ರಾಜೀವ್ ಗಾಂಧಿ ಫೌಂಡೇಶನ್ ಕುರಿತ ಪ್ರಶ್ನೆಗಳ ತಪ್ಪಿಸಲು ಕಾಂಗ್ರೆಸ್ ಗಡಿ ಸಮಸ್ಯೆ ಪ್ರಸ್ತಾಪಿಸಿದೆ: ಅಮಿತ್ ಶಾ
ಭಾರತ ಮತ್ತು ಚೀನಾ ಸೈನಿಕರ ನಡುವಿನ ತವಾಂಗ್ ಘರ್ಷಣೆಯ ಕುರಿತು ಲೋಕಸಭೆಯಲ್ಲಿ ವಿರೋಧ ಪಕ್ಷಗಳು ಗದ್ದಲ ಸೃಷ್ಟಿಸಿದ್ದನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಮಂಗಳವಾರ ಖಂಡಿಸಿದ್ದಾರೆ.
Published: 13th December 2022 01:20 PM | Last Updated: 13th December 2022 01:52 PM | A+A A-

ಅಮಿತ್ ಶಾ
ನವದೆಹಲಿ: ಭಾರತ ಮತ್ತು ಚೀನಾ ಸೈನಿಕರ ನಡುವಿನ ತವಾಂಗ್ ಘರ್ಷಣೆಯ ಕುರಿತು ಲೋಕಸಭೆಯಲ್ಲಿ ವಿರೋಧ ಪಕ್ಷಗಳು ಗದ್ದಲ ಸೃಷ್ಟಿಸಿದ್ದನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಮಂಗಳವಾರ ಖಂಡಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಇಂದು ಲೋಕಸಭೆಯಲ್ಲಿ ಪ್ರತಿಪಕ್ಷಗಳು ಪ್ರಶ್ನೋತ್ತರ ಅವಧಿಗೆ ಅವಕಾಶ ನೀಡಲಿಲ್ಲ. ಸಂಸತ್ತಿನಲ್ಲಿ ರಕ್ಷಣಾ ಸಚಿವರು ಈ (ತವಾಂಗ್ ಮುಖಾಮುಖಿ) ಕುರಿತು ಹೇಳಿಕೆ ನೀಡುತ್ತಾರೆ ಎಂದು ಸಂಸದೀಯ ವ್ಯವಹಾರಗಳ ಸಚಿವರು ಸ್ಪಷ್ಟವಾಗಿ ಹೇಳಿದ್ದಾರೆ. ಆದರೂ, ವಿಪಕ್ಷಗಳು ಗದ್ದಲ ಮೂಡಿಸಿದ್ದು, ವಿಪಕ್ಷಗಳ ನಡವಳಿಕೆಯನ್ನು ನಾನು ಖಂಡಿಸುತ್ತೇನೆಂದು ಹೇಳಿದ್ದಾರೆ.
ರಾಜೀವ್ ಗಾಂಧಿ ಪ್ರತಿಷ್ಠಾನದ ಎಫ್‌ಸಿಆರ್‌ಎ ಉಲ್ಲಂಘನೆಯ ಕುರಿತು ಲೋಕಸಭೆಯಲ್ಲಿ ಪ್ರಶ್ನೆ ಎತ್ತುವುದನ್ನು ತಪ್ಪಿಸಲು ಪ್ರತಿಪಕ್ಷಗಳು ಭಾರತ-ಚೀನಾ ಘರ್ಷಣೆ ವಿಚಾರವನ್ನು ಪ್ರಸ್ತಾಪಿಸಿದವು ಎಂದು ಆರೋಪಿಸಿದರು.
ಪ್ರಶ್ನೋತ್ತರ ಅವಧಿಯ ಪಟ್ಟಿಯಲ್ಲಿದ್ದ ಪ್ರಶ್ನೆ ಸಂಖ್ಯೆ 5 ಅನ್ನು ನೋಡಿದ ಕೂಡಲೇ ಕಾಂಗ್ರೆಸ್"ಗೆ ಆತಂಕ ಶುರುವಾಗಿತ್ತು ಎಂದು ತಿಳಿಸಿದ್ದಾರೆ.
ವಿಪಕ್ಷಗಳು ಅವಕಾಶ ನೀಡಿದ್ದರೆ, 2005-2007ರ ಅವಧಿಯಲ್ಲಿ ರಾಜೀವ್ ಗಾಂಧಿ ಫೌಂಡೇಶನ್ ಚೀನಾ ರಾಯಭಾರ ಕಚೇರಿಯಿಂದ 1.35 ಕೋಟಿ ರೂಪಾಯಿ ಅನುದಾನವನ್ನು ಪಡೆದಿದೆ ಎಂದು ಸಂಸತ್ತಿನಲ್ಲಿ ಉತ್ತರ ನೀಡುತ್ತಿದ್ದೆ, ಇದು ಎಫ್‌ಸಿಆರ್‌ಎ ಪ್ರಕಾರ ಸೂಕ್ತವಲ್ಲ. ಅದು ಎಫ್ಸಿಆರ್ಎ ನಿಯಮದ ಉಲ್ಲಂಘನೆ ಹಿನ್ನೆಲೆಯಲ್ಲಿ ಗೃಹ ಸಚಿವಾಲಯ ರಿಜಿಸ್ಟ್ರೇಶನ್ ಅನ್ನು ರದ್ದುಪಡಿಸಿದೆ ಎಂದಿದ್ದಾರೆ.
ಇದೇ ವೇಳೆ ಗಡಿ ಘರ್ಷಣೆ ಕುರಿತು ಮಾತನಾಡಿ, ಚೀನಾಕ್ಕೆ ಭಾರತದ ಒಂದಿಂಚೂ ಭೂಮಿಯನ್ನು ಕಬಳಿಸಲು ಸಾಧ್ಯವಾಗಿಲ್ಲ. ತವಾಂಗ್ ಪ್ರದೇಶದಲ್ಲಿ ಭಾರತೀಯ ಸೈನಿಕರು ಧೈರ್ಯ ಮತ್ತು ಶೌರ್ಯದೊಂದಿಗೆ ತಕ್ಷಣವೇ ಚೀನಾ ಪಡೆಗೆ ತಕ್ಕ ಉತ್ತರ ನೀಡಿ ಹಿಮ್ಮೆಟ್ಟಿಸಿದೆ. ಪ್ರಧಾನಿ ಮೋದಿ ಇರುವವರೆಗೆ ಭಾರತದ ಒಂದಿಂಚೂ ಭೂಮಿಯನ್ನು ವಶಪಡಿಸಿಕೊಳ್ಳಲು ಸಾಧ್ಯವಿಲ್ಲ ಎಂದು ತಿಳಿಸಿದರು.