ಹಿಂದೂಗಳು ಮುಸ್ಲಿಂ ಸೂತ್ರವನ್ನು ಅಳವಡಿಸಿಕೊಳ್ಳಬೇಕು; ಭಾವನೆಗಳಿಗೆ ನೋವುಂಟು ಮಾಡಿದ್ದಕ್ಕೆ ಕ್ಷಮೆಯಾಚಿಸಿದ ಅಜ್ಮಲ್

ಆಲ್ ಇಂಡಿಯಾ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ ಮುಖ್ಯಸ್ಥ ಮತ್ತು ಅಸ್ಸಾಂನ ಲೋಕಸಭಾ ಸಂಸದ ಬದ್ರುದ್ದೀನ್ ಅಜ್ಮಲ್ ಅವರು ಹಿಂದೂ ಸಮುದಾಯವನ್ನು ಗುರಿಯಾಗಿಟ್ಟುಕೊಂಡು ಹೇಳಿದ್ದ ಹೇಳಿಕೆಗೆ ಕ್ಷಮೆಯಾಚಿಸಿದ್ದಾರೆ.
ಬದ್ರುದ್ದೀನ್ ಅಜ್ಮಲ್
ಬದ್ರುದ್ದೀನ್ ಅಜ್ಮಲ್

ಗುವಾಹಟಿ: ಆಲ್ ಇಂಡಿಯಾ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ ಮುಖ್ಯಸ್ಥ ಮತ್ತು ಅಸ್ಸಾಂನ ಲೋಕಸಭಾ ಸಂಸದ ಬದ್ರುದ್ದೀನ್ ಅಜ್ಮಲ್ ಅವರು ಹಿಂದೂ ಸಮುದಾಯವನ್ನು ಗುರಿಯಾಗಿಟ್ಟುಕೊಂಡು ಹೇಳಿದ್ದ ಹೇಳಿಕೆಗೆ ಕ್ಷಮೆಯಾಚಿಸಿದ್ದಾರೆ ಮತ್ತು ರಾಜ್ಯದಾದ್ಯಂತ ಅವರ ವಿರುದ್ಧ ಪೊಲೀಸ್ ದೂರುಗಳು ದಾಖಲಾಗಿದ್ದರೂ, ಅದು ಹುಟ್ಟುಹಾಕಿದ ವಿವಾದದ ಬಗ್ಗೆ ನನಗೆ ನಾಚಿಕೆಯಾಗುತ್ತಿದೆ ಎಂದು ಹೇಳಿದ್ದಾರೆ.

ಆದರೆ, ತಮ್ಮ ಹೇಳಿಕೆಯನ್ನು ತಿರುಚಲಾಗಿದೆ ಮತ್ತು ಅವರು ಯಾವುದೇ ಸಮುದಾಯವನ್ನು ಗುರಿಯಾಗಿಸಿಕೊಂಡಿಲ್ಲ ಎಂದು ಸಮರ್ಥಿಸಿಕೊಂಡಿದ್ದಾರೆ.

ಅಜ್ಮಲ್ ಅವರ ರಾಜಕೀಯ ವಿರೋಧಿಗಳು ಗುಜರಾತ್ ವಿಧಾನಸಭೆ ಚುನಾವಣೆಗೆ ಅವರ ಟೀಕೆಗಳನ್ನು ಬಳಸಿಕೊಂಡರು ಮತ್ತು ಎಐಯುಡಿಎಫ್ ಮುಖ್ಯಸ್ಥರು ಪಶ್ಚಿಮ ರಾಜ್ಯದಲ್ಲಿ ಅಧಿಕಾರವನ್ನು ಉಳಿಸಿಕೊಳ್ಳಲು ಪ್ರಯತ್ನಿಸುತ್ತಿರುವ ಬಲಪಂಥೀಯ ಪಕ್ಷವನ್ನು 'ಪಾರುಮಾಡಲು' ಬಿಜೆಪಿಯ ಮಾರ್ಗವನ್ನು ಅನುಸರಿಸುತ್ತಿದ್ದಾರೆ ಎಂಬ ಆರೋಪಗಳು ಕೇಳಿಬಂದವು.

ಅಜ್ಮಲ್ ಅವರ ವಿವಾದಾತ್ಮಕ ಹೇಳಿಕೆಗಳ ಹಿಂದೆ ಕೇಸರಿ ಪಕ್ಷದ ಜೊತೆಗಿನ ಕುತಂತ್ರವೇ ಕಾರಣ ಎಂದು ಆರೋಪಿಸಿ ಟಿಎಂಸಿ ಇಲ್ಲಿ ಅವರ ಪ್ರತಿಕೃತಿ ದಹಿಸಿತು. ಆದಾಗ್ಯೂ ಬಿಜೆಪಿ ರಾಜ್ಯದಲ್ಲಿ ವಿರೋಧ ಪಕ್ಷದಲ್ಲಿರುವ ಅಜ್ಮಲ್‌ನಿಂದ ದೂರವಿತ್ತು.

'ನಾನು ಯಾವುದೇ ವ್ಯಕ್ತಿಯನ್ನು ಗುರಿಯಾಗಿಸಿಕೊಂಡಿಲ್ಲ ಮತ್ತು 'ಹಿಂದೂ' ಎಂಬ ಪದವನ್ನು ಬಳಸಿಲ್ಲ. ನಾನು ಯಾರ ಹೃದಯವನ್ನು ಮುರಿಯಲು ಬಯಸಲಿಲ್ಲ' ಎಂದು ಅವರು ಮಧ್ಯ ಅಸ್ಸಾಂನ ಹೊಜೈ ರೈಲು ನಿಲ್ದಾಣದಲ್ಲಿ ಸುದ್ದಿಗಾರರಿಗೆ ತಿಳಿಸಿದರು.

'ಆದರೆ, ಇದೊಂದು ಸಮಸ್ಯೆಯಾಯಿತು ಮತ್ತು ಅದಕ್ಕಾಗಿ ನಾನು ವಿಷಾದಿಸುತ್ತೇನೆ. ಇದಕ್ಕಾಗಿ ನನಗೆ ನಾಚಿಕೆಯಾಗುತ್ತಿದೆ. ನನ್ನಂತಹ ಹಿರಿಯ ವ್ಯಕ್ತಿಗೆ ಈ ರೀತಿಯಾಗಬಾರದು. ನನ್ನ ಹೇಳಿಕೆಗಳನ್ನು ತಿರುಚಲಾಗಿದೆ' ಎಂದು ಹೇಳಿದ್ದಾರೆ.

ತಮ್ಮ ವಿರುದ್ಧ ದಾಖಲಾಗಿರುವ ಪ್ರಕರಣಗಳ ಕುರಿತು ಪ್ರತಿಕ್ರಿಯಿಸಿದ ಅವರು, 'ಪೊಲೀಸ್ ಪ್ರಕರಣಗಳು ರಾಜಕಾರಣಿಗಳ ಗ್ರಾಫ್ ಅನ್ನು ಮೇಲಕ್ಕೇರಿಸುತ್ತವೆ. ಅನೇಕ ಹಿಂದೂ ನಾಯಕರು ಪ್ರತಿದಿನ ಮುಸ್ಲಿಮರ ವಿರುದ್ಧ ಮಾತನಾಡುತ್ತಾರೆ. ಆದರೆ, ನಾವು ಅವರ ವಿರುದ್ಧ ಪ್ರಕರಣಗಳನ್ನು ದಾಖಲಿಸಿಲ್ಲ. ಎಲ್ಲರಿಗೂ ಸಮಾನವಾದ ಅಭಿವೃದ್ಧಿ ಮತ್ತು ಹಕ್ಕುಗಳು ನನ್ನ ಹೇಳಿಕೆಗಳ ತಿರುಳಾಗಿತ್ತು. ಆದರೆ, ಅದಕ್ಕೆ ವಿಭಿನ್ನ ಧ್ವನಿಯನ್ನು ನೀಡಲಾಗಿದೆ' ಎಂದು ಅವರು ಹೇಳಿದರು.

ಶುಕ್ರವಾರ ಮಾಧ್ಯಮ ಸಂಸ್ಥೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಅಜ್ಮಲ್ ಅವರು, ಮುಸ್ಲಿಂ ಪುರುಷರು 20 ರಿಂದ 22ನೇ ವಯಸ್ಸಿನಲ್ಲಿ ಮದುವೆಯಾಗುತ್ತಾರೆ. ಮುಸ್ಲಿಂ ಮಹಿಳೆಯರು ಸಹ ಸರ್ಕಾರದ ಅನುಮತಿ ಮೇರೆಗೆ 18ನೇ ವಯಸ್ಸಿನಲ್ಲಿ ಮದುವೆಯಾಗುತ್ತಾರೆ. ಆದರೆ, ಹಿಂದೂಗಳು ಮದುವೆಗೆ ಮುನ್ನ ಒಬ್ಬೊಬ್ಬರು ಎರಡು ಅಥವಾ ಮೂರು ಅಕ್ರಮ ಸಂಬಂಧಗಳನ್ನು ಇಟ್ಟುಕೊಳ್ಳುತ್ತಾರೆ. ಅವರು ಮಕ್ಕಳನ್ನು ಹೆರುವುದಿಲ್ಲ, ಜೀವನವನ್ನು ಆನಂದಿಸಿ ಹಣ ಉಳಿಸುತ್ತಾರೆ ಅಷ್ಟೇ ಎಂದು ಹೇಳಿದ್ದರು.

ಅಸ್ಸಾಂ ರಾಷ್ಟ್ರೀಯ ಪರಿಷತ್ (ಎಜೆಪಿ) ಶನಿವಾರ ರಾಜ್ಯದ ವಿವಿಧ ಭಾಗಗಳಲ್ಲಿ ಎಐಯುಡಿಎಫ್ ಮುಖ್ಯಸ್ಥರ ವಿರುದ್ಧ ಪೊಲೀಸ್ ದೂರುಗಳನ್ನು ದಾಖಲಿಸಿದೆ. ಇದರ ರಾಜ್ಯ ಉಪಾಧ್ಯಕ್ಷ ದುಲು ಅಹಮದ್ ಅವರು ಇಲ್ಲಿನ ಹಟಿಗಾಂವ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದರೆ, ಹೈಲಕಂಡಿ ಮತ್ತು ಧುಬ್ರಿಯಲ್ಲೂ ಇದೇ ರೀತಿಯ ದೂರುಗಳು ದಾಖಲಾಗಿವೆ.

ದೂರು ಸ್ವೀಕರಿಸಿರುವುದನ್ನು ಪೊಲೀಸರು ಖಚಿತಪಡಿಸಿದ್ದು, ಈ ಬಗ್ಗೆ ತನಿಖೆ ಆರಂಭಿಸಲಾಗಿದೆ ಎಂದು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com