ದೆಹಲಿ: ಬಾಲಕಿಗೆ ಕತ್ತರಿಯಿಂದ ಹೊಡೆದು, ಶಾಲಾ ಕಟ್ಟಡದಿಂದ ಎಸೆದ ಶಿಕ್ಷಕಿ ಬಂಧನ

ಐದನೇ ತರಗತಿಯ ವಿದ್ಯಾರ್ಥಿನಿಯೊಬ್ಬರಿಗೆ ಕತ್ತರಿಯಿಂದ ಹೊಡೆದು ಕಟ್ಟಡದ ಮೊದಲ ಮಹಡಿಯಿಂದ ಎಸೆದ ಆರೋಪದ ಮೇಲೆ ದೆಹಲಿ ಮುನ್ಸಿಪಲ್ ಕಾರ್ಪೊರೇಷನ್(ಎಂಸಿಡಿ) ಶಾಲೆಯ ಶಿಕ್ಷಕಿಯನ್ನು ಶುಕ್ರವಾರ ಘಟನೆ ನಡೆದ ಕೆಲವೇ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ಐದನೇ ತರಗತಿಯ ವಿದ್ಯಾರ್ಥಿನಿಯೊಬ್ಬರಿಗೆ ಕತ್ತರಿಯಿಂದ ಹೊಡೆದು ಕಟ್ಟಡದ ಮೊದಲ ಮಹಡಿಯಿಂದ ಎಸೆದ ಆರೋಪದ ಮೇಲೆ ದೆಹಲಿ ಮುನ್ಸಿಪಲ್ ಕಾರ್ಪೊರೇಷನ್(ಎಂಸಿಡಿ) ಶಾಲೆಯ ಶಿಕ್ಷಕಿಯನ್ನು ಶುಕ್ರವಾರ ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ಬಂಧಿಸಲಾಗಿದೆ ಮತ್ತು ಸೇವೆಯಿಂದ ಅಮಾನತುಗೊಳಿಸಲಾಗಿದೆ.

ಇಲಾಖೆಯಿಂದ ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಎಂಸಿಡಿ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಸೆಂಟ್ರಲ್ ದೆಹಲಿಯ ಮಾಡೆಲ್ ಬಸ್ತಿ ಪ್ರದೇಶದ ಪ್ರಾಥಮಿಕ ವಿದ್ಯಾಲಯದಲ್ಲಿ ಈ ಘಟನೆ ನಡೆದಿದ್ದು, ಘಟನೆಯ ನಂತರ ಶಾಲೆಯಲ್ಲಿ ಭಾರೀ ಸಂಖ್ಯೆಯಲ್ಲಿ ಪೋಷಕರು ಜಮಾಯಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಸ್ಥಿತಿಯನ್ನು ಹತೋಟಿಗೆ ತಂದಿದ್ದಾರೆ.

ವಿದ್ಯಾರ್ಥಿನಿಯನ್ನು ಕತ್ತರಿಯಿಂದ ಹೊಡೆದು ಶಾಲೆಯ ಕಟ್ಟಡದ ಮೊದಲ ಮಹಡಿಯಿಂದ ಆಕೆಯ ಶಿಕ್ಷಕಿ ಎಸೆದಿದ್ದು, ನಂತರ ಅವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಗಾಯಗೊಂಡಿರುವ ಬಾಲಕಿಗೆ ಉತ್ತರ ದೆಹಲಿ ಪ್ರದೇಶದ ಎಂಸಿಡಿ ಆಸ್ಪತ್ರೆ ಹಿಂದೂ ರಾವ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

"ವಿದ್ಯಾರ್ಥಿಯನ್ನು ಹಿಂದೂ ರಾವ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಸಿಟಿ ಸ್ಕ್ಯಾನ್ ಸೇರಿದಂತೆ ಎಲ್ಲಾ ಅಗತ್ಯ ಪರೀಕ್ಷೆಗಳನ್ನು ಮಾಡಲಾಗಿದೆ. ಮಗು ಸುರಕ್ಷಿತ ಮತ್ತು ಸ್ಥಿರವಾಗಿದೆ. ಚಿಕಿತ್ಸೆಗೆ ಉತ್ತಮವಾಗಿ ಸ್ಪಂದಿಸುತ್ತಿದೆ. ಶಿಕ್ಷಕಿಯನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಎಂಸಿಡಿ ಕೂಡ ಅವರನ್ನು ತಕ್ಷಣ ಅಮಾನತುಗೊಳಿಸಿದೆ" ಎಂದು ಎಂಸಿಡಿ ಹಿರಿಯ ಅಧಿಕಾರಿಯೊಬ್ಬರು ಪಿಟಿಐಗೆ ತಿಳಿಸಿದ್ದಾರೆ.

ಶಿಕ್ಷಕಿಯನ್ನು ಗೀತಾ ದೇಶ್ವಾಲ್ ಎಂದು ಗುರುತಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com