ಸಿಲ್ವರ್ ಲೈನ್ ಸೆಮಿ ಹೈಸ್ಪೀಡ್ ರೈಲ್ವೇ ಯೋಜನೆ ಕೈಬಿಟ್ಟಿಲ್ಲ: ಕೇರಳ ಸಿಎಂ ಪಿಣರಾಯಿ ವಿಜಯನ್
ಕೇಂದ್ರ ಸರ್ಕಾರದಿಂದ ಒಪ್ಪಿಗೆ ಸಿಕ್ಕ ನಂತರ ರಾಜ್ಯ ಸರ್ಕಾರ ಸಿಲ್ವರ್‌ಲೈನ್ ಸೆಮಿ ಹೈಸ್ಪೀಡ್ ರೈಲ್ವೇ ಯೋಜನೆಗೆ ಮುಂದಾಗಲಿದೆ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆ.
Published: 08th December 2022 10:28 PM | Last Updated: 08th December 2022 10:28 PM | A+A A-

ಪಿಣರಾಯಿ ವಿಜಯನ್
ತಿರುವನಂತಪುರಂ: ಕೇಂದ್ರ ಸರ್ಕಾರದಿಂದ ಒಪ್ಪಿಗೆ ಸಿಕ್ಕ ನಂತರ ರಾಜ್ಯ ಸರ್ಕಾರ ಸಿಲ್ವರ್‌ಲೈನ್ ಸೆಮಿ ಹೈಸ್ಪೀಡ್ ರೈಲ್ವೇ ಯೋಜನೆಗೆ ಮುಂದಾಗಲಿದೆ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆ.
ಸರ್ಕಾರ ಯೋಜನೆಯನ್ನು ಕೈಬಿಡುತ್ತದೆ ಅಥವಾ ಯೋಜನೆಯನ್ನು ಸ್ಥಗಿತಗೊಳಿಸುತ್ತದೆ ಎಂಬ ವದಂತಿಗಳು ಸುಳ್ಳು ಎಂದು ವಿಜಯನ್ ಹೇಳಿದರು. ರಾಜಕೀಯ ಕಾರಣಗಳಿಗಾಗಿ ಕೇಂದ್ರ ಸರ್ಕಾರ ಅಡೆತಡೆಗಳನ್ನು ಸೃಷ್ಟಿಸಿ ಯೋಜನೆಯನ್ನು ಸ್ಥಗಿತಗೊಳಿಸಿದೆ ಎಂದು ಪಿಣರಾಯಿ ಆರೋಪಿಸಿದ್ದಾರೆ. ವಿಧಾನಸಭೆಯಲ್ಲಿ ಯುಡಿಎಫ್ ಶಾಸಕ ರೋಜಿ ಎಂ ಜಾನ್ ಮುಂದೂಡಿಕೆ ನಿರ್ಣಯ ಅಂಗೀಕರಿಸುವಂತೆ ಸೂಚಿಸಿದರು.
ಈ ಮುಂದೂಡಿಕೆ ನಿರ್ಣಯವನ್ನು ಸ್ಪೀಕರ್ ಎಎನ್ ಶಂಸೀರ್ ನಿರಾಕರಿಸಿದ ನಂತರ ಪ್ರತಿಪಕ್ಷಗಳು ಸಭಾತ್ಯಾಗ ನಡೆಸಿದವು. ಯೋಜನಾ ಸಮೀಕ್ಷೆಯಿಂದ ಬಾಧಿತವಾಗಿರುವ ಭೂಮಾಲೀಕರ ಕಳವಳಗಳನ್ನು ಸರ್ಕಾರ ಪರಿಹರಿಸಬೇಕೆಂದು ಅವರು ಬಯಸಿದ್ದರು. ಸಿಲ್ವರ್‌ಲೈನ್ ಯೋಜನೆಗೆ ಸಂಬಂಧಿಸಿದಂತೆ ಸಾಮಾಜಿಕ ಪರಿಣಾಮದ ಸಮೀಕ್ಷೆಗೆ ಸರ್ಕಾರ ಭೂಮಿಯನ್ನು ಗುರುತಿಸಿರುವುದರಿಂದ ಭೂಮಾಲೀಕರು ಭೂಮಿಯನ್ನು ಮಾರಾಟ ಮಾಡಲು ಅಥವಾ ಅಡಮಾನ ಇಡಲು ಸಾಧ್ಯವಾಗುತ್ತಿಲ್ಲ ಎಂದು ಪ್ರತಿಪಕ್ಷಗಳು ಆರೋಪಿಸಿವೆ.
'ಈ ಯೋಜನೆಗೆ ಕೇಂದ್ರ ಸರ್ಕಾರ ತಾತ್ವಿಕ ಒಪ್ಪಿಗೆ ನೀಡಿದೆ. ಅಲ್ಲದೆ ಹಣಕಾಸಿಗಾಗಿ ಜಪಾನ್ ಇಂಟರ್ನ್ಯಾಷನಲ್ ಕೋಆಪರೇಷನ್ ಏಜೆನ್ಸಿಯೊಂದಿಗೆ ವ್ಯವಸ್ಥೆಗಳನ್ನು ಮಾಡಲಾಗಿದ್ದು, ಭೂಸ್ವಾಧೀನ ಮತ್ತು ಇತರ ಅನುಮತಿಗಳನ್ನು ತ್ವರಿತಗೊಳಿಸುವಂತೆ ಅವರು ರಾಜ್ಯ ಸರ್ಕಾರವನ್ನು ಕೇಳಿದ್ದರು. ಜಿಯೋಟೆಕ್ನಿಕಲ್, ಹೈಡ್ರಾಲಾಜಿಕಲ್ ಮತ್ತು ಸಮಗ್ರ ಪರಿಸರ ಪ್ರಭಾವದ ಮೌಲ್ಯಮಾಪನ (ಸಿಇಐಎ) ನಡೆಯುತ್ತಿದೆ ಎಂದು ಪಿಣರಾಯಿ ವಿಜಯನ್ ವಿಧಾನಸಭೆಗೆ ತಿಳಿಸಿದರು.
ಸಿಲ್ವರ್‌ಲೈನ್‌ಗಾಗಿ ಸಮೀಕ್ಷೆಯಲ್ಲಿ ತೊಡಗಿರುವ ಕಂದಾಯ ಅಧಿಕಾರಿಗಳನ್ನು ಮರುನಿಯೋಜನೆ ಮಾಡಲು ಕಂದಾಯ ಇಲಾಖೆ ಇತ್ತೀಚೆಗೆ ಆದೇಶ ನೀಡಿರುವುದು ಸರ್ಕಾರ ಯೋಜನೆಯಿಂದ ಹಿಂದೆ ಸರಿಯುವುದರ ಸೂಚನೆಯಾಗಿದೆ ಎಂದು ವಿಪಕ್ಷಗಳು ಆರೋಪಿಸಿದ್ದವು. ಇದಕ್ಕೆ ಪಿಣರಾಯಿ ಸಿಲ್ವರ್‌ಲೈನ್‌ಗೆ ಕೇಂದ್ರದ ಅನುಮತಿಗಾಗಿ ಕಾಯುತ್ತಿರುವಾಗ ಇತರ ವಿಷಯಗಳಿಗೆ ಅಧಿಕಾರಿಗಳ ಸೇವೆಯನ್ನು ಬಳಸಿಕೊಳ್ಳಲು ಮರುನಿಯೋಜನೆ ಮಾಡಲಾಗಿದೆ ಎಂದು ಹೇಳಿದರು.