ಡಿಸೆಂಬರ್ 21ರಿಂದ ಧರ್ಮ ರಕ್ಷಾ ಅಭಿಯಾನ: ವಿಹೆಚ್ ಪಿಯಿಂದ 'ಲವ್ ಜಿಹಾದ್' ಆರೋಪದ ಸುಮಾರು 400 ಕೇಸ್ ಗಳ ಪಟ್ಟಿ ಬಿಡುಗಡೆ
ಕಳೆದ ಕೆಲವು ವರ್ಷಗಳಲ್ಲಿ 420ಕ್ಕೂ ಹೆಚ್ಚು 'ಲವ್ ಜಿಹಾದ್' ಪ್ರಕರಣಗಳು ವರದಿಯಾಗಿರುವುದಾಗಿ ವಿಶ್ವ ಹಿಂದೂ ಪರಿಷತ್ ಜಂಟಿ ರಾಷ್ಟ್ರೀಯ ಕಾರ್ಯದರ್ಶಿ ಡಾ. ಸುರೇಂದ್ರ ಜೈನ್ ಆರೋಪಿಸಿದ್ದಾರೆ.
Published: 02nd December 2022 03:21 PM | Last Updated: 02nd December 2022 04:10 PM | A+A A-

ಸಾಂದರ್ಭಿಕ ಚಿತ್ರ
ನವದೆಹಲಿ: ಕಳೆದ ಕೆಲವು ವರ್ಷಗಳಲ್ಲಿ 420ಕ್ಕೂ ಹೆಚ್ಚು 'ಲವ್ ಜಿಹಾದ್' ಪ್ರಕರಣಗಳು ವರದಿಯಾಗಿರುವುದಾಗಿ ವಿಶ್ವ ಹಿಂದೂ ಪರಿಷತ್ ಜಂಟಿ ರಾಷ್ಟ್ರೀಯ ಕಾರ್ಯದರ್ಶಿ ಡಾ. ಸುರೇಂದ್ರ ಜೈನ್ ಆರೋಪಿಸಿದ್ದಾರೆ.
ಲವ್ ಜಿಹಾದಿ ಚಟುವಟಿಕೆಗಳನ್ನು ಹೆಚ್ಚಾಗುತ್ತಿರುವುದು ಮತ್ತು ಮತಾಂತರದ ವಿರುದ್ಧ ಜನರಲ್ಲಿ ಅರಿವು ಮೂಡಿಸಲು ಡಿಸೆಂಬರ್ 21 ರಿಂದ 31 ರವರೆಗೂ ರಾಷ್ಟ್ರದಾದ್ಯಂತ 'ಧರ್ಮ ರಕ್ಷ ಅಭಿಯಾನ' ವನ್ನು ಆಯೋಜಿಸಲಾಗುವುದು ಎಂದು ಅವರು ತಿಳಿಸಿದರು. ಭಜರಂಗ ದಳ ಕೂಡಾ ಡಿಸೆಂಬರ್ 1 ರಿಂದ 19ರವರೆಗೂ ದೇಶಾದ್ಯಂತ ಎಲ್ಲಾ ಬ್ಲಾಕ್ ಗಳಲ್ಲಿ ಶೌರ್ಯ ಯಾತ್ರೆ ನಡೆಸಲಿದೆ ಎಂದರು.
ಲವ್ ಜಿಹಾದ್ ಆರೋಪದ 420 ಘಟನೆಗಳ ಪಟ್ಟಿಯನ್ನು ಬಿಡುಗಡೆ ಮಾಡಿದ ಡಾ. ಸುರೇಂದ್ರ ಜೈನ್, ಲವ್ ಜಿಹಾದ್ ಜಿಹಾದ್‌ನ ಅತ್ಯಂತ ಹೇಯ ಮತ್ತು ಅಮಾನವೀಯ ರೂಪವಾಗಿದೆ. ಇಂತಹ ಚಟುವಟಿಕೆಯನ್ನು ತಡೆಯಲು ದೇಶದ ಹೆಣ್ಣುಮಕ್ಕಳಲ್ಲಿ ಜಾಗೃತಿ ಮೂಡಿಸಲು ದುರ್ಗಾ ವಾಹಿನಿ ಪ್ರತಿಬಂಧಕ ಪಡೆ ರಚಿಸಲಾಗುವುದು, ಸಾಮಾಜಿಕ ಅಸಮಾಧಾನ ಮತ್ತು ರಾಷ್ಟ್ರೀಯ ಭದ್ರತೆಗೆ ಬೆದರಿಕೆಗಳನ್ನು ಉಂಟುಮಾಡುವ ಲವ್ ಜಿಹಾದ್ ಮತ್ತು ಕಾನೂನುಬಾಹಿರ ಮತಾಂತರಗಳನ್ನು ತಡೆಗಟ್ಟಲು ಬಲವಾದ ಕೇಂದ್ರ ಕಾನೂನಿನ ಬಲವಾದ ಅಗತ್ಯವಿದೆ ಎಂದು ಅವರು ಹೇಳಿದರು.
10,000 ಕ್ರಿಶ್ಚಿಯನ್ ಹುಡುಗಿಯರು ಲವ್ ಜಿಹಾದ್‌ಗೆ ಬಲಿಯಾಗಿದ್ದು, 2000 ಹುಡುಗಿಯರು ಹೈದರಾಬಾದ್‌ನಿಂದ ಕಾಣೆಯಾಗಿದ್ದಾರೆ ಎಂಬ ಕೇರಳ ಮತ್ತು ಕರ್ನಾಟಕ ಚರ್ಚ್ ಗಳ ಹೇಳಿಕೆ ಉಲ್ಲೇಖಿಸಿದ ಅವರು, "ಇದಕ್ಕಾಗಿ, ಹೈಕೋರ್ಟ್ ರಾಜ್ಯ ಸರ್ಕಾರದಿಂದ ವಿವರಣೆಯನ್ನು ಕೇಳುತ್ತಿದೆ ಎಂದರು.
ಹಿಮಾಚಲ ಮತ್ತು ಲಡಾಖ್‌ನಂತಹ ಶಾಂತಿ ಪ್ರಿಯ ರಾಜ್ಯಗಳಲ್ಲೂ ಲವ್ ಜಿಹಾದ್‌ನಿಂದ ತೊಂದರೆಗೀಡಾದ ನಂತರ ಆಕ್ರೋಶ ಕಂಡುಬರುತ್ತಿದೆ. ತಮ್ಮ ಸಮುದಾಯದ ಹುಡುಗಿಯರನ್ನೂ ಕೂಡಾ ಲವ್ ಜಿಹಾದ್ ಬಲೆಗೆ ಬೀಳಿಸಿ ಸಿರಿಯಾ ಮತ್ತು ಆಫ್ತಾನಿಸ್ತಾನಕ್ಕೆ ಕಳುಹಿಸಲಾಗುತ್ತಿದೆ ಎಂದು ಕೇರಳದ ಚರ್ಚ್ ಕೂಡಾ ಆರೋಪಿಸಿದೆ ಎಂದು ಡಾ. ಜೈನ್ ತಿಳಿಸಿದರು.