ಆಹಾರದಲ್ಲಿ ಹಲ್ಲಿ: ಆಂಧ್ರಪ್ರದೇಶದ ಶಾಲೆಯೊಂದರಲ್ಲಿ ಊಟ ಮಾಡಿದ 25 ಬಾಲಕಿಯರು ಅಸ್ವಸ್ಥ

ಸಿಂಗನಮಲದಲ್ಲಿರುವ ಕಸ್ತೂರ್ಬಾ ಗಾಂಧಿ ಬಾಲಿಕಾ ವಿದ್ಯಾಲಯದಲ್ಲಿ (ಕೆಜಿಬಿವಿ) ಶುಕ್ರವಾರ ರಾತ್ರಿ ಊಟ ಮಾಡಿದ ನಂತರ ವಿದ್ಯಾರ್ಥಿಗಳು ಅಸ್ವಸ್ಥರಾಗಿದ್ದಾರೆ. ಒಂದು ತಿಂಗಳಲ್ಲಿ ಎರಡನೇ ಬಾರಿಗೆ ಹೀಗಾಗಿದೆ.
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ

ಅನಂತಪುರ: ಸಿಂಗನಮಲದಲ್ಲಿರುವ ಕಸ್ತೂರ್ಬಾ ಗಾಂಧಿ ಬಾಲಿಕಾ ವಿದ್ಯಾಲಯದಲ್ಲಿ (ಕೆಜಿಬಿವಿ) ಶುಕ್ರವಾರ ರಾತ್ರಿ ಊಟ ಮಾಡಿದ ನಂತರ ವಿದ್ಯಾರ್ಥಿಗಳು ಅಸ್ವಸ್ಥರಾಗಿದ್ದಾರೆ. ಒಂದು ತಿಂಗಳಲ್ಲಿ ಎರಡನೇ ಬಾರಿಗೆ ಹೀಗಾಗಿದೆ.

ವಿದ್ಯಾರ್ಥಿಗಳು ಸೇವಿಸಿದ ಮಜ್ಜಿಗೆಯಲ್ಲಿ ಸತ್ತ ಹಲ್ಲಿ ಪತ್ತೆಯಾಗಿದೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ ಎಂದು ಸಮಗ್ರ ಶಿಕ್ಷಾ ಅಭಿಯಾನ (ಎಸ್‌ಎಸ್‌ಎ) ಸಹಾಯಕ ಯೋಜನಾ ಸಂಯೋಜಕ ತಿಲಕ್ ವಿದ್ಯಾಸಾಗರ್ ತಿಳಿಸಿದ್ದಾರೆ.

ಸುಮಾರು 25 ಬಾಲಕಿಯರು ಅಸ್ವಸ್ಥಗೊಂಡಿದ್ದು, ಸಿಂಗನಮಲ ಮತ್ತು ಅನಂತಪುರದ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಈಮಧ್ಯೆ, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ನಡುವೆ ಆಂತರಿಕ ಕಚ್ಚಾಟ ವರದಿಯಾಗಿರುವುದರಿಂದ ಉದ್ದೇಶಪೂರ್ವಕವಾಗಿ ಮಜ್ಜಿಗೆಯಲ್ಲಿ ಹಲ್ಲಿಯನ್ನು ಹಾಕಿರಬಹುದು ಎಂದು ಶಂಕೆ ವ್ಯಕ್ತವಾಗಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ಬಾಲಕಿಯರ ಅಭಿವೃದ್ಧಿ ಅಧಿಕಾರಿ (ಜಿಸಿಡಿಒ) ರೆಬೆಕಾ ಮಾತನಾಡಿ, ವಾಂತಿ, ಭೇದಿ ಮತ್ತು ಹೊಟ್ಟೆ ನೋವಿನಿಂದ ದೂರಿದ ವಿದ್ಯಾರ್ಥಿಗಳನ್ನು ಸಿಂಗನಮಲ ಪ್ರಾಥಮಿಕ ಆರೋಗ್ಯ ಕೇಂದ್ರ (ಪಿಎಚ್‌ಸಿ) ಮತ್ತು ಅನಂತಪುರ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ತಿಳಿಸಿದ್ದಾರೆ.

ತಿಂಗಳಲ್ಲಿ ಎರಡನೇ ಬಾರಿಗೆ ವಿದ್ಯಾರ್ಥಿಗಳು ಅಸ್ವಸ್ಥಗೊಂಡಿರುವುದನ್ನು ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಿದ್ದು, ತನಿಖೆಗೆ ಕರೆ ನೀಡಿದ್ದಾರೆ. ಪ್ರಾಥಮಿಕ ತನಿಖೆಯಲ್ಲಿ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಯನ್ನು ವಿಚಾರಿಸಿದಾಗ ಮಜ್ಜಿಗೆಯಲ್ಲಿ ಸತ್ತ ಹಲ್ಲಿ ಪತ್ತೆಯಾಗಿದೆ ಎಂದು ತಿಳಿದುಬಂದಿದೆ.

ನಂತರ, ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳ ನಡುವಿನ ಭಿನ್ನಾಭಿಪ್ರಾಯಗಳ ಬಗ್ಗೆಯೂ ಅವರಿಗೆ ತಿಳಿಸಲಾಗಿದೆ. ಇದರ ಬೆನ್ನಲ್ಲೇ ಇದೀಗ ಜಗಳವೇ ಘಟನೆಗೆ ಕಾರಣವಾಗಿರಬಹುದು ಎಂದು ಅಧಿಕಾರಿಗಳು ಶಂಕಿಸಿದ್ದಾರೆ.

ನಾವು ಕೆಜಿಬಿವಿ ವಿಶೇಷ ಅಧಿಕಾರಿ ಝಾನ್ಸಿ ಅವರನ್ನು ಪೊಲೀಸರಿಗೆ ದೂರು ನೀಡುವಂತೆ ಕೇಳಿದ್ದೇವೆ. ಇದರಿಂದ ಅವರು ತಪ್ಪಿತಸ್ಥರನ್ನು ಬಂಧಿಸಬಹುದು ಮತ್ತು ಘಟನೆಯಲ್ಲಿ ಭಾಗಿಯಾಗಿರುವವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು. ಮುಂದೆ ಇಂತಹ ಘಟನೆಗಳು ಮರುಕಳಿಸದಂತೆ ಕ್ರಮಕೈಗೊಳ್ಳಲಾಗುವುದು ಎಂದು ವಿದ್ಯಾಸಾಗರ್ ಹೇಳಿದರು.

ಅದೇ ಶಾಲೆಯ 42 ಬಾಲಕಿಯರು ಡಿ. 2ರಂದು ಅಸ್ವಸ್ಥ

ಇದೇ ಶಾಲೆಯ ಸುಮಾರು 42 ವಿದ್ಯಾರ್ಥಿಗಳು ಡಿಸೆಂಬರ್ 2ರಂದು ಅಸ್ವಸ್ಥಗೊಂಡು ವಾಂತಿ ಭೇದಿಯಿಂದ ಬಳಲುತ್ತಿದ್ದುದನ್ನು ಇಲ್ಲಿ ಸ್ಮರಿಸಬಹುದು. ಘಟನೆಯ ನಂತರ ಸರ್ವಶಿಕ್ಷಾ ಅಭಿಯಾನದ ಅಧಿಕಾರಿಗಳು ನಾಲ್ವರು ಸಿಬ್ಬಂದಿಯನ್ನು ವಜಾಗೊಳಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com