ಸಿಂಗಾಪುರದಲ್ಲಿ ಉದ್ಯೋಗ ಭರವಸೆ; ಆನ್‌ಲೈನ್ ವಂಚನೆಯಲ್ಲಿ 23 ಲಕ್ಷ ರೂಪಾಯಿ ಕಳೆದುಕೊಂಡ ತಮಿಳುನಾಡಿನ ಪ್ರಾಧ್ಯಾಪಕ
ಕೋವಿಡ್-19 ಸಮಯದಲ್ಲಿ ಸೌದಿ ಅರೇಬಿಯಾದಿಂದ ಹಿಂದಿರುಗಿದ ನಂತರ ನಿರುದ್ಯೋಗಿಯಾಗಿದ್ದ ತಿರುಚ್ಚಿ ಮೂಲದ ಪ್ರೊಫೆಸರ್‌ವೊಬ್ಬರು ಆನ್‌ಲೈನ್ ವಂಚನೆಗೆ ಬಲಿಯಾಗಿದ್ದು, 23.5 ಲಕ್ಷ ರೂ. ಕಳೆದುಕೊಂಡಿದ್ದಾರೆ.
Published: 04th December 2022 12:48 PM | Last Updated: 04th December 2022 12:48 PM | A+A A-

ಪ್ರಾತಿನಿಧಿಕ ಚಿತ್ರ
ಚೆನ್ನೈ: ಕೋವಿಡ್-19 ಸಮಯದಲ್ಲಿ ಸೌದಿ ಅರೇಬಿಯಾದಿಂದ ಹಿಂದಿರುಗಿದ ನಂತರ ನಿರುದ್ಯೋಗಿಯಾಗಿದ್ದ ತಿರುಚ್ಚಿ ಮೂಲದ ಪ್ರೊಫೆಸರ್‌ವೊಬ್ಬರು ಆನ್‌ಲೈನ್ ವಂಚನೆಗೆ ಬಲಿಯಾಗಿದ್ದು, 23.5 ಲಕ್ಷ ರೂ. ಕಳೆದುಕೊಂಡಿದ್ದಾರೆ.
ಸೌದಿ ಅರೇಬಿಯಾದಲ್ಲಿ ಶಿಕ್ಷಕ ಹುದ್ದೆ ಕಳೆದುಕೊಂಡ ನಂತರ ತಿರುಚ್ಚಿ ಜಿಲ್ಲೆಯ ಮುಸ್ರಿ ತಾಲೂಕಿನ ತಿರುಮುರುಗನ್ ನಗರದ ಪ್ರೇಮ್ ನವಾಸ್ ಎಂಬುವವರು ಆನ್‌ಲೈನ್ ಉದ್ಯೋಗ ಸೈಟ್‌ಗಳ ಮೂಲಕ ವಿದೇಶದಲ್ಲಿ ಹೊಸ ಉದ್ಯೋಗಾವಕಾಶಕ್ಕಾಗಿ ಹುಡುಕಾಟ ನಡೆಸುತ್ತಿದ್ದರು ಎಂದು ತಿರುಚ್ಚಿ ಪೊಲೀಸರು ಐಎಎನ್‌ಎಸ್‌ಗೆ ತಿಳಿಸಿದ್ದಾರೆ.
ಸಿಂಗಾಪುರದ ನ್ಯಾಷನಲ್ ಯೂನಿವರ್ಸಿಟಿಯಲ್ಲಿ ಪ್ರೊಫೆಸರ್ ಹುದ್ದೆಗೆ ಮಾಸಿಕ 6 ಲಕ್ಷ ರೂ. ವೇತನ ನೀಡುವುದಾಗಿ ಭರವಸೆ ನೀಡಿ ವ್ಯಕ್ತಿಯೊಬ್ಬ ತನ್ನನ್ನು ಸಂಪರ್ಕಿಸಿದ್ದ. ಆತ ತನ್ನೊಂದಿಗೆ ಸ್ಕೈಪ್ ಮೂಲಕ ಮಾತನಾಡಿದ್ದಾನೆ ಎಂದು ಪ್ರೇಮ್ ನವಾಸ್ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.
ಕಂಪ್ಯೂಟರ್ ಸೈನ್ಸ್‌ನಲ್ಲಿ ಪಿಎಚ್‌ಡಿ ಪದವಿ ಪಡೆದಿರುವ ಪ್ರೇಮ್ ನವಾಸ್‌ರನ್ನು ಬಲೆಗೆ ಬೀಳಿಸಿದ ವಂಚಕ, ಹಣವನ್ನು ಮೂರು ಕಂತುಗಳಲ್ಲಿ ವಿವಿಧ ಬ್ಯಾಂಕ್ ಖಾತೆಗಳಿಗೆ ಜಮೆ ಮಾಡಿಸಲಾಗಿದೆ. ನೋಂದಣಿ ಶುಲ್ಕಗಳು, ಅವರ ಪ್ರಮಾಣಪತ್ರಗಳ ಪರಿಶೀಲನೆ ಮತ್ತು ಸಿಂಗಾಪುರದ ರಾಷ್ಟ್ರೀಯ ವಿಶ್ವವಿದ್ಯಾಲಯದಿಂದ (ಎನ್ಎಸ್‌ಯು) ನಿರಾಕ್ಷೇಪಣಾ ಪ್ರಮಾಣಪತ್ರಕ್ಕೆ (ಎನ್ಒಸಿ) ಎಂದು ಹೇಳಿ ಹಣವನ್ನು ತೆಗೆದುಕೊಂಡಿದ್ದಾರೆ.
ವಂಚಕನು ಮೂರು ವಿಭಿನ್ನ ಫೋನ್ ಸಂಖ್ಯೆಗಳು ಮತ್ತು ಸ್ಕೈಪ್ ಐಡಿಗಳು ಮತ್ತು ಎರಡು ಇಮೇಲ್ ಐಡಿಗಳ ಮೂಲಕ ತನ್ನನ್ನು ಸಂಪರ್ಕಿಸಿದ್ದಾನೆ ಎಂದು ಪ್ರಾಧ್ಯಾಪಕರು ದೂರಿನಲ್ಲಿ ತಿಳಿಸಿದ್ದಾರೆ.
ತಿರುಚ್ಚಿ ಪೊಲೀಸರು ತಮಿಳುನಾಡು ಪೊಲೀಸರ ಸೈಬರ್ ವಿಭಾಗವನ್ನು ಸಂಪರ್ಕಿಸಿದ್ದು, ತನಿಖೆ ಮುಂದುವರಿದಿದೆ ಮತ್ತು ಸೈಬರ್ ವಿಭಾಗವು ಎಲ್ಲಾ ದೃಷ್ಟಿಕೋನಗಳಿಂದ ತನಿಖೆ ನಡೆಸುತ್ತಿದೆ ಎಂದು ಪೊಲೀಸ್ ಮೂಲಗಳು ಐಎಎನ್‌ಎಸ್‌ಗೆ ತಿಳಿಸಿವೆ.