ನಕಲಿ ಎನ್‌ಕೌಂಟರ್‌: ಉತ್ತರ ಪ್ರದೇಶದ ಒಂಬತ್ತು ಪೊಲೀಸರಿಗೆ ಜೀವಾವಧಿ ಶಿಕ್ಷೆ

16 ವರ್ಷಗಳ ಹಿಂದೆ ಉತ್ತರ ಪ್ರದೇಶದ ಇಟಾಹ್‌ನಲ್ಲಿ ನಡೆದ ನಕಲಿ ಎನ್‌ಕೌಂಟರ್ ಪ್ರಕರಣಕ್ಕೆ ಸಂಬಂಧಿಸಿದಂತೆ ಗಾಜಿಯಾಬಾದ್‌ ವಿಶೇಷ ಸಿಬಿಐ ಕೋರ್ಟ್ ಅಂದಿನ ಪೊಲೀಸ್ ಠಾಣಾಧಿಕಾರಿ ಸೇರಿದಂತೆ ಒಂಬತ್ತು ಪೊಲೀಸರು ತಪ್ಪಿತಸ್ಥರು...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಗಾಜಿಯಾಬಾದ್‌: 16 ವರ್ಷಗಳ ಹಿಂದೆ ಉತ್ತರ ಪ್ರದೇಶದ ಇಟಾಹ್‌ನಲ್ಲಿ ನಡೆದ ನಕಲಿ ಎನ್‌ಕೌಂಟರ್ ಪ್ರಕರಣಕ್ಕೆ ಸಂಬಂಧಿಸಿದಂತೆ ಗಾಜಿಯಾಬಾದ್‌ ವಿಶೇಷ ಸಿಬಿಐ ಕೋರ್ಟ್ ಅಂದಿನ ಪೊಲೀಸ್ ಠಾಣಾಧಿಕಾರಿ ಸೇರಿದಂತೆ ಒಂಬತ್ತು ಪೊಲೀಸರು ತಪ್ಪಿತಸ್ಥರು ಎಂದು ಮಂಗಳವಾರ ತೀರ್ಪು ನೀಡಿದೆ.

ಮಾಜಿ ಠಾಣಾಧಿಕಾರಿ ಪವನ್ ಸಿಂಗ್, ಪಾಲ್ ಸಿಂಗ್ ತೇನ್ವಾ, ರಾಜೇಂದ್ರ ಪ್ರಸಾದ್, ಸರ್ನಾಮ್ ಸಿಂಗ್ ಮತ್ತು ಮೊಹ್ಕಮ್ ಸಿಂಗ್ ಸೇರಿದಂತೆ ಎಲ್ಲಾ ಒಂಬತ್ತು ಅಪರಾಧಿಗಳಿಗೆ ಸಿಬಿಐ ಕೋರ್ಟ್ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.

ಅಲ್ಲದೆ ನ್ಯಾಯಾಲಯವು ಪ್ರತಿಯೊಬ್ಬ ಅಪರಾಧಿಗೂ 30,000 ರೂಪಾಯಿ ದಂಡ ವಿಧಿಸಿದೆ.

ಇತರ ಅಪರಾಧಿಗಳಾದ ಬಲದೇವ್ ಪ್ರಸಾದ್, ಸುಮೇರ್ ಸಿಂಗ್, ಅಜಯ್ ಕುಮಾರ್ ಮತ್ತು ಅವಧೇಶ್ ರಾವತ್ ಅವರಿಗೆ ಐಪಿಸಿ ಸೆಕ್ಷನ್ 34ರ ಅಡಿಯಲ್ಲಿ ಉದ್ದೇಶಪೂರ್ವಕವಾಗಿ ಸಾಕ್ಷ್ಯ ನಾಶಪಡಿಸಿದ ಆರೋಪದಲ್ಲಿ 5 ವರ್ಷಗಳ ಜೈಲು ಶಿಕ್ಷೆ ಮತ್ತು ತಲಾ 11 ಸಾವಿರ ರೂಪಾಯಿ ದಂಡ ವಿಧಿಸಿದೆ. 

2006ರ ಆಗಸ್ಟ್ 18ರಂದು ನಡೆದ ಎನ್‌ಕೌಂಟರ್‌ನಲ್ಲಿ ಸುನೆಹ್ರಾ ಗ್ರಾಮದ ನಿವಾಸಿ ರಾಜಾರಾಂ ಎಂಬ ಕಾರ್ಪೆಂಟರ್ ನನ್ನು ಹತ್ಯೆ ಮಾಡಲಾಗಿತ್ತು.

ಸಿಧ್‌ಪುರ ಪೊಲೀಸ್ ಠಾಣೆಯಲ್ಲಿ ನಿಯೋಜಿಸಲಾಗಿದ್ದ ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ಪೊಲೀಸರು ರಾಜಾರಾಂನನ್ನು ಡಕಾಯಿತನಂತೆ ಬಿಂಬಿಸಿ ನಕಲಿ ಎನ್‌ಕೌಂಟರ್‌ನಲ್ಲಿ ಹತ್ಯೆ ಮಾಡಿದ್ದರು.

ನಂತರ ರಾಜಾರಾಮ್ ಅವರ ಪತ್ನಿ ಸಂತೋಷ್ ಕುಮಾರಿ ಅವರು ತನ್ನ ಪತಿ ಎನ್‌ಕೌಂಟರ್ ಬಗ್ಗೆ ತನಿಖೆ ನಡೆಸಬೇಕೆಂದು ಅಲಹಾಬಾದ್ ಹೈಕೋರ್ಟ್‌ಗೆ ಮನವಿ ಮಾಡಿದ್ದರು. ಮನವಿ ಪರಿಗಣಿಸಿದ ಹೈಕೋರ್ಟ್ 2007ರಲ್ಲಿ ಪ್ರಕರಣವನ್ನು ಸಿಬಿಐಗೆ ವಹಿಸಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com