ರಾಜಸ್ಥಾನದಲ್ಲಿ ಶಿಕ್ಷಕರ ನೇಮಕಾತಿ ಪ್ರಶ್ನೆಪತ್ರಿಕೆ ಸೋರಿಕೆ; ಪರೀಕ್ಷೆಗೂ ಮುನ್ನ ಬಸ್‌ನಲ್ಲಿ ಉತ್ತರ ಬರೆಯುತ್ತಿದ್ದ 40 ಮಂದಿ ಬಂಧನ
ಕರ್ನಾಟಕದಲ್ಲಿ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ (ಪಿಎಸ್‌ಐ) ಪರೀಕ್ಷೆ ಪತ್ರಿಕೆ ಸೋರಿಕೆಯಾಗಿ ಭಾರಿ ವಿವಾದ ಉಂಟಾದಂತೆ ರಾಜಸ್ಥಾನದಲ್ಲೂ ಶಿಕ್ಷಕರ ನೇಮಕಾತಿ ಪರೀಕ್ಷಾ ಪತ್ರಿಕೆ ಪರೀಕ್ಷೆಗೂ ಮುನ್ನವೇ ಸೋರಿಕೆಯಾಗಿದೆ.
Published: 25th December 2022 11:07 AM | Last Updated: 25th December 2022 01:41 PM | A+A A-

ಬಂಧಿತ 40 ಮಂದಿ ಅಭ್ಯರ್ಥಿಗಳು.
ಉದಯಪುರ (ರಾಜಸ್ಥಾನ): ಕರ್ನಾಟಕದಲ್ಲಿ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ (ಪಿಎಸ್‌ಐ) ಪರೀಕ್ಷೆ ಪತ್ರಿಕೆ ಸೋರಿಕೆಯಾಗಿ ಭಾರಿ ವಿವಾದ ಉಂಟಾದಂತೆ ರಾಜಸ್ಥಾನದಲ್ಲೂ ಶಿಕ್ಷಕರ ನೇಮಕಾತಿ ಪರೀಕ್ಷಾ ಪತ್ರಿಕೆ ಪರೀಕ್ಷೆಗೂ ಮುನ್ನವೇ ಸೋರಿಕೆಯಾಗಿದೆ.
ಪರೀಕ್ಷೆಗೂ ಮುನ್ನವೇ ಉದಯಪುರ ಬಳಿ ಚಲಿಸುತ್ತಿದ್ದ ಬಸ್ ನಲ್ಲಿ ಉತ್ತರ ಪಡೆಯುತ್ತಿದ್ದ 40 ಮಂದಿಯನ್ನು ಪೊಲೀಸರು ಬಂಧನಕ್ಕೊಳಪಡಿಸಿದ್ದಾರೆ.
ಪ್ರಶ್ನೆ ಪತ್ರಿಕೆ ಸೋರಿಕೆಯಾದ ಹಿನ್ನೆಲೆಯಲ್ಲಿ ಇದೀಗ ಪರೀಕ್ಷೆಯನ್ನು ರದ್ದುಪಡಿಸಲಾಗಿದ್ದು, ನೇಮಕಾತಿಗೆ ಜನವರಿ 29 ರಂದು ಮರು ಪರೀಕ್ಷೆ ನಡೆಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ: ಮಾರ್ಚ್ ಎರಡನೇ ವಾರ 7ನೇ ತರಗತಿಗೆ ಪಬ್ಲಿಕ್ ಪರೀಕ್ಷೆ: ಎಸ್ಎಸ್ ಎಲ್ ಸಿ ಮಾದರಿ ಪ್ರಶ್ನೆಪತ್ರಿಕೆ
ರಾಜಸ್ಥಾನ ಲೋಕಸೇವಾ ಆಯೋಗ (RPSC) ನಡೆಸಿದ ಒಂಬತ್ತನೇ ಪ್ರಮುಖ ಪರೀಕ್ಷೆ ಇದಾಗಿದೆ. ಇತ್ತೀಚಿನ ವರ್ಷಗಳಲ್ಲಿ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಗಳು ರಾಜ್ಯ ಸರ್ಕಾರವನ್ನು ಮುಜುಗರಕ್ಕೀಡಾಗುವಂತೆ ಮಾಡಿದೆ.
ಸಿಕ್ಕಿಬಿದ್ದಿರುವ 40 ಮಂದಿಗೆ ಶುಕ್ರವಾರ ರಾತ್ರಿಯೇ ಪ್ರಶ್ನೆಪತ್ರಿಕೆ ಸಿಕ್ಕಿದ್ದು, ಹೀಗಾಗಿ ಬಸ್ ನಲ್ಲಿ ಚಲಿಸುತ್ತಿದ್ದಾಗಲೇ ಉತ್ತರ ಬರೆಯುತ್ತಿದ್ದರು. ಸಿಕ್ಕಬಿದ್ದವರಲ್ಲಿ ಸುಮಾರ 6-7 ಮಂದಿ ನಕಲಿ ಅಭ್ಯರ್ಥಿಗಳಾಗಿದ್ದಾರೆಂದು ಮೂಲಗಳು ತಿಳಿಸಿವೆ.
ಏಳು ಖಾಸಗಿ ಮತ್ತು ಸರ್ಕಾರಿ ಶಿಕ್ಷಕರು ಉತ್ತರ ಬರೆಯಲು ಅಭ್ಯರ್ಥಿಗಳಿಗೆ ಸಹಾಯ ಮಾಡುತ್ತಿದ್ದರು ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ: ಪಿಎಸ್‌ಐ ನೇಮಕಾತಿ ಹಗರಣ: ಟಾಪರ್ಸ್'ಗಳ ವಿಚಾರಣೆ, ಒಂದೂ ಪ್ರಶ್ನೆಗೂ ಸರಿ ಉತ್ತರ ನೀಡದ ಆರೋಪಿಗಳು!
ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದ ಪ್ರಮುಖ ಆರೋಪಿ ಜೋಧಪುರ ಪ್ರದೇಶದವನಾಗಿದ್ದು, ಪ್ರತಿ ಅಭ್ಯರ್ಥಿಯಿಂದ ಸುಮಾರು 5 ರಿಂದ 8 ಲಕ್ಷ ರೂ. ಪಡೆದುಕೊಂಡಿದ್ದಾನೆಂದು ಮೂಲಗಳು ತಿಳಿಸಿವೆ.
ಆದರೆ, ಉದಯಪುರ ಪೊಲೀಸರು ಇನ್ನೂ ಅಧಿಕೃತವಾಗಿ ಸಂಪೂರ್ಣ ಮಾಹಿತಿಯನ್ನು ಬಹಿರಂಗಪಡಿಸಿಲ್ಲ. ಎಟಿಎಸ್ ಮತ್ತು ಎಸ್‌ಒಜಿ ಕೂಡ ಈ ವಿಷಯದ ಬಗ್ಗೆ ತನಿಖೆಯನ್ನು ಪ್ರಾರಂಭಿಸಿದೆ.
ಈ ನಡುವೆ ಡಿಸೆಂಬರ್ 26 ರಂದು ಸಂಸ್ಕೃತದ ಪರೀಕ್ಷೆಗಳು ಬೆಳಿಗ್ಗೆ 9 ರಿಂದ 11:30 ರವರೆಗೆ ಮತ್ತು ಗಣಿತಶಾಸ್ತ್ರದ ಪರೀಕ್ಷೆಯು ಮಧ್ಯಾಹ್ನ 2 ರಿಂದ ಸಂಜೆ 4:30 ರವರೆಗೆ ನಡೆಯಲಿದೆ. ಪಂಜಾಬಿ ವಿಷಯದ ಪರೀಕ್ಷೆಯು ಡಿಸೆಂಬರ್ 27 ರಂದು ಬೆಳಿಗ್ಗೆ 9 ರಿಂದ 11:30 ರವರೆಗೆ ನಡೆಯಲಿದೆ.
ಇದನ್ನೂ ಓದಿ: ಖಾಸಗಿ ಶಾಲೆಯ ಗುಮಾಸ್ತನ ವಿರುದ್ಧ 10 ನೇ ತರಗತಿ ವಿಜ್ಞಾನದ ಪ್ರಶ್ನೆಪತ್ರಿಕೆ ಸೋರಿಕೆ ಆರೋಪ
ಈ ಸಂಬಂಧ ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿರುವ ಸಿಎಂ ಅಶೋಕ್ ಗೆಹ್ಲೋಟ್ ಅವರು, ಶಿಕ್ಷಕರ ನೇಮಕಾತಿಗಾಗಿ ಇಂದು, ಬೆಳಿಗ್ಗೆ 9 ರಿಂದ 11 ರವರೆಗೆ ನಡೆಯಬೇಕಿದ್ದ ಸಾಮಾನ್ಯ ಜ್ಞಾನ ಪರೀಕ್ಷೆಯನ್ನು ರದ್ದುಗೊಳಿಸಲಾಗಿದೆ, ಇದರಿಂದ ಯಾವುದೇ ಶ್ರಮಶೀಲ ಯುವಕರಿಗೆ ಅನ್ಯಾಯವಾಗಬಾರದು. ಉಳಿದ ಪರೀಕ್ಷೆಗಳು ಎಂದಿನಂತೆ ನಡೆಯಲಿವೆ ಎಂದು ಹೇಳಿದ್ದಾರೆ.
ಪ್ರಕರಣ ಸಂಬಂಧ ಸುದ್ದಿಗಾರರೊಂದಿಗೆ ಮಾತನಾಡಿ, ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣ ಅತ್ಯಂತ ದುರದೃಷ್ಟಕರ. ಇದು ಹಲವು ರಾಜ್ಯಗಳಲ್ಲಿ ಬೆಳಕಿಗೆ ಬಂದಿದೆ. ಇದಕ್ಕಾಗಿ ಅಭ್ಯರ್ಥಿಗಳು ದಂಡ ತೆರಬೇಕಿದೆ. ಇದನ್ನು ತಡೆಯಲು ಕಠಿಣ ಕಾನೂನುಗಳನ್ನು ತರುತ್ತೇವೆ. ಪೇಪರ್ ಸೋರಿಕೆಯನ್ನು ರಾಜ್ಯದಲ್ಲಿ ಅನುಮತಿಸಲಾಗುವುದಿಲ್ಲ. ಇಲ್ಲಿಯವರೆಗೆ 45 ಜನರನ್ನು ಬಂಧಿಸಲಾಗಿದೆ. ತಪ್ಪು ಮಾಡಿದ ಅಭ್ಯರ್ಥಿಗಳನ್ನು ಕಪ್ಪು ಪಟ್ಟಿಗೆ ಸೇರಿಸಲಾಗಿದೆ ಎಂದು ಗೆಹ್ಲೋಟ್ ತಿಳಿಸಿದ್ದಾರೆ.
ಪ್ರತಿಪಕ್ಷಗಳು ಪ್ರಕರಣ ಸಂಬಂಧ ಕಿಡಿಕಾರಿದ್ದು, ಪೋಷಕರು ಮಕ್ಕಳ ಶಿಕ್ಷಣಕ್ಕಾಗಿ ತಮ್ಮ ಜೀವನವನ್ನೇ ತೇಯ್ದಿರುತ್ತಾರೆ. ಅಭ್ಯರ್ಥಿಗಳು ಕೂಡ ಕನಸು ಕಂಡು ಪರೀಕ್ಷೆಗೆ ಸಜ್ಜಾಗಿರುತ್ತಾರೆ. ಪ್ರಶ್ನೆಪತ್ರಿಕೆ ಸೋರಿಕೆಯಾಗಿರುವುದು ಅವರ ಜೀವನವನ್ನೇ ಹಾಳು ಮಾಡಿದಂತೆ. ಸರ್ಕಾರ ಈ ಬಗ್ಗೆ ಎಚ್ಚರಿಕೆ ವಹಿಸಬೇಕಿತ್ತು. ಕೇಂದ್ರ ಲೋಕಸೇವಾ ಆಯೋಗದ ಪರೀಕ್ಷೆಗಳ ಪತ್ರಿಕೆಗಳು ಸೋರಿಕೆಯಾಗುವುದಿಲ್ಲ. ಅಂತಹ ಕಠಿಣ ಕ್ರಮಗಳನ್ನು ರಾಜ್ಯ ಸರ್ಕಾರ ವಹಿಸಬೇಕಿತ್ತು. ಇದು ಸರ್ಕಾರದ ನಿರ್ಲಕ್ಷ್ಯವಾಗಿದೆ. ರಾಜಕೀಯ ನೆರಳಿನಲ್ಲೇ ಪೇಪರ್ ಸೋರಿಕೆಯಾಗಿದೆ ಎಂದು ಆರೋಪಿಸಿವೆ.
ಇದನ್ನೂ ಓದಿ: ಪ್ರಶ್ನೆಪತ್ರಿಕೆ ಸೋರಿಕೆ ತಡೆಗೆ ಕಾನೂನು, ಉಚಿತ ವಿದ್ಯುತ್ ಪೂರೈಕೆ: ಅರವಿಂದ ಕೇಜ್ರಿವಾಲ್ ಭರವಸೆ
ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಗಳಲ್ಲಿ ಭಾಗಿಯಾಗಿರುವ ಎಲ್ಲರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು. ಅವರ ವಿರುದ್ಧ ಎನ್‌ಎಸ್‌ಎ ಕಾಯ್ದೆಯಡಿಯೂ ಕ್ರಮ ಕೈಗೊಳ್ಳಲು ಚಿಂತನೆ ನಡೆದಿದೆ. ಅವರ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಲು ಪಿಎಎಸ್ಎ ಕಾನೂನಿಗೆ ತಿದ್ದುಪಡಿ ತರಲು ರಾಜ್ಯ ಸರ್ಕಾರಕ್ಕೆ ಶಿಫಾರಸು ಮಾಡಲಾಗುತ್ತಿದೆ ಎಂದು ರಾಜಸ್ಥಾನ ಡಿಜಿಪಿ ಹೇಳಿದ್ದಾರೆ.