ಶಾರುಖ್ ಖಾನ್ ಚಿತ್ರೀಕರಣ ನಡೆಸಿದ ಸ್ಥಳ 'ಶುದ್ಧೀಕರಿಸಲು' ಮುಂದಾದ ವಿಎಚ್‌ಪಿ, ಬಜರಂಗದಳ!

ಬಾಲಿವುಡ್ ನಟ ಶಾರುಖ್ ಖಾನ್ ಅಭಿನಯದ 'ಪಠಾಣ್' ಚಿತ್ರದ ವಿರುದ್ಧದ ಪ್ರತಿಭಟನೆಯ ಬಿಸಿ ಈಗ ಅವರ ಮುಂಬರುವ ಚಿತ್ರ 'ರಿಟರ್ನ್ ಟಿಕೆಟ್' ಚಿತ್ರೀಕರಣಕ್ಕೂ ತಟ್ಟಿದೆ.
ಪಠಾಣ್ ಸಿನಿಮಾ ಸ್ಟಿಲ್
ಪಠಾಣ್ ಸಿನಿಮಾ ಸ್ಟಿಲ್

ಜಬಲ್ಪುರ: ಬಾಲಿವುಡ್ ನಟ ಶಾರುಖ್ ಖಾನ್ ಅಭಿನಯದ 'ಪಠಾಣ್' ಚಿತ್ರದ ವಿರುದ್ಧದ ಪ್ರತಿಭಟನೆಯ ಬಿಸಿ ಈಗ ಅವರ ಮುಂಬರುವ ಚಿತ್ರ 'ರಿಟರ್ನ್ ಟಿಕೆಟ್' ಚಿತ್ರೀಕರಣಕ್ಕೂ ತಟ್ಟಿದೆ.

ಮಧ್ಯಪ್ರದೇಶದ ಜಬಲ್‌ಪುರ ಜಿಲ್ಲೆಯ ಪಂಚವಟಿಯಲ್ಲಿ ಶುಕ್ರವಾರ ಶಾರುಖ್ ಖಾನ್ ಅಭಿನಯದ 'ರಿಟರ್ನ್ ಟಿಕೆಟ್' ಚಿತ್ರದ ಚಿತ್ರೀಕರಣ ನಡೆಯುತ್ತಿದ್ದು, ಇದನ್ನು ವಿರೋಧಿಸಿ ಬಜರಂಗದಳ ಮತ್ತು ವಿಶ್ವ ಹಿಂದೂ ಪರಿಷತ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ರಿಟರ್ನ್ ಟಿಕೆಟ್ ಚಿತ್ರದ ಚಿತ್ರೀಕರಣಕ್ಕೆ ಜಿಲ್ಲೆಯ ಭೇದಘಾಟ್ ನ ಮೂರು ಸ್ಥಳಗಳನ್ನು ಆಯ್ಕೆ ಮಾಡಲಾಗಿದೆ.

ಇಂದು ಬೆಳಗ್ಗೆ ಭೇದಘಾಟ್‌ನಲ್ಲಿ ಚಿತ್ರೀಕರಣ ಆರಂಭವಾಗಿದ್ದು, ವಿಷಯ ತಿಳಿದ ಬಜರಂಗದಳ ಮತ್ತು ವಿಎಚ್‌ಪಿ ಕಾರ್ಯಕರ್ತರು ಪಂಚವಟಿಗೆ ಆಗಮಿಸಿ ಚಿತ್ರೀಕರಣಕ್ಕೆ ವಿರೋಧ ವ್ಯಕ್ತಪಡಿಸಿದರು. ಪೊಲೀಸರು ಸ್ಥಳಕ್ಕಾಗಮಿಸಿ ಕಾರ್ಯಕರ್ತರ ಮನವೊಲಿಸಲು ಯತ್ನಿಸಿದರೂ ಕೇಳದೆ ಪಂಚವಟಿಯಿಂದ ಹೊರಗೆ ಧರಣಿ ನಡೆಸುತ್ತಿದ್ದಾರೆ.

ಈ ವೇಳೆ ಮಾತನಾಡಿದ ಕಾರ್ಯಕರ್ತ ಸುಮಿತ್ ಸಿಂಗ್ ಠಾಕೂರ್, ‘ಪಠಾಣ್ ಸಿನಿಮಾದಲ್ಲಿ ನಮ್ಮ ‘ಕೇಸರಿ’ ಬಣ್ಣಕ್ಕೆ ಅವಮಾನ ಮಾಡಿದ್ದು, ಆ ನಟರಿಗೆ ಹಾಗೂ ಚಿತ್ರೀಕರಣಕ್ಕೆ ಇಲ್ಲಿ ಅವಕಾಶ ನೀಡುವುದಿಲ್ಲ ಎಂದು ಹೇಳಿದರು.

ಭೇದಘಾಟ್ ನಲ್ಲಿ ನಡೆಯುತ್ತಿರುವ ಸಿನಿಮಾ ಶೂಟಿಂಗ್ ಕೂಡಲೇ ನಿಲ್ಲಿಸಬೇಕು. ನಮ್ಮ ಸನಾತನ ಧರ್ಮಕ್ಕೆ ಅವಮಾನ ಮಾಡಿದ ಚಿತ್ರದ ಚಿತ್ರೀಕರಣಕ್ಕೆ ಅನುಮತಿ ನೀಡುವ ಮುನ್ನ ಜಿಲ್ಲಾಧಿಕಾರಿಗಳು ಯೋಚಿಸಬೇಕು ಎಂದು ಅವರಿಗೆ ಮನವಿ ಮಾಡಿದ್ದೇವೆ ಎಂದರು.

"ನಾವು ಚಿತ್ರೀಕರಣ ನಡೆಸಿದ ಸ್ಥಳವನ್ನು ಶುದ್ಧೀಕರಿಸಲು ಹನುಮಾನ್ ಚಾಲೀಸಾವನ್ನು ಪಠಿಸಿದ್ದೇವೆ. ಶೂಟಿಂಗ್ ಮುಂಗಿದ ನಂತರ ಆ ಸ್ಥಳವನ್ನು ಗೋ-ಮೂತ್ರದಿಂದ ಶುದ್ಧೀಕರಿಸುತ್ತೇವೆ" ಎಂದು ಅವರು ಠಾಕೂರ್ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com