ಒಂದು ಕೋಟಿ ತೆರಿಗೆ ಕಟ್ಟಿ, ಇಲ್ಲಾಂದ್ರೆ ಸೀಜ್ ಮಾಡ್ತೀವಿ: ವಿಶ್ವ ವಿಖ್ಯಾತ ತಾಜ್‌ಮಹಲ್‌ಗೆ ತೆರಿಗೆ ಇಲಾಖೆ ನೋಟೀಸ್!

ಜಗತ್ತಿನ ಅದ್ಭುತ ಕಟ್ಟಡಗಳಲ್ಲಿ ಒಂದಾಗಿರುವ ಪ್ರೇಮಸೌಧ ತಾಜ್ ಮಹಲ್ ಗೆ ಇದೇ ಮೊದಲ ಬಾರಿಗೆ ತೆರಿಗೆ ಇಲಾಖೆ ನೋಟಿಸ್ ನೀಡಿದ್ದು, ತೆರಿಗೆ ಪಾವತಿಸದಿದ್ದರೆ ಸೀಜ್ ಮಾಡುವ ಕುರಿತು ಎಚ್ಚರಿಕೆ ನೀಡಿದೆ.
ತಾಜ್ ಮಹಲ್ (ಪಿಟಿಐ ಚಿತ್ರ)
ತಾಜ್ ಮಹಲ್ (ಪಿಟಿಐ ಚಿತ್ರ)

ಆಗ್ರಾ: ಜಗತ್ತಿನ ಅದ್ಭುತ ಕಟ್ಟಡಗಳಲ್ಲಿ ಒಂದಾಗಿರುವ ಪ್ರೇಮಸೌಧ ತಾಜ್ ಮಹಲ್ ಗೆ ಇದೇ ಮೊದಲ ಬಾರಿಗೆ ತೆರಿಗೆ ಇಲಾಖೆ ನೋಟಿಸ್ ನೀಡಿದ್ದು, ತೆರಿಗೆ ಪಾವತಿಸದಿದ್ದರೆ ಸೀಜ್ ಮಾಡುವ ಕುರಿತು ಎಚ್ಚರಿಕೆ ನೀಡಿದೆ.

ಹೌದು.. ಆಗ್ರಾದಲ್ಲಿರುವ ವಿಶ್ವ ವಿಖ್ಯಾತ ತಾಜ್ ಮಹಲ್ ಗೆ ಸಂಕಷ್ಟ ಎದುರಾಗಿದ್ದು, ಆಗ್ರಾ ಮುನ್ಸಿಪಲ್ ಕಾರ್ಪೊರೇಷನ್ ತಾಜ್ ಮಹಲ್‌ಗೆ ತೆರಿಗೆ ಪಾವತಿಸುವಂತೆ ನೋಟಿಸ್ ನೀಡಿದೆ. ಅದೂ ಕೂಡ ಬರೊಬ್ಬರಿ 1.5 ಲಕ್ಷ ಆಸ್ತಿ ತೆರಿಗೆ ಮತ್ತು 1.9 ಕೋಟಿ ರೂ ನೀರಿನ ತೆರಿಗೆ, ರೂ. ಅನ್ನು ಕೂಡಲೇ ಪಾವತಿಸುವಂತೆ ನೋಟಿಸ್ ನಲ್ಲಿ ಉಲ್ಲೇಖಿಸಲಾಗಿದೆ.

ಜನವರಿ 15ರೊಳಗೆ ಬಾಕಿ ಪಾವತಿಸದಿದ್ದರೆ ತಾಜ್ ಮಹಲ್ ಸೀಜ್‌ ಮಾಡುವುದಾಗಿ ಪುರಸಭೆ ಅಧಿಕಾರಿಗಳು ನೋಟಿಸ್‌ನಲ್ಲಿ ತಿಳಿಸಿದ್ದಾರೆ.

ಪಾಲಿಕೆ ಅಧಿಕಾರಿಗಳು ನೀಡಿದ ಈ ನೋಟಿಸ್ ನೋಡಿ ಪುರಾತತ್ವ ಸರ್ವೇಕ್ಷಣಾ ಇಲಾಖೆ ಅಧಿಕಾರಿಗಳು ಬೆಚ್ಚಿಬಿದ್ದಿದ್ದು, ಈ ಸಂಬಂಧ ಉಂಟಾಗಿರುವ ಗೊಂದಲಗಳ ಪರಿಹರಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. 

ತಾಜ್ ಮಹಲ್ ಕಲಾತ್ಮಕ ಹಾಗೂ ಐತಿಹಾಸಿಕ ಕಟ್ಟಡವಾಗಿದ್ದು, ಇದಕ್ಕೆ ಮನೆ ತೆರಿಗೆ ಕಟ್ಟುವುದೇನು ಎಂದು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಈ ರೀತಿಯ ನೋಟಿಸ್ ಬರುತ್ತಿರುವುದು ಇದೇ ಮೊದಲು ಎಂದು ಹೇಳಿರುವ ಪುರಾತತ್ವ ಇಲಾಖೆ ಅಧಿಕಾರಿಗಳು, ಈ ಕುರಿತ ಗೊಂದಲಗಳನ್ನು ಕೂಡಲೇ ಸಂಬಂಧ ಪಟ್ಟ ಅಧಿಕಾರಿಗಳನ್ನು ಸಂಪರ್ಕಿಸಿ ಬಗೆಹರಿಸುತ್ತೇವೆ ಎಂದು ಹೇಳಿದ್ದಾರೆ.

ಈ ಕುರಿತು ಪುರಾತತ್ವ ಇಲಾಖೆಯ ಸೂಪರಿಂಟೆಂಡೆಂಟ್ ರಾಜ್‌ಕುಮಾರ್ ಪಟೇಲ್ ಮಾತನಾಡಿ, ತಾಜ್ ಮಹಲ್‌ಗೆ ಎರಡು ನೋಟೀಸ್ ಬಂದಿದ್ದು, ಒಂದು ನೀರಿನ ತೆರಿಗೆ ಮತ್ತು ಎರಡು ಆಸ್ತಿ ತೆರಿಗೆ ಬಗ್ಗೆ. ನೋಟಿಸ್ ಗಳಲ್ಲಿ ಒಟ್ಟು 1.9 ಕೋಟಿ ರೂ.ನೀರಿನ ತೆರಿಗೆ ಹಾಗೂ 1.5 ಲಕ್ಷ ಆಸ್ತಿ ತೆರಿಗೆ ಪಾವತಿಸಬೇಕಿದೆ ಎಂದು ತಿಳಿಸಿದ್ದಾರೆ. ಈ ಇಡೀ ಪ್ರಕರಣದಲ್ಲಿ ಕಾರ್ಪೊರೇಷನ್ ಅಧಿಕಾರಿಗಳಿಂದ ಗೊಂದಲ ಉಂಟಾಗಿದ್ದು, ರಾಜ್ಯದಲ್ಲಾಗಲೀ, ದೇಶದಲ್ಲಾಗಲೀ ಯಾವುದೇ ಸ್ಮಾರಕಗಳಿಗೆ ತೆರಿಗೆ ಇಲ್ಲ. ಇದು ಅಧಿಕಾರಿಗಳ ತಪ್ಪಿನಿಂದಾಗಿದೆ, ಈ ಸೂಚನೆಗಳ ಬಗ್ಗೆ ಮಾತನಾಡಲು ನಗರಸಭೆ ಅಧಿಕಾರಿಗಳು ಹಿಂದೇಟು ಹಾಕುತ್ತಿದ್ದಾರೆ ಎಂದರು.

ಇನ್ನು ತಾಜ್‌ಮಹಲ್‌ಗೆ ಸಂಬಂಧಿಸಿದ ತೆರಿಗೆ ಸಂಬಂಧಿತ ಪ್ರಕ್ರಿಯೆಗಳ ಬಗ್ಗೆ ನನಗೆ ತಿಳಿದಿಲ್ಲ ಎಂದು ಪಾಲಿಕೆ ಆಯುಕ್ತ ನಿಖಿಲ್ ಟಿ ಫಂಡೆ ತಿಳಿಸಿದ್ದಾರೆ.  ತೆರಿಗೆ ಲೆಕ್ಕಾಚಾರಕ್ಕಾಗಿ ನಡೆಸಲಾದ ರಾಜ್ಯಾದ್ಯಂತ ಭೌಗೋಳಿಕ ಮಾಹಿತಿ ವ್ಯವಸ್ಥೆ (ಜಿಐಎಸ್) ಸಮೀಕ್ಷೆಯನ್ನು ಆಧರಿಸಿ ಹೊಸ ನೋಟಿಸ್‌ಗಳನ್ನು ನೀಡಲಾಗುತ್ತಿದೆ. ಸರ್ಕಾರಿ ಕಟ್ಟಡಗಳು ಮತ್ತು ಧಾರ್ಮಿಕ ಸ್ಥಳಗಳಿಗೆ ಬಾಕಿ ಉಳಿದಿರುವ ಬಾಕಿಗಳ ಆಧಾರದ ಮೇಲೆ ನೋಟಿಸ್ ನೀಡಲಾಗಿದೆ. ಕಾನೂನು ಪ್ರಕ್ರಿಯೆಯ ನಂತರ ರಿಯಾಯಿತಿಯನ್ನು ನೀಡಲಾಗುತ್ತದೆ. ASI ಗೆ ನೋಟಿಸ್ ನೀಡಿದ ಸಂದರ್ಭದಲ್ಲಿ, ಅವರಿಂದ ಸ್ವೀಕರಿಸಿದ ಪ್ರತಿಕ್ರಿಯೆಯ ಆಧಾರದ ಮೇಲೆ ಅಗತ್ಯ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com