ಗುಜರಾತ್ ಚುನಾವಣಾ ಫಲಿತಾಂಶ ನಿರೀಕ್ಷಿತ, ಬಿಜೆಪಿ-ಆಪ್ ಒಳಒಪ್ಪಂದ ಕುರಿತು ಅನುಮಾನವಿದೆ: ರಾವತ್
ಗುಜರಾತ್ ರಾಜ್ಯ ವಿಧಾನಸಭಾ ಚುನಾವಣೆ ಫಲಿಕಾಂಶ ನಿರೀಕ್ಷೆಯಂತೆಯೇ ಬಂದಿದೆ. ಆದರೆ, ಬಿಜೆಪಿ ಹಾಗೂ ಆಮ್ ಆದ್ಮಿ ಪಕ್ಷಗಳ ನಡುವೆ ಒಳಒಪ್ಪಂದವಾಗಿರುವ ಬಗ್ಗೆ ಅನುಮಾನಗಳೂ ವ್ಯಕ್ತವಾಗುತ್ತಿದೆ ಎಂದು ಶಿವಸೇನೆ ನಾಯಕ ಸಂಜಯ್ ರಾವತ್ ಅವರು ಗುರುವಾರ ಹೇಳಿದ್ದಾರೆ.
Published: 08th December 2022 01:50 PM | Last Updated: 08th December 2022 02:11 PM | A+A A-

ಸಂಜಯ್ ರಾವತ್
ಮುಂಬೈ: ಗುಜರಾತ್ ರಾಜ್ಯ ವಿಧಾನಸಭಾ ಚುನಾವಣೆ ಫಲಿಕಾಂಶ ನಿರೀಕ್ಷೆಯಂತೆಯೇ ಬಂದಿದೆ. ಆದರೆ, ಬಿಜೆಪಿ ಹಾಗೂ ಆಮ್ ಆದ್ಮಿ ಪಕ್ಷಗಳ ನಡುವೆ ಒಳಒಪ್ಪಂದವಾಗಿರುವ ಬಗ್ಗೆ ಅನುಮಾನಗಳೂ ವ್ಯಕ್ತವಾಗುತ್ತಿದೆ ಎಂದು ಶಿವಸೇನೆ ನಾಯಕ ಸಂಜಯ್ ರಾವತ್ ಅವರು ಗುರುವಾರ ಹೇಳಿದ್ದಾರೆ.
ಗುಜರಾತ್ ವಿಧಾನಸಭೆ ಚುನಾವಣೆ ಮತ ಎಣಿಕೆ ಕಾರ್ಯ ಪ್ರಗತಿಯಲ್ಲಿದ್ದು, ಬಿಜೆಪಿ ಭಾರೀ ಮುನ್ನಡೆ ಸಾಧಿಸಿದೆ. ಈ ಸಂಬಂಧ ಸುದ್ದಿಗಾರರೊಂದಿಗೆ ಮಾತನಾಡಿದ ರಾವತ್ ಅವರು, ನಿರೀಕ್ಷಿಸಿದಂತೆಯೇ ಫಲಿತಾಂಶ ಬಂದಿದೆ. ಆದರೆ, ದೆಹಲಿ ನೀವಿಟ್ಟುಕೊಳ್ಳಿ, ಗುಜರಾತ್ ನಮಗೆ ಬಿಟ್ಟುಕೊಡಿ ಎಂಬಂತಹ ಒಳಒಪ್ಪಂದ ಬಿಜೆಪಿ-ಆಮ್ ಆದ್ಮಿ ಪಕ್ಷದ ನಡುವೆ ಆಗಿತ್ತೇ ಎಂಬುದರ ಬಗ್ಗೆ ಜನರಲ್ಲಿ ಅನುಮಾನಗಳು ಶುರುವಾಗಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಗುಜರಾತ್ ಮಾಡೆಲ್‌ಗೆ ಸಂದ ಜಯ: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ
ಕಳೆದ 15 ವರ್ಷಗಳಿಂದ ದೆಹಲಿ ಮಹಾನಗರ ಪಾಲಿಕೆಯಲ್ಲಿ ಅಧಿಕಾರ ಹೊಂದಿದ್ದ ಬಿಜೆಪಿಯನ್ನು ಈ ಬಾರಿ ಆಮ್ ಆದ್ಮಿ ಪಕ್ಷ ಸೋಲಿಸಿದೆ. ಈ ಫಲಿತಾಂಶವನ್ನು ಗಮನದಲ್ಲಿಟ್ಟುಕೊಂಡು ರಾವತ್ ಅವರು ಈ ಹೇಳಿಕೆಯನ್ನು ನೀಡಿದ್ದಾರೆ.
ಆದರೂ ದೆಹಲಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಆಪ್ ಗೆಲುವನ್ನು ಕೊಂಡಾಡಲೇಬೇಕಿದೆ. ಬಿಜೆಪಿಯಂತಹ ಪಕ್ಷದಿಂದ ದೆಹಲಿಯನ್ನು ಕಸಿದುಕೊಳ್ಳುವುದು ಸುಲಭದ ಮಾತಲ್ಲ ಎಂದಿದ್ದಾರೆ.
ಇದೇ ವೇಳೆ ಪಕ್ಷದ ಪ್ರಚಾರ ಕಾರ್ಯಕ್ರಮದಲ್ಲಿ ರಾಹುಲ್ ಗಾಂಧಿಯವರು ಗೈರು ಹಾಜರಾಗಿದ್ದನ್ನು ಸಮರ್ಥಿಸಿಕೊಂಡ ಅವರು, ಭಾರತ್ ಜೋಡೋ ಯಾತ್ರೆಗೂ ರಾಜಕೀಯಕ್ಕೂ ಯಾವುದೇ ಸಂಬಂಧವಿಲ್ಲ ಎಂದರು.
ಇದನ್ನೂ ಓದಿ: ಗುಜರಾತ್ ಚುನಾವಣೆಯೊಂದಿಗೆ ಎಎಪಿಗೆ ರಾಷ್ಟ್ರೀಯ ಪಕ್ಷದ ಸ್ಥಾನಮಾನ ಸಿಗಲಿದೆ: ಮನೀಶ್ ಸಿಸೋಡಿಯಾ
ಹಿಮಾಚಲ ಪ್ರದೇಶದಲ್ಲಿ ನಿರೀಕ್ಷೆಯಂತೆಯೇ ಕಾಂಗ್ರೆಸ್ ಹೋರಾಟ ಮಾಡುತ್ತಿದೆ. ಇದೊಂದು ಉತ್ತಮ ಬೆಳವಣಿಗೆಯಾಗಿದೆ ಎಂದು ಹೇಳಿದರು.
ಗುಜರಾತ್ ನಲ್ಲಿ ಬಿಜೆಪಿ ಗೆಲುವು ಸಾಧಿಸಿದ್ದರೆ, ದೆಹಲಿಯಲ್ಲಿ ಸೋಲು ಕಂಡಿದೆ. ಹಿಮಾಚಲ ಪ್ರದೇಶದಲ್ಲಿ ಗೆಲುವು ಸಾಧಿಸಲು ಸೆಣಸಾಟ ಮುಂದುವರೆಸಿದೆ. ಆದರೆ, ಕಾಂಗ್ರೆಸ್ ಇಲ್ಲಿ ಗೆಲುವು ಸಾಧಿಸಲಿದೆ. ಭವಿಷ್ಯದ ಸಮೀಕ್ಷೆಗಳ ದೃಷ್ಟಿಯಿಂದ ಇದು ಆಶಾದಾಯಕವಾಗಿದೆ, ಆದರೆ ಮತಗಳ ವಿಭಜನೆಯನ್ನು ತಪ್ಪಿಸಲು ಪ್ರತಿಪಕ್ಷಗಳು ಮಾತ್ರ ಒಗ್ಗೂಡಬೇಕಿದೆ. ಭಿನ್ನಾಭಿಪ್ರಾಯ, ಅಹಂಕಾರಗಳನ್ನು ಬದಿಗಿಟ್ಟು ಹೋರಾಟವನ್ನು ಒಟ್ಟಾಗಿ ಎದುರಿಸಿದರೆ, ದೇಶವು ಖಂಡಿತವಾಗಿಯೂ 2024ರಲ್ಲಿ ಬದಲಾವಣೆಯನ್ನು ಕಾಣಲಿದೆ ಎಂದು ಹೇಳಿದರು.