು ಹೋಗುತ್ತೇನೆ ಎನ್ನುತ್ತಾಳೆ. ಬಳಿಕ ಅವರು ಮುಂದಿನ ಸಾರಿ ಭೇಟಿಯಾಗೋಣ ಎಂದು ಹೇಳಿ ಹೊರಡುತ್ತಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗಿತ್ತು.

ಇನ್ನು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಮುಂಬೈ ಪೊಲೀಸರು ಈ ಸಂಬಂಧ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರನ್ನು ಮೊಬೀನ್ ಚಾಂದ್ ಮೊಹಮ್ಮದ್ ಶೇಖ್ ಮತ್ತು ಮೊಹಮ್ಮದ್ ನಕೀಬ್ ಸದ್ರೇಲಂ ಅನ್ಸಾರಿ ಎಂದು ಗುರುತಿಸಲಾಗಿದೆ. ಕಿರುಕುಳ ನೀಡಿದ ಇಬ್ಬರು ಆರೋಪಿಗಳನ್ನು ಬಂಧಿಸಿ 1 ದಿನ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com