ದೇವೇಂದ್ರ ಫಡ್ನವೀಸ್
ದೇವೇಂದ್ರ ಫಡ್ನವೀಸ್

"ಕರ್ನಾಟಕದಲ್ಲಿ ಮಹಾರಾಷ್ಟ್ರದ ಬಸ್‌, ಟ್ರಕ್‌ಗಳ ಮೇಲೆ ದಾಳಿ ಕುರಿತು ಅಮಿತ್ ಶಾಗೆ ತಿಳಿಸುತ್ತೇನೆ": ಫಡ್ನವೀಸ್

ಕರ್ನಾಟಕದಲ್ಲಿ ಮಹಾರಾಷ್ಟ್ರದ ಟ್ರಕ್, ಬಸ್'ಗಳ ಮೇಲೆ ನಡೆದ ಕಲ್ಲು ತೂರಾಟ ಕುರಿತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಮಾಹಿತಿ ನೀಡುವುದಾಗಿ ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ಬುಧವಾರ ಹೇಳಿದ್ದಾರೆ.

ಮುಂಬೈ: ಕರ್ನಾಟಕದಲ್ಲಿ ಮಹಾರಾಷ್ಟ್ರದ ಟ್ರಕ್, ಬಸ್'ಗಳ ಮೇಲೆ ನಡೆದ ಕಲ್ಲು ತೂರಾಟ ಕುರಿತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಮಾಹಿತಿ ನೀಡುವುದಾಗಿ ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ಬುಧವಾರ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ, ಈ ಸಂಬಂಧ ಕರ್ನಾಟಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೊಂದಿಗೆ ದೂರವಾಣಿ ಕರೆ ಮೂಲಕ ಮಾತುಕತೆ ನಡೆಸಿದ್ದೇನೆ. ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರು ಮಹಾರಾಷ್ಟ್ರದ ಐದು ಲಾರಿಗಳ ಮೇಲೆ ಕಲ್ಲು ತೂರಾಟ ನಡೆಸಿದ್ದು, ಮಂಗಳವಾರ ಬೆಳಗಾವಿಯ ಹಿರೇಬಾಗೇವಾಡಿ ಟೋಲ್‌ ಬಳಿ ಕಾರ್ಯಕರ್ತರು ವಾಹನಗಳ ನಂಬರ್‌ ಪ್ಲೇಟ್‌ಗೆ ಕಪ್ಪು ಮಸಿ ಬಳಿದಿದ್ದಾರೆ. ಮುಖ್ಯಮಂತ್ರಿ ಬೊಮ್ಮಾಯಿ ಅವರು ಖುದ್ದು ಪರಿಶೀಲನೆ ನಡೆಸಿ, ಘಟನೆಯಲ್ಲಿ ಭಾಗಿಯಾದವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ್ದಾರೆ ಹಾಗೂ ಮಹಾರಾಷ್ಟ್ರದಿಂದ ಬರುವ ಬಸ್‌ಗಳು ಮತ್ತು ಟ್ರಕ್‌ಗಳ ಭದ್ರತೆ ನೀಡುವುದಾಗಿ ತಿಳಿಸಿದ್ದಾರೆಂದು ಹೇಳಿದರು.

“ಭಾರತದಲ್ಲಿ ಇಲ್ಲಿನ ನಾಗರೀಕರು ಎಲ್ಲಿಗೆ ಬೇಕಾದರೂ ಹೋಗಲು ಎಲ್ಲರಿಗೂ ಹಕ್ಕಿದೆ. ಯಾರನ್ನೂ ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಕರ್ನಾಟಕದ ಮುಖ್ಯಮಂತ್ರಿಗಳು ಕ್ಷಿಪ್ರವಾಗಿ ಕಾರ್ಯನಿರ್ವಹಿಸಬೇಕು ಮತ್ತು ಇತರ ರಾಜ್ಯಗಳಿಂದ ಕರ್ನಾಟಕಕ್ಕೆ ಬರುವ ಜನರನ್ನು ರಕ್ಷಿಸಬೇಕೆಂದು ಆಗ್ರಹಿಸಿದ್ದಾರೆ.

ಮಹಾರಾಷ್ಟ್ರ ಅಬಕಾರಿ ಸಚಿವ ಶಂಭುರಾಜ್ ದೇಸಾಯಿ ಅವರು ಮಾತನಾಡಿ, ಈ ಘಟನೆಯ ಬಗ್ಗೆ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರೊಂದಿಗೆ ಮಾತಕತೆ ನಡೆಸಲಾಗುವುದು. ಮಹಾರಾಷ್ಟ್ರದಿಂದ ಕರ್ನಾಟಕಕ್ಕೆ ಹೋಗುವ ಜನರ ಸುರಕ್ಷತೆ ಮತ್ತು ಭದ್ರತೆಯನ್ನು ಖಚಿತಪಡಿಸಿಕೊಳ್ಳಲು ಕರ್ನಾಟಕ ಪೊಲೀಸ್ ಮಹಾನಿರ್ದೇಶಕರೊಂದಿಗೂ ಮಾತನಾಡುತ್ತೇನೆ. ಮುಂದೆ ಇಂತಹ ಘರ್ಷಣೆಗಳನ್ನು ತಪ್ಪಿಸಬೇಕು ಎಂದು ತಿಳಿಸಿದರು.

ಶಿಂಧೆ ಬಣದ ಮತ್ತೊಬ್ಬ ನಾಯಕ ಮಾತನಾಡಿ, ಇದನ್ನು ನಾವು ಒಪ್ಪಿಕೊಳ್ಳುವುದಿಲ್ಲ. ನಾವು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿ ಗಡಿಯಲ್ಲಿನ ಪ್ರಸ್ತುತ ಪರಿಸ್ಥಿತಿಯ ಬಗ್ಗೆ ಮಾಹಿತಿ ನೀಡುತ್ತೇವೆಂದು ಹೇಳಿದ್ದಾರೆ.

ಮಹಾರಾಷ್ಟ್ರ ಬಿಜೆಪಿ ವಕ್ತಾರ ಕೇಶಯ್ ಉಪಾಧ್ಯಯ್ ಅವರು ಮಾತನಾಡಿ, ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರನ್ನು ಕಾಂಗ್ರೆಸ್ ಪ್ರಚೋದಿಸುತ್ತಿದೆ. ಕಲ್ಲು ತೂರಾಟ ನಡೆಸುವಂತೆ ಪ್ರೋತ್ಸಾಹಿಸುತ್ತಿದೆ. ಈ ಸಂಬಂಧ ತನಿಖೆಯಾಗಬೇಕೆಂದು ಆಗ್ರಹಿಸಿದ್ದಾರೆ.

Related Stories

No stories found.

Advertisement

X
Kannada Prabha
www.kannadaprabha.com