ಮೊಬಿಲಿಟಿ ಒಪ್ಪಂದಕ್ಕೆ ಭಾರತ - ಜರ್ಮನಿ ಸಹಿ, ಪ್ರಮುಖ ಜಾಗತಿಕ ಸವಾಲುಗಳ ಬಗ್ಗೆ ಚರ್ಚೆ
ಭಾರತ ಮತ್ತು ಜರ್ಮನಿ ಸೋಮವಾರ ಮೊಬಿಲಿಟಿ ಪಾಲುದಾರಿಕೆ ಒಪ್ಪಂದಕ್ಕೆ ಸಹಿ ಹಾಕಿವೆ ಮತ್ತು ಉಕ್ರೇನ್ ಸಂಘರ್ಷ, ಅಫ್ಘಾನಿಸ್ತಾನದ ಪರಿಸ್ಥಿತಿ ಮತ್ತು ಪಾಕಿಸ್ತಾನದಿಂದ ಹೊರಹೊಮ್ಮುತ್ತಿರುವ ಗಡಿಯಾಚೆಗಿನ ಭಯೋತ್ಪಾದನೆ ಸೇರಿದಂತೆ ಪ್ರಮುಖ...
Published: 05th December 2022 05:37 PM | Last Updated: 05th December 2022 06:55 PM | A+A A-

ಎಸ್ ಜೈಶಂಕರ್ - ಅನ್ನಾಲೆನಾ ಬೇರ್ಬಾಕ್
ನವದೆಹಲಿ: ಭಾರತ ಮತ್ತು ಜರ್ಮನಿ ಸೋಮವಾರ ಮೊಬಿಲಿಟಿ ಪಾಲುದಾರಿಕೆ ಒಪ್ಪಂದಕ್ಕೆ ಸಹಿ ಹಾಕಿವೆ ಮತ್ತು ಉಕ್ರೇನ್ ಸಂಘರ್ಷ, ಅಫ್ಘಾನಿಸ್ತಾನದ ಪರಿಸ್ಥಿತಿ ಮತ್ತು ಪಾಕಿಸ್ತಾನದಿಂದ ಹೊರಹೊಮ್ಮುತ್ತಿರುವ ಗಡಿಯಾಚೆಗಿನ ಭಯೋತ್ಪಾದನೆ ಸೇರಿದಂತೆ ಪ್ರಮುಖ ಜಾಗತಿಕ ಸವಾಲುಗಳ ಕುರಿತು ಉಭಯ ದೇಶಗಳ ನಾಯಕರು ಸಮಗ್ರ ಚರ್ಚೆ ನಡೆಸಿದ್ದಾರೆ.
ಭಾರತಕ್ಕೆ ಭೇಟಿ ನೀಡಿರುವ ಜರ್ಮನಿ ವಿದೇಶಾಂಗ ಸಚಿವೆ ಅನ್ನಾಲೆನಾ ಬೇರ್ಬಾಕ್ ಅವರು ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಅವರೊಂದಿಗೆ ಮಾತುಕತೆ ನಡೆಸಿದರು. ಬಳಿಕ ಜಂಟಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಜೈಶಂಕರ್, ಉಭಯ ದೇಶಗಳು ಮೊಬಿಲಿಟಿ ಒಪ್ಪಂದಕ್ಕೆ ಸಹಿ ಹಾಕಿದ್ದು, ಇದರಿಂದ ಪರಸ್ಪರ ದೇಶದ ಜನರು ಎರಡೂ ದೇಶಗಳಲ್ಲಿ ಅಧ್ಯಯನ, ಸಂಶೋಧನೆ ಹಾಗೂ ಉದ್ಯೋಗ ಮಾಡಲು ಅವಕಾಶ ಮಾಡಿಕೊಟ್ಟಂತಾಗುತ್ತದೆ ಎಂದು ಹೇಳಿದರು.
ಇದೇ ವೇಳೆ ಜೈಶಂಕರ್ ಅವರು, ರಷ್ಯಾದಿಂದ ಭಾರತ ಕಚ್ಚಾ ತೈಲವನ್ನು ಆಮದು ಮಾಡಿಕೊಳ್ಳುವುದನ್ನು ಬಲವಾಗಿ ಸಮರ್ಥಿಸಿಕೊಂಡರು ಮತ್ತು ಇದು ಹೆಚ್ಚಾಗಿ ಮಾರುಕಟ್ಟೆ ಶಕ್ತಿಗಳಿಂದ ನಡೆಸಲ್ಪಡುತ್ತದೆ ಎಂದು ತಿಳಿಸಿದರು.
ಇದನ್ನು ಓದಿ: ವಿಶ್ವಸಂಸ್ಥೆ ಭದ್ರತಾ ಮಂಡಳಿ ಖಾಯಂ ಸದಸ್ಯತ್ವ; ಭಾರತಕ್ಕೆ ಫ್ರಾನ್ಸ್ ಬೆಂಬಲ, 3 ದೇಶಗಳ ಖಾಯಮತಿಗೆ ಬಿಗಿ ಪಟ್ಟು!
ಉಕ್ರೇನ್ ವಿಷಯದಲ್ಲಿ ಭಾರತದ ನಿಲುವು ಸ್ಪಷ್ಟವಾಗಿದೆ. ಇದು ಯುದ್ಧದ ಯುಗವಲ್ಲ ಮತ್ತು ಸಂಘರ್ಷವನ್ನು ಮಾತುಕತೆಯ ಮೂಲಕ ಪರಿಹರಿಸಬೇಕು ಎಂದು ಸ್ಪಷ್ಟವಾಗಿ ಹೇಳಿದೆ ಎಂದು ಜೈಶಂಕರ್ ತಿಳಿಸಿದರು.
ಭಾರತ ಅನೇಕ ದೇಶಗಳಿಗೆ ಮಾದರಿ ಎಂದು ಬಣ್ಣಿಸಿದ ಜರ್ಮನಿ ವಿದೇಶಾಂಗ ಸಚಿವೆ, ಬರ್ಲಿನ್ - ದೆಹಲಿಯೊಂದಿಗೆ ತನ್ನ ಭದ್ರತಾ ಸಹಕಾರವನ್ನು ಹೆಚ್ಚಿಸಲು ಬಯಸುತ್ತದೆ ಎಂದು ಹೇಳಿದರು.
ಇಂಧನ, ವ್ಯಾಪಾರ, ರಕ್ಷಣೆ ಮತ್ತು ಭದ್ರತೆ ಹಾಗೂ ಹವಾಮಾನ ಬದಲಾವಣೆ ಸೇರಿದಂತೆ ಹಲವಾರು ಕ್ಷೇತ್ರಗಳಲ್ಲಿ ದ್ವಿಪಕ್ಷೀಯ ಸಹಕಾರವನ್ನು ಮತ್ತಷ್ಟು ವಿಸ್ತರಿಸುವ ಮಾರ್ಗಗಳ ಕುರಿತು ಚರ್ಚಿಸಲು ಜರ್ಮನಿ ವಿದೇಶಾಂಗ ಸಚಿವರು ಎರಡು ದಿನಗಳ ಭೇಟಿಗಾಗಿ ಇಂದು ಬೆಳಗ್ಗೆ ದೆಹಲಿಗೆ ಆಗಮಿಸಿದ್ದರು.