ಕೇಂದ್ರ ಸರ್ಕಾರ ಜಿ20 ಲೋಗೋಗೆ ಕಮಲ ಹೊರತುಪಡಿಸಿ ಬೇರೆ ರಾಷ್ಟ್ರೀಯ ಚಿಹ್ನೆ ಬಳಸಬಹುದಿತ್ತು: ಮಮತಾ
ಜಿ20 ಲಾಂಛನದಲ್ಲಿ ಕಮಲದ ಬಳಕೆ "ಒಂದು ಸಮಸ್ಯೆ ಅಲ್ಲ". ಆದರೆ ಈ ವಿಷಯದ ಬಗ್ಗೆ ಹೊರಗೆ ಚರ್ಚಿಸಿದರೆ, ದೇಶಕ್ಕೆ ಕೆಟ್ಟ ಹೆಸರು ಬರಬಹುದು ಎಂಬ ಕಾರಣದಿಂದ ನಾನು ಸುಮ್ಮನಿದ್ದೆ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ...
Published: 05th December 2022 04:08 PM | Last Updated: 16th December 2022 01:01 PM | A+A A-

ಸಿಎಂ ಮಮತಾ ಬ್ಯಾನರ್ಜಿ
ಕೋಲ್ಕತ್ತಾ: ಜಿ20 ಲಾಂಛನದಲ್ಲಿ ಕಮಲದ ಬಳಕೆ "ಒಂದು ಸಮಸ್ಯೆ ಅಲ್ಲ". ಆದರೆ ಈ ವಿಷಯದ ಬಗ್ಗೆ ಹೊರಗೆ ಚರ್ಚಿಸಿದರೆ, ದೇಶಕ್ಕೆ ಕೆಟ್ಟ ಹೆಸರು ಬರಬಹುದು ಎಂಬ ಕಾರಣದಿಂದ ನಾನು ಸುಮ್ಮನಿದ್ದೆ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಸೋಮವಾರ ಹೇಳಿದ್ದಾರೆ.
ಜಿ20 ಲಾಂಛನಕ್ಕೆ ಕಮಲವನ್ನು ಹೊರತುಪಡಿಸಿ ಇತರ ಯಾವುದೇ ರಾಷ್ಟ್ರೀಯ ಚಿಹ್ನೆಯನ್ನು ಕೇಂದ್ರ ಸರ್ಕಾರ ಆಯ್ಕೆ ಮಾಡಬಹುದಿತ್ತು. ಏಕೆಂದರೆ ಆ ಹೂವು ರಾಜಕೀಯ ಪಕ್ಷವನ್ನು ಪ್ರತಿನಿಧಿಸುತ್ತದೆ ಎಂದು ಸಿಎಂ ಪ್ರತಿಪಾದಿಸಿದರು.
ಭಾರತೀಯ ಜನತಾ ಪಕ್ಷದ ಬಗ್ಗೆ ಪ್ರಚಾರ ಪಡೆಯುವ ಉದ್ದೇಶದಿಂದ ಕೇಂದ್ರ ಸರ್ಕಾರ ಜಿ20 ಲೋಗೋದಲ್ಲಿ ಕಮಲವನ್ನು ಬಳಸಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.
ಈ ಆರೋಪದ ಬಗ್ಗೆ ಪ್ರತಿಕ್ರಿಯಿಸಿರುವ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಹೂವು ದೇಶದ ಸಾಂಸ್ಕೃತಿಕ ಅಸ್ಮಿತೆಯ ಭಾಗವಾಗಿದೆ ಎಂದು ಹೇಳಿದ್ದಾರೆ.
ಇದನ್ನು ಓದಿ: ಸಿರಿಸಿಲ್ಲಾ ನೇಕಾರನ G20 ಲಾಂಛನ ಕಂಡು ಬೆರಗಾದ ಪ್ರಧಾನಿ ಮೋದಿ!
ನವದೆಹಲಿಗೆ ತೆರಳುವ ಮುನ್ನ ನಗರದ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮಮತಾ ಬ್ಯಾನರ್ಜಿ, "ನಾನೂ ಅದನ್ನು(ಕಮಲದ ಲೋಗೋ) ನೋಡಿದ್ದೇನೆ. ಇದು ನಮ್ಮ ದೇಶಕ್ಕೆ ಸಂಬಂಧಿಸಿದ ವಿಷಯವಾದ್ದರಿಂದ ನಾವು ಏನನ್ನೂ ಹೇಳುತ್ತಿಲ್ಲ. ಈ ಬಗ್ಗೆ ಹೊರಗೆ ಚರ್ಚಿಸಿದರೆ ದೇಶಕ್ಕೆ ಒಳ್ಳೆಯದಲ್ಲ" ಎಂದಿದ್ದಾರೆ.
ರಾಷ್ಟ್ರ ರಾಜಧಾನಿಯಲ್ಲಿ, 2023ರಲ್ಲಿ ನಡೆಯುವ ಜಿ20 ಶೃಂಗಸಭೆಯ ಪೂರ್ವಸಿದ್ಧತಾ ಪ್ರಕ್ರಿಯೆಯ ಕುರಿತು ಚರ್ಚಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಕರೆದ ಸರ್ವಪಕ್ಷ ಸಭೆಯಲ್ಲಿ ಸಿಎಂ ಮಮತಾ ಭಾಗವಹಿಸಲಿದ್ದಾರೆ.