ಗುಜರಾತ್: 2017ರ ಚುನಾವಣೆಯಲ್ಲಿ ಮುನಿಸಿಕೊಂಡಿದ್ದ ಪಾಟೀದಾರ್ ಸಮುದಾಯವನ್ನು 2022 ರಲ್ಲಿ ಬುಟ್ಟಿಗೆ ಹಾಕಿಕೊಂಡ ಬಿಜೆಪಿ!

2017ರ ಗುಜರಾತ್ ವಿಧಾನಸಭೆ ಚುನಾವಣೆಯಲ್ಲಿ ಕೋಟಾ ಆಂದೋಲನದ ಹಿನ್ನೆಲೆಯಲ್ಲಿ ಬಿಜೆಪಿ ಜೊತೆ ಮುನಿಸಿಕೊಂಡಿದ್ದ ಪಾಟೀದಾರ್ ಸಮುದಾಯ 2022 ರ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷವನ್ನು ಬೆಂಬಲಿಸುವ ಮೂಲಕ ಆಡಳಿತ ಪಕ್ಷಕ್ಕೆ ಹೆಚ್ಚು ಸೀಟುಗಳನ್ನು ಗೆಲ್ಲಲು ಸಹಾಯ ಮಾಡಿದೆ.
ಗುಜರಾತ್ ಚುನಾವಣೆ ಗೆದ್ದ ಸಂಭ್ರಮದಲ್ಲಿ ಬಿಜೆಪಿ ಕಾರ್ಯಕರ್ತರು
ಗುಜರಾತ್ ಚುನಾವಣೆ ಗೆದ್ದ ಸಂಭ್ರಮದಲ್ಲಿ ಬಿಜೆಪಿ ಕಾರ್ಯಕರ್ತರು

ಅಹಮದಾಬಾದ್: 2017ರ ಗುಜರಾತ್ ವಿಧಾನಸಭೆ ಚುನಾವಣೆಯಲ್ಲಿ ಕೋಟಾ ಆಂದೋಲನದ ಹಿನ್ನೆಲೆಯಲ್ಲಿ ಬಿಜೆಪಿ ಜೊತೆ ಮುನಿಸಿಕೊಂಡಿದ್ದ ಪಾಟೀದಾರ್ ಸಮುದಾಯ 2022 ರ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷವನ್ನು ಬೆಂಬಲಿಸುವ ಮೂಲಕ ಆಡಳಿತ ಪಕ್ಷಕ್ಕೆ ಹೆಚ್ಚು ಸೀಟುಗಳನ್ನು ಗೆಲ್ಲಲು ಸಹಾಯ ಮಾಡಿದೆ.

ರಾಜ್ಯದ ಪಾಟಿದಾರ್ ಪ್ರಾಬಲ್ಯವಿರುವ ಕ್ಷೇತ್ರಗಳಲ್ಲಿ ಬಿಜೆಪಿ ಅತ್ಯಂತ ಉತ್ತಮ ಸಾಧನೆ ಮಾಡಿದೆ,  ಗಣನೀಯ ಪ್ರಮಾಣದಲ್ಲಿ  ಪಾಟೇಲ್ ಜನಸಂಖ್ಯೆಯನ್ನು ಹೊಂದಿರುವ ಪ್ರತಿಯೊಂದು ಸ್ಥಾನವನ್ನು ಗೆದ್ದಿದೆ. 182 ಸದಸ್ಯ ಬಲದ ಗುಜರಾತ್ ವಿಧಾನಸಭೆಗೆ ಡಿಸೆಂಬರ್ 1 ಮತ್ತು 5 ರಂದು ಮತದಾನ ನಡೆದಿದ್ದು, ಡಿಸೆಂಬರ್ 8 ರಂದು ಮತ ಎಣಿಕೆ ನಡೆದಿದೆ.

ಸೌರಾಷ್ಟ್ರ ಪ್ರದೇಶದಲ್ಲಿ, 2017ರಲ್ಲಿ ಪಾಟಿದಾರ್ ಪ್ರಾಬಲ್ಯದ ಸ್ಥಾನಗಳಾದ ಮೊರ್ಬಿ, ಟಂಕರಾ, ಧೋರಾಜಿ ಮತ್ತು ಅಮ್ರೇಲಿಯನ್ನು ಕಾಂಗ್ರೆಸ್ ಗೆದ್ದಿತ್ತು. ಆದಾಗ್ಯೂ, ಈ ಎಲ್ಲಾ ಅಸೆಂಬ್ಲಿ ಕ್ಷೇತ್ರಗಳು ಈ ಬಾರಿ ಬಿಜೆಪಿ ಬ್ಯಾಗ್ ಸೇರಿವೆ.

ಪಾಟಿದಾರ್ ಪ್ರಾಬಲ್ಯದ ಸೂರತ್‌ನಲ್ಲಿ, AAP ಕೆಲವು ಸ್ಥಾನಗಳನ್ನು ಗಳಿಸಲು  ಯತ್ನಿಸುತ್ತಿತ್ತು .ಆದರೆ ಅಲ್ಲಿನ ಪಾಟೀದಾರ್ ಸಮುದಾಯ ಆಡಳಿತ ಪಕ್ಷವನ್ನ ಬೆಂಬಲಿಸಿತು. ಉತ್ತರ ಗುಜರಾತ್‌ನಲ್ಲಿ, ಐದು ವರ್ಷಗಳ ಹಿಂದೆ ಪಾಟಿದಾರ್ ಪ್ರಾಬಲ್ಯದ ಉಂಜಾ ಕ್ಷೇತ್ರವನ್ನ ಕಾಂಗ್ರೆಸ್ ಗೆದ್ದುಕೊಂಡಿತ್ತು, ಆದರೆ ಈ ಬಾರಿ ಅದು ಬಿಜೆಪಿ ಪಾಲಾಗಿದೆ.. 2022 ರ ಚುನಾವಣೆಗೆ ಮುಂಚಿತವಾಗಿ ಬಿಜೆಪಿ, ಪಾಟೀದಾರ್  ಸಮುದಾಯವನ್ನು ತಲುಪಲು ಎಲ್ಲಾ ರೀತಿಯ ಕಸರತ್ತು ಮಾಡಿತ್ತು.

ಪಕ್ಷವು ತನ್ನ ಮುಖ್ಯಮಂತ್ರಿ ವಿಜಯ್ ರೂಪಾನಿ ಅವರನ್ನು ಬಿಟ್ಟು ಸೆಪ್ಟೆಂಬರ್ 2021 ರಲ್ಲಿ  ಭೂಪೇಂದ್ರ ಪಟೇಲ್ ಅವರನ್ನು ಸಿಎಂ ಆಗಿ ಬದಲಾಯಿಸಿತು. ಆಡಳಿತಾರೂಢ ಪಕ್ಷವು ಪಾಟಿದಾರ್ ಕೋಟಾ ಆಂದೋಲನದ ನಾಯಕ ಹಾರ್ದಿಕ್ ಪಟೇಲ್ ಅವರನ್ನು ಕಾಂಗ್ರೆಸ್‌ನಿಂದ ತನ್ನ ಮಡಿಲಿಗೆ ಕರೆತಂದು ವಿರಾಮಗಮ್ ಅಸೆಂಬ್ಲಿ ಕ್ಷೇತ್ರದಿಂದ ಅವರನ್ನು ಕಣಕ್ಕಿಳಿಸಿತು. ಪಾಟೀದಾರ್ ಮೀಸಲಾತಿ ಚಳವಳಿಯಿಂದ ಮುನ್ನೆಲೆಗೆ ಬಂದವರು ಹಾರ್ದಿಕ್ ಪಟೇಲ್. ಪಟೇಲ್ ಸಮುದಾಯಕ್ಕೆ ಮೀಸಲಾತಿ ನೀಡಬೇಕೆಂದು ನಡೆಸಿದ್ದ ಹೋರಾಟದಿಂದ ಹಾರ್ದಿಕ್ ಭಾರೀ ಹೆಸರು ಗಳಿಸಿದ್ದರು. ಈ ಹೋರಾಟದಿಂದ ಗುಜರಾತ್​ನ ಯುವ ಸಮುದಾಯದ ನಾಯಕ ಎಂದೇ ರಾಷ್ಟ್ರದಾದ್ಯಂತ ಬಿಂಬಿತವಾಗಿದ್ದರು.

ಈ ಚಳವಳಿಯ ಮೂಲಕ ರಾಜಕೀಯಕ್ಕೆ ಜಿಗಿದ ಹಾರ್ದಿಕ್ ಪಟೇಲ್ ಮೊದಲು ಕಾಂಗ್ರೆಸ್​ ಸೇರಿದ್ದರು. ಆದರೆ ಕಾಂಗ್ರೆಸ್​ನ ನಾಯಕತ್ವದ ಜೊತೆ ಅವರಿಗೆ ಹೊಂದಾಣಿಕೆ ಆಗಲಿಲ್ವಂತೆ. ಅಲಲ್ದೇ ಕಾಂಗ್ರೆಸ್ ನಾಯಕರಿಂದಲೇ ಅವರು ಮೂಲೆಗುಂಪಾಗಿದ್ದರು.  ಇದೇ ಕಾರಣದಿಂದ ಕಾಂಗ್ರೆಸ್​ನಿಂದ ಬಿಜೆಪಿಗೆ ಜಿಗಿದ ಹಾರ್ದಿಕ್​ಗೆ ಭಾರೀ ಸ್ವಾಗತ ಸಿಕ್ಕಿತು.

2017ರ ಚುನಾವಣೆಯಲ್ಲಿ 182 ಸ್ಥಾನಗಳ ಪೈಕಿ 150 ಸ್ಥಾನಗಳನ್ನು ಗೆಲ್ಲುವ ಮಹತ್ವಾಕಾಂಕ್ಷೆಯ ಗುರಿಯನ್ನು ಹೊಂದಿದ್ದರೂ, ಬಿಜೆಪಿ ಕೇವಲ 99 ಸ್ಥಾನಗಳನ್ನು ಗಳಿಸಿತು. ಸಮುದಾಯದ ಅಂದಾಜಿನ ಪ್ರಕಾರ, ಗುಜರಾತ್‌ನಲ್ಲಿ ಪಾಟಿದಾರ್ ಮತದಾರರು ನಿರ್ಣಾಯಕ ಪಾತ್ರ ವಹಿಸುವ ಸುಮಾರು 40 ಸ್ಥಾನಗಳಿವೆ. ಈ ಕ್ಷೇತ್ರಗಳು ರಾಜ್ಯದ ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಹರಡಿಕೊಂಡಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com