ನಮ್ಮದು ಸ್ತ್ರೀ ಸಂವೇದಿ ಸಂವಿಧಾನ; ಸಮಾನ ಮತದಾನದ ಹಕ್ಕಿನಿಂದಾಗಿ ಮಹಿಳೆಯರ ಸಬಲೀಕರಣ: ಸಿಜೆಐ ಚಂದ್ರಚೂಡ್
ಭಾರತದ ಸಂವಿಧಾನವು ಸ್ತ್ರೀ ಸಂವೇದಿ ಸಂವಿಧಾನವಾಗಿದ್ದು, ಇದು ಭಾರತೀಯ ಕಲ್ಪನೆಯ ನೈಜ ಉತ್ಪನ್ನವಾಗಿದೆ ಎಂದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ಹೇಳಿದ್ದಾರೆ.
Published: 03rd December 2022 02:59 PM | Last Updated: 03rd December 2022 05:16 PM | A+A A-

ನ್ಯಾಯಮೂರ್ತಿ ಡಿವೈ ಚಂದ್ರಚೂಡ್
ನವದೆಹಲಿ: ಭಾರತದ ಸಂವಿಧಾನವು ಸ್ತ್ರೀ ಸಂವೇದಿ ಸಂವಿಧಾನವಾಗಿದ್ದು, ಇದು ಭಾರತೀಯ ಕಲ್ಪನೆಯ ನೈಜ ಉತ್ಪನ್ನವಾಗಿದೆ ಎಂದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ಹೇಳಿದ್ದಾರೆ.
ಡಾ. ಎಲ್ ಎಂ ಸಿಂಘ್ವಿ ಎಂಟನೇ ಸ್ಮಾರಕ ಉಪನ್ಯಾಸದ ಭಾಗವಾಗಿ “ಸಮಾನ ವಯಸ್ಕ ಮತದಾನ (ಯುಎಎಫ್): ಭಾರತದ ರಾಜಕೀಯ ಪರಿವರ್ತನೆಯನ್ನು ಸಾಮಾಜಿಕ ಪರಿವರ್ತನೆಯಾಗಿ ಮಾರ್ಪಡಿಸುವುದು” ಎಂಬ ವಿಷಯವಾಗಿ ಅವರು ಉಪನ್ಯಾಸ ನೀಡಿದ ಅವರು, “ನಮ್ಮ ಸಂವಿಧಾನವು ಸ್ತ್ರೀ ಸಂವೇದಿ ಸಂವಿಧಾನವಾಗಿದ್ದು, ಅದು ಭಾರತೀಯ ಕಲ್ಪನೆಯ ನೈಜ ಉತ್ಪನ್ನವಾಗಿದೆ. ಸಾಮಾಜಿಕ ಅಸಮಾನತೆ ತೊಡೆದು ಹಾಕಲು ರಾಜಕೀಯ ಸಮಾನತೆ ಸಾಕಾಗದು ಎಂಬುದು ಸಂವಿಧಾನ ಕರಡು ರೂಪಿಸಿದವರಿಗೆ ತಿಳಿದಿತ್ತು. ಇಲ್ಲಿ ಯುಎಎಫ್ ಪ್ರಮುಖ ಪಾತ್ರವಹಿಸಿದೆ. ಸಮಾಜದ ಅಂಚಿನಲ್ಲಿರುವವರಿಗೆ ಸಂವಿಧಾನ ಹಕ್ಕು ಕಲ್ಪಿಸಿದೆ.. ಆ ಮೂಲಕ ಅವರ ಸಬಲೀಕರಣಕ್ಕೆ ದಿಟ್ಟ ಹೆಜ್ಜೆ ಇಡಲಾಗಿದೆ” ಎಂದರು.
ಇದನ್ನೂ ಓದಿ: ವೈವಾಹಿಕ ವಿವಾದ ಪ್ರಕರಣಗಳಿಗಾಗಿ ಸುಪ್ರೀಂ ಕೋರ್ಟ್ ನಿಂದ ಮಹಿಳಾ ಪೀಠ ರಚನೆ
"ಅಧಿಕಾರ ಮತ್ತು ಹಕ್ಕುಗಳನ್ನು ನಿರಾಕರಿಸಲ್ಪಟ್ಟವರೇ ಇಂದು ಸಂಸತ್ತಿನ ಸಂಯೋಜನೆಯನ್ನು ನಿರ್ಧರಿಸುವ ಶಕ್ತಿಯಾಗಿ ಹೊರಹೊಮ್ಮಿದ್ದಾರೆ. ತಮ್ಮ ಶಕ್ತಿಯ ಬಗ್ಗೆ ನಂಬಿಕೆ ಇರಿಸಿಕೊಳ್ಳುವ ಹಕ್ಕನ್ನೂ ಕಳೆದುಕೊಂಡಿದ್ದ ಸಾಮಾಜಿಕ ಸಮುದಾಯಗಳಿಗೆ ಹಕ್ಕುಗಳನ್ನು ನೀಡುವ ಮೂಲಕ ಸಮಾನ ವಯಸ್ಕ ಮತದಾನವು (ಯುಎಎಫ್) ಸಾಮಾಜಿಕ ಪರಿವರ್ತನೆಗೆ ಕಾರಣವಾಗಿದೆ" ಎಂದು ಹೇಳಿದರು.
ಇದನ್ನೂ ಓದಿ: "ನ್ಯಾಯಾಲಯಗಳು ಜನರನ್ನು ತಲುಪಬೇಕು": ಸಂವಿಧಾನ ದಿನ ಕಾರ್ಯಕ್ರಮದಲ್ಲಿ ಸಿಜೆಐ
ಐತಿಹಾಸಿಕವಾಗಿ ಅಧಿಕಾರವು ಕೆಲವರ ಕೈಯಲ್ಲಿ ಮಾತ್ರವೇ ಕೇಂದ್ರೀಕೃತವಾಗಿತ್ತು ಎಂದು ಹೇಳಿದ ಅವರು, ಅಧಿಕಾರ ಇಲ್ಲದವರನ್ನು ಹಲವು ರೀತಿಯಲ್ಲಿ ತುಳಿತಕ್ಕೆ ಗುರಿಪಡಿಸಲಾಗಿದೆ. ಪ್ರಜಾಪ್ರಭುತ್ವದ ರಚನೆಯನ್ನು ಅಳವಡಿಸಿಕೊಂಡ ಸಂದರ್ಭದಲ್ಲಿ ಸ್ವಾತಂತ್ರ್ಯವು ಕೆಲವರದ್ದು ಮಾತ್ರವೇ ಆಗಿತ್ತು. ಸವಲತ್ತುಗಳನ್ನು ಹೊಂದಿದವರಿಗೆ ಮಾತ್ರವೇ ಮತದಾನ ಮಾಡುವ ಹಕ್ಕಿತ್ತು. ಇದು ಸಮಾಜದಲ್ಲಿನ ಪ್ರಭಾವ ಮತ್ತು ಪ್ರಾಬಲ್ಯವನ್ನು ತೋರಿಸುತ್ತಿತ್ತು. ಈ ಹಿಂದೆ ಮತದಾನ ಮಾಡಲು ಅವಕಾಶ ಹೊಂದಿಲ್ಲದ, ಸಂವಿಧಾನದಿಂದಾಗಿ ಮತದಾನದ ಅವಕಾಶ ಪಡೆದವರ ದೃಷ್ಟಿಯಿಂದ ಚುನಾವಣಾ ಪ್ರಕ್ರಿಯೆಯಲ್ಲಿನ ಭಾಗವಹಿಸುವಿಕೆಯನ್ನು ನೋಡಬೇಕು. ದಲಿತ ಸಮುದಾಯದ ವಿಚಾರದಲ್ಲಿ ಸಮಾನ ವಯಸ್ಕ ಮತದಾನ ಪ್ರಮುಖ ಪಾತ್ರವಹಿಸಿದೆ” ಎಂದರು. ಡಾ. ಬಿ ಆರ್ ಅಂಬೇಡ್ಕರ್ ಅವರ ದೃಷ್ಟಿಯಲ್ಲಿ ಸಮಾನ ವಯಸ್ಕ ಮತದಾನದ ಹಕ್ಕಿನ ಪರಿಕಲ್ಪನೆಯು ಈ ಕಾರಣಗಳಿಂದಾಗಿ ರಾಜಿರಹಿತವಾದುದಾಗಿತ್ತು ಎಂದು ಚಂದ್ರಚೂಡ್ ತಿಳಿಸಿದರು.