ದೆಹಲಿ ಮಹಾನಗರ ಪಾಲಿಕೆ 250 ವಾರ್ಡ್ ಗಳ ಚುನಾವಣೆ ಮತ ಎಣಿಕೆ ಆರಂಭ: 32 ವಾರ್ಡ್ ಗಳಲ್ಲಿ ಬಿಜೆಪಿ ಮುಂದು, ಆಪ್ 8, ಕಾಂಗ್ರೆಸ್ 1ರಲ್ಲಿ ಮುಂಚೂಣಿ
ದೆಹಲಿ ಮಹಾನಗರ ಪಾಲಿಕೆ(MCD) ಚುನಾವಣೆಯ ಮತ ಎಣಿಕೆ ಇಂದು ಬುಧವಾರ ಬೆಳಗ್ಗೆ 8 ಗಂಟೆಗೆ ಆರಂಭಗೊಂಡಿದೆ. ದೆಹಲಿ ಮಹಾನಗರ ಪಾಲಿಕೆಯಲ್ಲಿ ಕಳೆದ 15 ವರ್ಷಗಳಿಂದ ಆಡಳಿತ ನಡೆಸುತ್ತಿದ್ದು ಈ ಬಾರಿ ಕೂಡ ಅಧಿಕಾರ ಉಳಿಸಿಕೊಳ್ಳುವ ಆಶಾವಾದದಲ್ಲಿದೆ.
Published: 07th December 2022 08:37 AM | Last Updated: 07th December 2022 04:57 PM | A+A A-

ಮತಗಟ್ಟೆ ಕೇಂದ್ರವೊಂದರ ಹೊರಗಿನ ದೃಶ್ಯ
ನವದೆಹಲಿ: ದೆಹಲಿ ಮಹಾನಗರ ಪಾಲಿಕೆ(MCD) ಚುನಾವಣೆಯ ಮತ ಎಣಿಕೆ ಇಂದು ಬುಧವಾರ ಬೆಳಗ್ಗೆ 8 ಗಂಟೆಗೆ ಆರಂಭಗೊಂಡಿದೆ. ದೆಹಲಿ ಮಹಾನಗರ ಪಾಲಿಕೆಯಲ್ಲಿ ಕಳೆದ 15 ವರ್ಷಗಳಿಂದ ಆಡಳಿತ ನಡೆಸುತ್ತಿದ್ದು ಈ ಬಾರಿ ಕೂಡ ಅಧಿಕಾರ ಉಳಿಸಿಕೊಳ್ಳುವ ಆಶಾವಾದದಲ್ಲಿದೆ. ಆಮ್ ಆದ್ಮಿ ಪಕ್ಷ ದೆಹಲಿ ಸರ್ಕಾರದ ಆಡಳಿತ ಜೊತೆಗೆ ಮಹಾನಗರ ಪಾಲಿಕೆ ಅಧಿಕಾರ ಚುಕ್ಕಾಣಿ ಹಿಡಿಯಲು ನೋಡುತ್ತಿದ್ದು ಈ ಮೂಲಕ ಡಬಲ್ ಎಂಜಿನ್ ಆಡಳಿತ ನಡೆಸುವ ಕನಸು ಕಾಣುತ್ತಿದೆ.
ಇತ್ತೀಚಿನ ಮತ ಎಣಿಕೆಯ ಟ್ರೆಂಡ್ ನೋಡಿದರೆ ಬಿಜೆಪಿ 32 ವಾರ್ಡ್ ಗಳಲ್ಲಿ ಮುಂಚೂಣಿಯಲ್ಲಿದ್ದು, ಆಪ್ 8 ಹಾಗೂ ಕಾಂಗ್ರೆಸ್ 1 ವಾರ್ಡ್ ನಲ್ಲಿ ಮುಂಚೂಣಿಯಲ್ಲಿದೆ.
ಮೊನ್ನೆ ಡಿಸೆಂಬರ್ 4ರಂದು ನಡೆದ ದೆಹಲಿ ಮಹಾನಗರ ಪಾಲಿಕೆ ಚುನಾವಣೆಯ ಮುನ್ನ ಆಡಳಿತ ಪಕ್ಷ ಮತ್ತು ಪ್ರತಿಪಕ್ಷಗಳ ನಡುವೆ ತೀವ್ರ ಪ್ರಚಾರದ ರಂಗೇರಿತ್ತು. ಬಿಜೆಪಿ ಮತ್ತು ಆಪ್ ಪಕ್ಷಗಳ ನಾಯಕರು ಪರಸ್ಪರ ವಾಗ್ದಾಳಿ ನಡೆಸಿದ್ದರು. ಇಂದು ಸಂಜೆ ಫಲಿತಾಂಶ ಹೊರಬೀಳಲಿದೆ.
ದೆಹಲಿ ಮಹಾನಗರ ಪಾಲಿಕೆಯ 250 ವಾರ್ಡ್ ಗಳಿಗೆ ಇಂದು ಬೆಳಗ್ಗೆ 8 ಗಂಟೆಗೆ ಮತ ಎಣಿಕೆ ಆರಂಭವಾಗಿದೆ. ಮಧ್ಯಾಹ್ನ ವೇಳೆಗೆ ಯಾವ ಪಕ್ಷ ಜಯಗಳಿಸಲಿದೆ ಎಂಬ ಸ್ಪಷ್ಟ ಚಿತ್ರಣ ಹೊರಬೀಳಲಿದೆ. ದೆಹಲಿ ಪೊಲೀಸರು ಮತ ಎಣಿಕೆ ಕೇಂದ್ರಗಳ ಸುತ್ತಮುತ್ತ ತೀವ್ರ ಭದ್ರತೆ ಕಲ್ಪಿಸಿದ್ದಾರೆ.
ಮೊನ್ನೆ 4 ರಂದು ನಡೆದ ಚುನಾವಣೆಯಲ್ಲಿ ಶೇಕಡಾ 50ರಷ್ಟು ಮತದಾನವಾಗಿದ್ದು ಒಟ್ಟಾರೆ 1,349 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಮತಗಟ್ಟೆ ಸಮೀಕ್ಷೆ ಪ್ರಕಾರ ಈ ಬಾರಿ ದೆಹಲಿ ಮಹಾನಗರ ಪಾಲಿಕೆಯನ್ನು ಆಪ್ ಚುಕ್ಕಾಣಿ ಹಿಡಿಯಲಿದೆ ಎನ್ನಲಾಗುತ್ತಿದೆ.
ಈ ಚುನಾವಣೆಯಲ್ಲಿ ಕಾಂಗ್ರೆಸ್ ಅಷ್ಟೊಂದು ಪೈಪೋಟಿ ನೀಡಿಲ್ಲ ಎನ್ನಬಹುದು. ಕೆಲವೊಂದು ಸೀಟುಗಳನ್ನು ಮಾತ್ರ ಕಾಂಗ್ರೆಸ್ ಗೆಲ್ಲಬಹುದು ಎನ್ನಲಾಗುತ್ತಿದೆ.
ತೀವ್ರ ಭದ್ರತೆ: 250 ವಾರ್ಡ್‌ಗಳಿಗೆ ಎಣಿಕೆ ಪ್ರಕ್ರಿಯೆ ನಡೆಸಲು ರಾಜ್ಯ ಚುನಾವಣಾ ಆಯೋಗ (ಎಸ್‌ಇಸಿ) ನಗರದಾದ್ಯಂತ 42 ಕೇಂದ್ರಗಳನ್ನು ಸ್ಥಾಪಿಸಿದೆ. ವಾರ್ಡ್‌ಗಳ ವಿಂಗಡಣೆಯ ನಂತರ 272 ಸ್ಥಾನಗಳನ್ನು ಕಡಿಮೆ ಮಾಡಿದ ನಂತರ ದೆಹಲಿ ಮಹಾನಗರ ಪಾಲಿಕೆಗೆ ನಡೆಯುತ್ತಿರುವ ಮೊದಲ ಚುನಾವಣೆಯಾಗಿದೆ. ಅರೆಸೇನಾ ಪಡೆಗಳ ಸುಮಾರು 20 ತುಕಡಿಗಳು ಮತ್ತು 10,000 ಕ್ಕೂ ಹೆಚ್ಚು ದೆಹಲಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ವಿದ್ಯುನ್ಮಾನ ಮತಯಂತ್ರಗಳನ್ನು (EVM) ಇರಿಸಲಾಗಿರುವ ಸ್ಟ್ರಾಂಗ್ ರೂಂಗಳ ಮೇಲೂ ಪೊಲೀಸರು ನಿಗಾ ಇರಿಸಿದ್ದಾರೆ.
#MCDResults | Counting centres being monitored through drones by Delhi Police.@NewIndianXpress @santwana99 @TheMornStandard pic.twitter.com/qz5MO5NGzI
— Ujwal Jalali (@ujwaljalali) December 7, 2022
ಚುನಾವಣಾ ಆಯೋಗದ ಅಧಿಕಾರಿಗಳು ಹೇಳುವ ಪ್ರಕಾರ, 68 ಚುನಾವಣಾ ವೀಕ್ಷಕರು ಮತ ಎಣಿಕೆಯ ಮೇಲ್ವಿಚಾರಣೆ ಮಾಡುತ್ತಾರೆ. ಅಲ್ಲದೆ, ಎಲೆಕ್ಟ್ರಾನಿಕ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್‌ನ 136 ಇಂಜಿನಿಯರ್‌ಗಳು ಯಾವುದೇ ತಾಂತ್ರಿಕ ಸಮಸ್ಯೆಗಳು ಉಂಟಾದರೆ ತಕ್ಷಣ ಬರಲು ಸಜ್ಜಾಗಿದ್ದಾರೆ. ಗೋಕಲ್ಪುರಿ, ದ್ವಾರಕಾ, ಓಖ್ಲಾ, ಮಯೂರ್ ವಿಹಾರ್, ಯಮುನಾ ವಿಹಾರ್, ಶಾಸ್ತ್ರಿ ಪಾರ್ಕ್ ಮತ್ತು ಪಿತಾಂಪುರ ಸೇರಿದಂತೆ ನಗರದ ವಿವಿಧ ಭಾಗಗಳಲ್ಲಿರುವ ವಿವಿಧ ಕೇಂದ್ರಗಳಲ್ಲಿ ಬೆಳಗ್ಗೆ 8 ಗಂಟೆಗೆ ಮತ ಎಣಿಕೆ ಆರಂಭವಾಗಲಿದೆ.
ಚುನಾವಣಾ ಆಯೋಗದ ವೆಬ್‌ಸೈಟ್, secdelhi.in ನಲ್ಲಿ ವೀಕ್ಷಿಸಲು ಫಲಿತಾಂಶಗಳ ಲೈವ್ ಅಪ್‌ಡೇಟ್‌ಗಳು ಲಭ್ಯವಿರುತ್ತವೆ; ಅದರ ಮೊಬೈಲ್ ಅಪ್ಲಿಕೇಶನ್, ನಿಗಮ್ ಚುನಾವ್ ದೆಹಲಿ ಆಗಿದೆ. ಮತ ಎಣಿಕೆ ಕೇಂದ್ರಗಳಲ್ಲಿ ಎಲ್‌ಇಡಿ ಪರದೆಗಳನ್ನು ಹಾಕಲಾಗಿದೆ.
ಕಳೆದ ಭಾನುವಾರ ನಡೆದ ಮತದಾನದಲ್ಲಿ ಶೇ.50.48ರಷ್ಟು ಮತದಾನವಾಗಿತ್ತು. ಶೇಕಡಾ 51.03 ಪುರುಷ ಮತದಾರರು ತಮ್ಮ ಹಕ್ಕು ಚಲಾಯಿಸಿದರೆ, ಪ್ರಕ್ರಿಯೆಯಲ್ಲಿ ಮಹಿಳೆಯರ ಭಾಗವಹಿಸುವಿಕೆ ಶೇಕಡಾ 49.83 ಆಗಿತ್ತು. ಗ್ರಾಮೀಣ ಭಾಗದ ಜನರು ಹೆಚ್ಚಿನ ಸಂಖ್ಯೆಯಲ್ಲಿ ಮತ ಚಲಾಯಿಸಲು ಬಂದಿದ್ದರು.