ಉತ್ತರ ಪ್ರದೇಶ: ರೈಲಿನ ಕಿಟಕಿಯಿಂದ ತೂರಿಬಂತು ಕಬ್ಬಿಣದ ರಾಡ್, ಪ್ರಯಾಣಿಕ ಸಾವು!
ವ್ಯಕ್ತಿಯೊಬ್ಬರು ದೆಹಲಿ-ಕಾನ್ಪುರ ನೀಲಾಂಚಲ್ ಎಕ್ಸ್‌ಪ್ರೆಸ್(12876) ರೈಲಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಪ್ರಯಾಗರಾಜ್ ವಿಭಾಗದ ಸೋಮ್ನಾ ಮತ್ತು ದನ್‌ಬಾರ್ ರೈಲು ನಿಲ್ದಾಣಗಳ ನಡುವೆ ಐದು ಅಡಿ ಉದ್ದ ಮತ್ತು 1.5 ಇಂಚು ದಪ್ಪದ ಕಬ್ಬಿಣದ ರಾಡ್...
Published: 02nd December 2022 05:51 PM | Last Updated: 02nd December 2022 05:51 PM | A+A A-

ಪ್ರಯಾಣಿಕ ಸಾವು
ಲಖನೌ: ವ್ಯಕ್ತಿಯೊಬ್ಬರು ದೆಹಲಿ-ಕಾನ್ಪುರ ನೀಲಾಂಚಲ್ ಎಕ್ಸ್‌ಪ್ರೆಸ್(12876) ರೈಲಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಪ್ರಯಾಗರಾಜ್ ವಿಭಾಗದ ಸೋಮ್ನಾ ಮತ್ತು ದನ್‌ಬಾರ್ ರೈಲು ನಿಲ್ದಾಣಗಳ ನಡುವೆ ಐದು ಅಡಿ ಉದ್ದ ಮತ್ತು 1.5 ಇಂಚು ದಪ್ಪದ ಕಬ್ಬಿಣದ ರಾಡ್ ಕಿಟಕಿಯ ಗಾಜು ಒಡೆದು ತೂರಿ ಬಂದಿದ್ದು, ರಾಡ್ ಕುತ್ತಿಗೆಗೆ ಚುಚ್ಚಿ ಸಾವನ್ನಪ್ಪಿದ್ದಾರೆ.
ಶುಕ್ರವಾರ ಬೆಳಗ್ಗೆ 8:45ಕ್ಕೆ ಈ ದಾರುಣ ಘಟನೆ ನಡೆದಿದ್ದು, ರೈಲಿನಲ್ಲಿ ಕಿಟಕಿಯ ಪಕ್ಕದಲ್ಲಿ ಕುಳಿತಿದ್ದ ಸುಲ್ತಾನ್‌ಪುರ ಜಿಲ್ಲೆಯ ಗೋಪಿನಾಥಪುರದ ಹರಿಕೇಶ್ ಕುಮಾರ್ ದುಬೆ ಅವರು ರಾಡು ಚುಚ್ಚಿ ಮೃತಪಟ್ಟಿದ್ದಾರೆ. ದುಬೆ ಅವರ ಮೃತದೇಹವನ್ನು ಅಲಿಗಢ ರೈಲು ನಿಲ್ದಾಣದಲ್ಲಿ ರೈಲಿನಿಂದ ಕೆಳಗಿಳಿಸಲಾಗಿದೆ.
ಇದನ್ನು ಓದಿ: ಉತ್ತರ ಪ್ರದೇಶ ಉಪ ಚುನಾವಣೆ: ಮತ್ತೆ ವಿವಾದಾತ್ಮಕ ಹೇಳಿಕೆ ನೀಡಿದ ಅಜಂ ಖಾನ್ ವಿರುದ್ಧ ಕೇಸ್ ದಾಖಲು
ಘಟನೆಯ ಬಗ್ಗೆ ಮಾಹಿತಿ ಪಡೆದ ರೈಲ್ವೆ ಅಧಿಕಾರಿಗಳು ಅಲಿಗಢ ರೈಲು ನಿಲ್ದಾಣಕ್ಕೆ ಧಾವಿಸಿದರು.
ಮೂಲಗಳ ಪ್ರಕಾರ, ಘಟನೆ ನಡೆದ ಸ್ಥಳದಲ್ಲಿ ರೈಲ್ವೆ ನಿರ್ಮಾಣ ಕಾರ್ಯ ನಡೆಯುತ್ತಿತ್ತು ಎನ್ನಲಾಗಿದ್ದು, ಈ ವೇಳೆ ಕಿಟಕಿಯಿಂದ ತೂರಿ ಬಂದ ಕಬ್ಬಿಣದ ರಾಡ್ ಪ್ರಯಾಣಿಕನ ಸಾವಿಗೆ ಕಾರಣವಾಗಿದೆ.
ಈ ಮಧ್ಯೆ, ನಿರ್ಮಾಣ ಹಂತದ ರೈಲ್ವೆ ಕಾಮಗಾರಿಯಿಂದ ಈ ಅವಘಢ ನಡೆದಿದೆ ಎಂಬ ಆರೋಪವನ್ನ ರೈಲ್ವೆ ಅಧಿಕಾರಿಗಳು ಸ್ಪಷ್ಟವಾಗಿ ನಿರಾಕರಿಸಿದ್ದಾರೆ. ಹೀಗಾಗಿ ರೈಲ್ವೆ ಪೊಲೀಸ್ ಪಡೆ(ಆರ್‌ಪಿಎಫ್) ಮತ್ತು ಜನರಲ್ ರೈಲ್ವೆ ಪೊಲೀಸ್(ಜಿಆರ್‌ಪಿ)ಸಿಬ್ಬಂದಿಯನ್ನು ಒಳಗೊಂಡ ಜಂಟಿ ತನಿಖೆಗೆ ಆದೇಶಿಸಲಾಗಿದೆ ಎಂದು ಸಿಪಿಆರ್‌ಒ, ಎನ್‌ಸಿಆರ್, ಹಿಮಾಂಶು ಉಪಾಧ್ಯಾಯ ಅವರು ತಿಳಿಸಿದ್ದಾರೆ.