ದೆಹಲಿ ಆ್ಯಸಿಡ್ ದಾಳಿ ಪ್ರಕರಣ: ಫ್ಲಿಪ್ ಕಾರ್ಟ್, ಅಮೇಜಾನ್ ಗೆ ಮಹಿಳಾ ಆಯೋಗ ನೋಟಿಸ್

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 17 ವರ್ಷದ ಅಪ್ರಾಪ್ತೆ ಬಾಲಕಿ ಮೇಲೆ ನಡೆದ ಆ್ಯಸಿಡ್ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಮಹಿಳಾ ಆಯೋಗ ಖ್ಯಾತ ಇ-ಕಾಮರ್ಸ್ ತಾಣಗಳಾದ ಫ್ಲಿಪ್ ಕಾರ್ಟ್, ಅಮೇಜಾನ್ ಗೆ ನೋಟಿಸ್ ಜಾರಿ ಮಾಡಿದೆ.
ಆ್ಯಸಿಡ್ ದಾಳಿ
ಆ್ಯಸಿಡ್ ದಾಳಿ

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 17 ವರ್ಷದ ಅಪ್ರಾಪ್ತೆ ಬಾಲಕಿ ಮೇಲೆ ನಡೆದ ಆ್ಯಸಿಡ್ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಮಹಿಳಾ ಆಯೋಗ ಖ್ಯಾತ ಇ-ಕಾಮರ್ಸ್ ತಾಣಗಳಾದ ಫ್ಲಿಪ್ ಕಾರ್ಟ್, ಅಮೇಜಾನ್ ಗೆ ನೋಟಿಸ್ ಜಾರಿ ಮಾಡಿದೆ.

ಇಡೀ ದೇಶವನ್ನೇ ಬೆಚ್ಚಿ ಬೀಳಿಸಿರುವ ಈ ಆ್ಯಸಿಡ್ ದಾಳಿ ಪ್ರಕರಣದ ಆರೋಪಿಗಳು ಫ್ಲಿಪ್‌ಕಾರ್ಟ್‌ನಲ್ಲಿ ಆ್ಯಸಿಡ್ ಖರೀದಿಸಿದ್ದಾರೆ ಎಂಬು ಆತಂಕಕಾರಿ ಮಾಹಿತಿ ಪೊಲೀಸರ ತನಿಖೆಯಿಂದ ಬೆಳಕಿಗೆ ಬಂದಿದೆ. ಈ ಹಿನ್ನೆಲೆ ಸುಲಭವಾಗಿ ಆ್ಯಸಿಡ್ ಸಿಗುವಂತೆ ಮಾಡಿದ ಫ್ಲಿಪ್‌ಕಾರ್ಟ್‌ ಮತ್ತು ಅಮೆಜಾನ್ ಶಾಪಿಂಗ್‌ ಸೈಟ್‌ಗಳಿಗೆ ದೆಹಲಿ ಮಹಿಳಾ ಆಯೋಗ ನೋಟಿಸ್ ಜಾರಿ ಮಾಡಿದೆ. 

ಆ್ಯಸಿಡ್ ಖರೀದಿ ತರಕಾರಿ ಖರೀದಿಸಿದಷ್ಟು ಸುಲಭ!
ಆ್ಯಸಿಡ್ ಖರೀದಿ ತರಕಾರಿ ಖರೀದಿಸಿದಷ್ಟು ಸುಲಭ ಎಂದು ದಿಲ್ಲಿ ಮಹಿಳಾ ಆಯೋಗದ ಮುಖ್ಯಸ್ಥೆ ಸ್ವಾತಿ ಮಳಿವಾಲ್‌ ಹೇಳಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಸ್ವಾತಿ, ಆ್ಯಸಿಡ್ ಚಿಲ್ಲರೆ ಮಾರಾಟವನ್ನು ನಿಷೇಧಿಸದಿರುವುದು ದುರದೃಷ್ಟಕರ. ಮಾರುಕಟ್ಟೆಯಲ್ಲಿ ಎಗ್ಗಿಲ್ಲದೆ ಮಾರಾಟ ಮಾಡಲಾಗುತ್ತಿದೆ. ಸರ್ಕಾರ ಕಡ್ಡಾಯವಾಗಿ ಆ್ಯಸಿಡ್ ಚಿಲ್ಲರೆ ಮಾರಾಟವನ್ನು ನಿಷೇಧಿಸಬೇಕು ಎಂದು ಆಗ್ರಹಿಸಿದ್ದಾರೆ.

ಫ್ಲಿಪ್ ಕಾರ್ಟ್ ಪ್ರತಿಕ್ರಿಯೆ
ಇನ್ನು ಘಟನೆ ಸಂಬಂಧ ಫ್ಲಿಪ್ ಕಾರ್ಟ್ ಇಂಡಿಯಾ ಪ್ರತಿಕ್ರಿಯೆ ನೀಡಿದ್ದು, ಘಟನೆಯನ್ನು ಖಂಡಿಸಿದ್ದು ಮಾತ್ರವಲ್ಲದೇ ಮಾರಾಟಗಾರನನ್ನು ತನ್ನ ವೇದಿಕೆಯಿಂದ ಕಪ್ಪುಪಟ್ಟಿಗೆ ಸೇರಿಸಿದೆ ಮತ್ತು ತನಿಖಾ ಸಂಸ್ಥೆಗಳಿಗೆ ಎಲ್ಲಾ ಬೆಂಬಲವನ್ನು ನೀಡಲಾಗುತ್ತಿದೆ ಎಂದು ಹೇಳಿದೆ.

ಏನಿದು ಘಟನೆ?
ಬುಧವಾರ ನೈರುತ್ಯ ದೆಹಲಿಯ ದ್ವಾರಕದಲ್ಲಿ 12ನೇ ತರಗತಿಯ ವಿದ್ಯಾರ್ಥಿನಿ ಶಾಲೆಗೆ ಹೋಗಲು ರಸ್ತೆ ಬದಿಯಲ್ಲಿ ನಿಂತಿದ್ದ ವೇಳೆ ಇಬ್ಬರು ಬೈಕ್‌ನಲ್ಲಿ ಬಂದು ವಿದ್ಯಾರ್ಥಿನಿ ಮೇಲೆ ಆ್ಯಸಿಡ್ ಎರಚಿ ಪರಾರಿಯಾಗಿದ್ದರು. ಬಳಿಕ ಯುವತಿ ನೋವಿನಿಂದ ಬಳಲಿ ಓಡಿ ಹೋಗಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಪೊಲೀಸ್ ತನಿಖೆಯ ಪ್ರಕಾರ ಆ್ಯಸಿಡ್‌ ದಾಳಿ ನಡೆಸಲು 20 ವರ್ಷದ ಸಚಿನ್ ಆರೋರ ಎಂಬ ಯುವಕ ಸೆಪ್ಟೆಂಬರ್ ತಿಂಗಳಿನಿಂದಲೇ ವಿದ್ಯಾರ್ಥಿನಿ ಹಿಂದೆ ಬಿದ್ದಿದ್ದ. ಸಚಿನ್ ಆರೋರಗೆ 19 ವರ್ಷದ ಹರ್ಷಿತ್ ಅಗರ್‌ವಾಲ್‌ ಮತ್ತು 22 ವರ್ಷದ ವಿರೇಂದರ್ ಸಿಂಗ್ ಸಹಾಯ ಮಾಡಿದ್ದರು ಎನ್ನಲಾಗಿದೆ. ಸಚಿನ್ ಮತ್ತು ಹರ್ಷಿತ್ ಯುವತಿ ಮೇಲೆ ಆ್ಯಸಿಡ್ ಎರಚಿದ್ದಾರೆ. ಆ ಬಳಿಕ ಪೊಲೀಸರಿಗೆ ಅನುಮಾನ ಬರಬಾರದೆಂದು ವಿರೇಂದರ್ ಸಿಂಗ್ ಸಚಿನ್‌ ಸ್ಕೂಟರ್ ಮತ್ತು ಮೊಬೈಲ್‌ ಫೋನ್‌ನ್ನು ಬೇರೆ ಲೊಕೇಷನ್‌ಗೆ ಕಳುಹಿಸಿದ್ದ.

ಈ ಪ್ರಕರಣ ಮಾಧ್ಯಮಗಳಲ್ಲಿ ವ್ಯಾಪಕ ವೈರಲ್ ಆಗುತ್ತಿದ್ದಂತೆಯೇ ಮಿಂಚಿನ ಕಾರ್ಯಾಚರಣೆ ನಡೆಸಿದ್ದ ಪೊಲೀಸರು ಘಟನೆ ನಡೆದ 12 ಗಂಟೆಯಲ್ಲಿಯೇ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಇನ್ನು, ಆನ್‌ಲೈನ್‌ನಲ್ಲಿ ಆ್ಯಸಿಡ್ ಖರೀದಿಸಿರುವ ಆರೋಪಿ ಸಚಿನ್ ಆರೋರಾ ಇ- ವಾಲೆಟ್‌ನಿಂದ ಹಣ ಪಾವತಿ ಮಾಡಿದ್ದ ಎಂದು ಹಿರಿಯ ಪೊಲೀಸ್ ಅಧಿಕಾರಿ ಪ್ರೀತ್ ಹೂಡ ಮಾಹಿತಿ ನೀಡಿದ್ದಾರೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com