ಗುಜರಾತ್ ಚುನಾವಣೆ 2ನೇ ಹಂತ: ಈವರೆಗೂ ಶೇ.34.74ರಷ್ಟು ಮತದಾನ, ಮತದಾರರಿಗೆ ಧನ್ಯವಾದ ಹೇಳಿದ ಪ್ರಧಾನಿ ಮೋದಿ

ಗುಜರಾತ್ ರಾಜ್ಯ ವಿಧಾನಸಭಾ ಚುನಾವಣೆಯ 2ನೇ ಹಾಗೂ ಕೊನೆಯ ಹಂತದ ಮತದಾನ ಪ್ರಕ್ರಿಯೆ ಪ್ರಗತಿಯಲ್ಲಿದ್ದು, ಈ ವರೆಗೂ ಶೇ.34.74ರಷ್ಟು ಮತದಾನವಾಗಿದೆ.
ಪ್ರಧಾನಿ ಮೋದಿ
ಪ್ರಧಾನಿ ಮೋದಿ

ಗಾಂಧಿನಗರ (ಗುಜರಾತ್): ಗುಜರಾತ್ ರಾಜ್ಯ ವಿಧಾನಸಭಾ ಚುನಾವಣೆಯ 2ನೇ ಹಾಗೂ ಕೊನೆಯ ಹಂತದ ಮತದಾನ ಪ್ರಕ್ರಿಯೆ ಪ್ರಗತಿಯಲ್ಲಿದ್ದು, ಈ ವರೆಗೂ ಶೇ. 34.74 ರಷ್ಟು ಮತದಾನವಾಗಿದೆ.

ಇಂದು ಬೆಳಗ್ಗೆ 8 ಗಂಟೆಯಿಂದ ಬಿಗಿ ಭದ್ರತೆಯೊಂದಿಗೆ ಚುನಾವಣೆ ಆರಂಭವಾಗಿದ್ದು, ಮಧ್ಯಾಹ್ನ 1 ಗಂಟೆಯವರೆಗೆ ಶೇ. 34.74ರಷ್ಟು ಮತದಾನವಾಗಿದೆ ಎಂದು ತಿಳಿದುಬಂದಿದೆ.

2 ಹಂತದ ಮತದಾನದಲ್ಲಿ 14 ಜಿಲ್ಲೆಗಳ 93 ಕ್ಷೇತ್ರಗಳಿಗೆ ಮತದಾನ ಆರಂಭಗೊಂಡಿದೆ. ಇಂದು ನಡೆಯುವ ಮತದಾನದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರು ಕೂಡ ತಮ್ಮ ಹಕ್ಕು ಚಲಾಯಿಸಿದ್ದಾರೆ.

2ನೇ ಹಂತದ ಮತದಾನದಲ್ಲಿ 93 ಸೀಟುಗಳಲ್ಲಿ ಬಿಜೆಪಿ, ಕಾಂಗ್ರೆಸ್​, ಆಪ್​ ಸೇರಿದಂತೆ 61 ಪಕ್ಷಗಳ 833 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಇದರಲ್ಲಿ 285 ಸ್ವತಂತ್ರ ಅಭ್ಯರ್ಥಿಗಳು ಅದೃಷ್ಟ ಪರೀಕ್ಷೆಗೆ ಸಜ್ಜಾಗಿದ್ದಾರೆ.

ಕಳೆದ ಸಲ ಇಷ್ಟು ಕ್ಷೇತ್ರಗಳಲ್ಲಿ 51 ಸ್ಥಾನಗಳನ್ನು ಬಿಜೆಪಿ, 39 ಕಾಂಗ್ರೆಸ್​, 3 ಕ್ಷೇತ್ರಗಳಲ್ಲಿ ಸ್ವತಂತ್ರ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದರು.

ಮತದಾರರಿಗೆ ಧನ್ಯವಾದ ಹೇಳಿದ ಪ್ರಧಾನಿ ಮೋದಿ
ಈ ನಡುವೆ ಅಹಮದಾಬಾದ್​ನ ಸಾಬರಮತಿ ಕ್ಷೇತ್ರದ ರಾಣಿಪ್​ ಮತಗಟ್ಟೆಯಲ್ಲಿ ತಮ್ಮ ಹಕ್ಕು ಚಲಾಯಿಸಿದ ಪ್ರಧಾನಿ ಮೋದಿಯವರು, ಪ್ರಜಾಪ್ರಭುತ್ವ ಹಬ್ಬ ಆಚರಿಸುತ್ತಿರುವ ಮತದಾರರಿಗೆ ಧನ್ಯವಾದಗಳನ್ನು ಹೇಳಿದರು.

ಮತಹಕ್ಕು ಚಲಾಯಿಸಿದ ಬಳಿಕ ಮಾತನಾಡಿದ ಮೋದಿಯವರು, "ಪ್ರಜಾಪ್ರಭುತ್ವದ ಹಬ್ಬವನ್ನು ಗುಜರಾತ್, ಹಿಮಾಚಲ ಪ್ರದೇಶ ಮತ್ತು ದೆಹಲಿಯ ಜನರು ಬಹಳ ವಿಜೃಂಭಣೆಯಿಂದ ಆಚರಿಸಿದ್ದಾರೆ. ಈ ಸಂದರ್ಭದಲ್ಲಿ ನಾನು ದೇಶದ ಜನರಿಗೆ ಧನ್ಯವಾದ ಹೇಳಲು ಬಯಸುತ್ತೇನೆ. ಶಾಂತಿಯುತವಾಗಿ ಚುನಾವಣೆ ನಡೆಸಿದ ಚುನಾವಣಾ ಆಯೋಗವನ್ನೂ ನಾನು ಅಭಿನಂದಿಸಲು ಬಯಸುತ್ತೇನೆಂದು ಹೇಳಿದ್ದಾರೆ.

"ಪ್ರಜಾಪ್ರಭುತ್ವದ ಆಚರಣೆಗಾಗಿ, ನಾನು ದೇಶದ ನಾಗರಿಕರನ್ನು ಹೃತ್ಪೂರ್ವಕವಾಗಿ ಅಭಿನಂದಿಸುತ್ತೇನೆ ಮತ್ತು ಅವರನ್ನು ಅಭಿನಂದಿಸುತ್ತೇನೆ. ಚುನಾವಣಾ ಆಯೋಗವನ್ನೂ ನಾನು ಹೃತ್ಪೂರ್ವಕವಾಗಿ ಅಭಿನಂದಿಸುತ್ತೇನೆ. ಇದು ಅತ್ಯಂತ ಅದ್ಭುತವಾದ ರೀತಿಯಲ್ಲಿ ಚುನಾವಣೆಗಳನ್ನು ನಡೆಸುವ ಒಂದು ಶ್ರೇಷ್ಠ ಸಂಪ್ರದಾಯವನ್ನು ಬೆಳೆಸಿದೆ, ಇದು ಜಗತ್ತಿನಲ್ಲಿ ಭಾರತದ ಪ್ರಜಾಪ್ರಭುತ್ವದ ಘನತೆಯನ್ನು ಹೆಚ್ಚಿಸಿದೆ ಎಂದು ತಿಳಿಸಿದ್ದಾರೆ.

"ಗುಜರಾತ್ ಜನರು ವಿವೇಚನೆಯುಳ್ಳವರು. ಅವರು ಎಲ್ಲರ ಮಾತನ್ನು ಕೇಳುತ್ತಾರೆ. ಆದರೆ, ಸತ್ಯವನ್ನು ಒಪ್ಪಿಕೊಳ್ಳುವುದು ಅವರ ಸ್ವಭಾವವಾಗಿದೆ. ಆ ಸ್ವಭಾವದ ಪ್ರಕಾರ ಅವರು ಹೆಚ್ಚಿನ ಸಂಖ್ಯೆಯಲ್ಲಿ ಮತ ಚಲಾಯಿಸುತ್ತಿದ್ದಾರೆ. ನಾನು ಗುಜರಾತ್ ಮತದಾರರಿಗೆ ತುಂಬಾ ಕೃತಜ್ಞನಾಗಿದ್ದೇನೆಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com