ಸಿಬಿಐ ಅಧಿಕಾರಿಗಳಿಂದ ನನ್ನ ಪತಿ ಹತ್ಯೆ; ದೂರು ದಾಖಲಿಸಿದ ಬೊಗ್ಟುಯಿ ಹಿಂಸಾಚಾರ ಪ್ರಕರಣದ ಆರೋಪಿ ಪತ್ನಿ

ಬೊಗ್ಟುಯಿ ಹಿಂಸಾಚಾರ ಪ್ರಕರಣದ ಆರೋಪಿ ಲಲನ್ ಶೇಖ್ ಅವರು ಪಶ್ಚಿಮ ಬಂಗಾಳದ ಬಿರ್ಭೂಮ್ ಜಿಲ್ಲೆಯಲ್ಲಿ ಸಿಬಿಐ ಕಸ್ಟಡಿಯಲ್ಲಿ ಸೋಮವಾರ ಸಾವನ್ನಪ್ಪಿದ್ದು, ತನ್ನ ಪತಿಯನ್ನು ಸಿಬಿಐ ಅಧಿಕಾರಿಗಳೇ ಹತ್ಯೆ ಮಾಡಿದ್ದಾರೆ...
ಕೇಂದ್ರ ತನಿಖಾ ಸಂಸ್ಥೆ ಸಿಬಿಐ
ಕೇಂದ್ರ ತನಿಖಾ ಸಂಸ್ಥೆ ಸಿಬಿಐ

ಕೋಲ್ಕತ್ತಾ: ಬೊಗ್ಟುಯಿ ಹಿಂಸಾಚಾರ ಪ್ರಕರಣದ ಆರೋಪಿ ಲಲನ್ ಶೇಖ್ ಅವರು ಪಶ್ಚಿಮ ಬಂಗಾಳದ ಬಿರ್ಭೂಮ್ ಜಿಲ್ಲೆಯಲ್ಲಿ ಸಿಬಿಐ ಕಸ್ಟಡಿಯಲ್ಲಿ ಸೋಮವಾರ ಸಾವನ್ನಪ್ಪಿದ್ದು, ತನ್ನ ಪತಿಯನ್ನು ಸಿಬಿಐ ಅಧಿಕಾರಿಗಳೇ ಹತ್ಯೆ ಮಾಡಿದ್ದಾರೆ ಎಂದು ಆರೋಪಿಯ ಪತ್ನಿ ಆರೋಪಿಸಿದ್ದಾರೆ.

ಸಿಬಿಐ ಅಧಿಕಾರಿಗಳು ತನಿಖಾ ಪ್ರಕ್ರಿಯೆಯ ಭಾಗವಾಗಿ ಬೋಗ್ಟುಯಿ ಗ್ರಾಮಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ತನ್ನ ಪತಿ ಶೇಖ್‌ಗೆ ಕೊಲೆ ಬೆದರಿಕೆ ಹಾಕಿದ್ದರು ಎಂದು ಆರೋಪಿಸಿ ರೇಷ್ಮಾ ಬೀಬಿ ಮಂಗಳವಾರ ಬೆಳಗ್ಗೆ ರಾಂಪುರಹತ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಅಲ್ಲದೆ ಪ್ರಕರಣದಲ್ಲಿ ತನ್ನ ಪತಿಯ ಹೆಸರು ಕೈಬಿಡಲು 50 ಲಕ್ಷ ರೂಪಾಯಿಗೆ ಸಿಬಿಐ ಅಧಿಕಾರಿಗಳು ಬೇಡಿಕೆಯಿಟ್ಟಿದ್ದರು ಎಂದು ಆರೋಪಿಸಿದ್ದಾರೆ.

ಮಾರ್ಚ್‌ನಲ್ಲಿ ಕನಿಷ್ಠ 10 ಜನರ ಸಾವಿಗೆ ಕಾರಣವಾದ ಬೊಗ್ಟುಯಿ ಅಗ್ನಿ ಅವಘಡ ಮತ್ತು ಹಿಂಸಾಚಾರದ ಬಗ್ಗೆ ತನಿಖೆ ನಡೆಸುತ್ತಿರುವ ಸಿಬಿಐ, ರೇಷ್ಮಾ ಬೀಬಿ ಆರೋಪ "ಆಧಾರರಹಿತ" ಎಂದು ತಳ್ಳಿಹಾಕಿದೆ.

ಬೊಗ್ಟುಯಿ ಹಿಂಸಾಚಾರದ ಪ್ರಮುಖ ಆರೋಪಿ ಶೇಖ್ ಸೋಮವಾರ ರಾಂಪುರ್‌ಹತ್‌ನ ಅತಿಥಿ ಗೃಹದಲ್ಲಿ ಸ್ಥಾಪಿಸಲಾದ ತಾತ್ಕಾಲಿಕ ಸಿಬಿಐ ಕಚೇರಿಯ ವಾಶ್‌ರೂಮ್‌ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿದ್ದು, ಸಿಬಿಐ ಅಧಿಕಾರಿಗಳು ಆರೋಪಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಿದ್ದಾರೆ. ಆದರೆ ಆರೋಪಿ ಕುಟುಂಬ ಶೇಖ್ ಸಾವಿಗೆ ಅಧಿಕಾರಿಗಳ ಚಿತ್ರಹಿಂಸೆ ಕಾರಣ ಎಂದು ಆರೋಪಿಸಿದೆ. 

ಕೆಲವು ಕುಟುಂಬ ಸದಸ್ಯರು ಗ್ರಾಮಸ್ಥರೊಂದಿಗೆ ಸಿಬಿಐ ಕಚೇರಿಯ ಹೊರಗೆ 'ಗೋ ಬ್ಯಾಕ್ ಸಿಬಿಐ' ಫಲಕಗಳನ್ನು ಹಿಡಿದು ಧರಣಿ ನಡೆಸುತ್ತಿದ್ದಾರೆ. 

ಈ ಮಧ್ಯೆ, ಬಿರ್ಭೂಮ್ ಜಿಲ್ಲಾ ಪೊಲೀಸರು ಈಗಾಗಲೇ ಸಿಬಿಐ ಕಸ್ಟಡಿ ಸಾವಿನ ಬಗ್ಗೆ ತನಿಖೆ ಆರಂಭಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com