ಮದ್ಯವ್ಯಸನಿ ಅಧಿಕಾರಿಗಿಂತ ರಿಕ್ಷಾ ಚಾಲಕ, ಕಾರ್ಮಿಕರು ಉತ್ತಮ ವರ: ಕುಡಿತದಿಂದ ಮಗನನ್ನು ಕಳೆದುಕೊಂಡ ಕೇಂದ್ರ ಸಚಿವರು
ಮದ್ಯವ್ಯಸನಿ ಅಧಿಕಾರಿಗಿಂತ ರಿಕ್ಷಾ ಚಾಲಕ ಅಥವಾ ಕಾರ್ಮಿಕರು ಉತ್ತಮ ವರ. ಹೀಗಾಗಿ ಜನರು ತಮ್ಮ ಹೆಣ್ಣುಮಕ್ಕಳು ಮತ್ತು ಸಹೋದರಿಯರನ್ನು ಮದ್ಯವ್ಯಸನಿಗಳಿಗೆ ಮದುವೆ ಮಾಡಬೇಡಿ ಎಂದು ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ರಾಜ್ಯ ಸಚಿವ ಕೌಶಲ್ ಕಿಶೋರ್ ಜನರಿಗೆ ಮನವಿ ಮಾಡಿದರು.
Published: 25th December 2022 01:31 PM | Last Updated: 26th December 2022 02:14 PM | A+A A-

ಕೇಂದ್ರ ಸಚಿವ ಕೌಶಲ್ ಕಿಶೋರ್
ಸುಲ್ತಾನಪುರ: ಮದ್ಯವ್ಯಸನಿ ಅಧಿಕಾರಿಗಿಂತ ರಿಕ್ಷಾ ಚಾಲಕ ಅಥವಾ ಕಾರ್ಮಿಕರು ಉತ್ತಮ ವರ. ಹೀಗಾಗಿ ಜನರು ತಮ್ಮ ಹೆಣ್ಣುಮಕ್ಕಳು ಮತ್ತು ಸಹೋದರಿಯರನ್ನು ಮದ್ಯವ್ಯಸನಿಗಳಿಗೆ ಮದುವೆ ಮಾಡಬೇಡಿ ಎಂದು ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ರಾಜ್ಯ ಸಚಿವ ಕೌಶಲ್ ಕಿಶೋರ್ ಜನರಿಗೆ ಮನವಿ ಮಾಡಿದರು.
ಶನಿವಾರ ಇಲ್ಲಿ ಲಂಬುವಾ ವಿಧಾನಸಭಾ ಕ್ಷೇತ್ರದಲ್ಲಿ ಡಿ-ಅಡಿಕ್ಷನ್ ಕುರಿತು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು, 'ಮದ್ಯವ್ಯಸನಿಗಳ ಜೀವಿತಾವಧಿ ತುಂಬಾ ಕಡಿಮೆ' ಎಂದರು.
ತಮ್ಮ ವೈಯಕ್ತಿಕ ಅನುಭವವನ್ನು ವಿವರಿಸಿದ ಅವರು, 'ನಾನು ಸಂಸದನಾಗಿ ಮತ್ತು ನನ್ನ ಪತ್ನಿ ಶಾಸಕಿಯಾಗಿ ನಮ್ಮ ಮಗನ ಜೀವ ಉಳಿಸಲು ಸಾಧ್ಯವಾಗದಿದ್ದರೆ, ಸಾಮಾನ್ಯ ಜನರು ಹೇಗೆ ಮಾಡುತ್ತಾರೆ' ಎಂದು ಹೇಳಿದರು.
'ನನ್ನ ಮಗ (ಆಕಾಶ್ ಕಿಶೋರ್) ತನ್ನ ಸ್ನೇಹಿತರೊಂದಿಗೆ ಮದ್ಯ ಸೇವಿಸುವ ಅಭ್ಯಾಸವನ್ನು ಹೊಂದಿದ್ದನು. ಆತನನ್ನು ಡಿ-ಅಡಿಕ್ಷನ್ ಸೆಂಟರ್‌ಗೆ ಸೇರಿಸಲಾಯಿತು. ಆತ ಕೆಟ್ಟ ಚಟವನ್ನು ಬಿಟ್ಟಿದ್ದಾನೆ ಎಂದು ಭಾವಿಸಿ ಆರು ತಿಂಗಳ ನಂತರ ಮದುವೆಯಾದನು. ಆದರೆ, ಆತ ಮತ್ತೆ ಕುಡಿಯಲು ಪ್ರಾರಂಭಿಸಿದನು. ಅಂತಿಮವಾಗಿ ಅದು ಅವನ ಸಾವಿಗೆ ಕಾರಣವಾಯಿತು. ಎರಡು ವರ್ಷಗಳ ಹಿಂದೆ, ಅಕ್ಟೋಬರ್ 19 ರಂದು, ಆಕಾಶ್ ಸಾವಿಗೀಡಾದಾಗ, ಆತನ ಮಗನಿಗೆ ಕೇವಲ ಎರಡು ವರ್ಷ ವಯಸ್ಸಾಗಿತ್ತು' ಎಂದು ಸಚಿವರು ಹೇಳಿದರು.
'ನನ್ನ ಮಗನನ್ನು ಉಳಿಸಲು ನನಗೆ ಸಾಧ್ಯವಾಗಲಿಲ್ಲ. ಇದರಿಂದ ಅವನ ಹೆಂಡತಿ ವಿಧವೆಯಾದಳು. ಹೀಗಾಗಿಯೇ, ನಿಮ್ಮ ಹೆಣ್ಣು ಮಕ್ಕಳು ಮತ್ತು ಸಹೋದರಿಯರನ್ನು ನೀವು ರಕ್ಷಿಸಬೇಕು' ಎಂದು ಹೇಳಿದರು.
'ಸ್ವಾತಂತ್ರ್ಯ ಚಳವಳಿಯಲ್ಲಿ, 90 ವರ್ಷಗಳ ಅವಧಿಯಲ್ಲಿ 6.32 ಲಕ್ಷ ಜನರು ಬ್ರಿಟಿಷರ ವಿರುದ್ಧ ಹೋರಾಡಿ ತಮ್ಮ ಪ್ರಾಣವನ್ನು ತ್ಯಾಗ ಮಾಡಿದ್ದರು. ಆದರೆ, ವ್ಯಸನದಿಂದಾಗಿ ಪ್ರತಿ ವರ್ಷ ಸುಮಾರು 20 ಲಕ್ಷ ಜನರು ಸಾಯುತ್ತಾರೆ. ಶೇ 80ರಷ್ಟು ಸಾವುಗಳು ತಂಬಾಕು, ಸಿಗರೇಟ್ ಮತ್ತು ಬೀಡಿ ವ್ಯಸನದಿಂದಾಗಿ ಬರುವ ಕ್ಯಾನ್ಸರ್‌ನಿಂದಾದ ಸಾವುಗಳು' ಎಂದರು.
ಉತ್ತರ ಪ್ರದೇಶದ ಮೋಹನ್‌ಲಾಲ್‌ಗಂಜ್ ಲೋಕಸಭಾ ಕ್ಷೇತ್ರದ ಸಂಸದಾಗಿರುವ ಕೌಶಲ್ ಅವರು, ಪ್ರೇಕ್ಷಕರು ಮತ್ತು ಇತರ ಸಂಘ ಸಂಸ್ಥೆಗಳು ಅವರ ಕುಟುಂಬವನ್ನು ಉಳಿಸಬೇಕು. ಜಿಲ್ಲೆಯನ್ನು ವ್ಯಸನಮುಕ್ತವಾಗಿಸಲು ಎಲ್ಲಾ ಶಾಲೆಗಳಲ್ಲಿ ವ್ಯಸನಮುಕ್ತ ಅಭಿಯಾನವನ್ನು ನಡೆಸಬೇಕು ಮತ್ತು ಬೆಳಗಿನ ಪ್ರಾರ್ಥನೆಯ ಸಮಯದಲ್ಲಿ ಮಕ್ಕಳಿಗೆ ಈ ಬಗ್ಗೆ ಸಲಹೆಗಳನ್ನು ನೀಡಬೇಕು ಎಂದು ಹೇಳಿದರು.