ಸೋಲಾರ್ ಹಗರಣ, ಲೈಂಗಿಕ ಶೋಷಣೆ ಆರೋಪ: ಕೇರಳ ಮಾಜಿ ಸಿಎಂ ಉಮ್ಮನ್ ಚಾಂಡಿಗೆ ಸಿಬಿಐ ಕ್ಲೀನ್ ಚಿಟ್

ಸೋಲಾರ್ ಪ್ಯಾನಲ್ ಹಗರಣದ ಪ್ರಮುಖ ಆರೋಪಿ ಮಹಿಳೆ ಮಾಡಿದ್ದ ಲೈಂಗಿಕ ಶೋಷಣೆ ಆರೋಪಕ್ಕೆ ಸಂಬಂಧಿಸಿದಂತೆ ಕೇಂದ್ರೀಯ ತನಿಖಾ ದಳ (ಸಿಬಿಐ) ಕೇರಳದ ಮಾಜಿ ಮುಖ್ಯಮಂತ್ರಿ ಉಮ್ಮನ್ ಚಾಂಡಿ ಅವರಿಗೆ ಕ್ಲೀನ್ ಚಿಟ್ ನೀಡಿದೆ ಎಂದು ತಿಳಿದುಬಂದಿದೆ.
ಉಮ್ಮನ್ ಚಾಂಡಿ
ಉಮ್ಮನ್ ಚಾಂಡಿ

ತಿರುವನಂತಪುರ: ಸೋಲಾರ್ ಪ್ಯಾನಲ್ ಹಗರಣದ ಪ್ರಮುಖ ಆರೋಪಿ ಮಹಿಳೆ ಮಾಡಿದ್ದ ಲೈಂಗಿಕ ಶೋಷಣೆ ಆರೋಪಕ್ಕೆ ಸಂಬಂಧಿಸಿದಂತೆ ಕೇಂದ್ರೀಯ ತನಿಖಾ ದಳ (ಸಿಬಿಐ) ಕೇರಳದ ಮಾಜಿ ಮುಖ್ಯಮಂತ್ರಿ ಉಮ್ಮನ್ ಚಾಂಡಿ ಅವರಿಗೆ ಕ್ಲೀನ್ ಚಿಟ್ ನೀಡಿದೆ ಎಂದು ತಿಳಿದುಬಂದಿದೆ.

ತಿರುವನಂತಪುರುದ ಮುಖ್ಯ ಜುಡಿಷಿಯಲ್ ಮ್ಯಾಜಿಸ್ಟ್ರೇಟ್ ಕೋರ್ಟ್‌ಗೆ ಸಿಬಿಐ ಮಂಗಳವಾರ ತನಿಖಾ ವರದಿ ಸಲ್ಲಿಸಿದೆ ಎಂದು ಮೂಲಗಳು ತಿಳಿಸಿವೆ. ಯುಡಿಎಫ್ ಸರ್ಕಾರದ ಅವಧಿಯ ಬಹುಕೋಟಿ ಸೋಲಾರ್ ಪ್ಯಾನಲ್ ಹಗರಣದ ಆರೋಪಿ ಮಹಿಳೆ ನೀಡಿದ್ದ ದೂರಿನ ಆಧಾರದ ಮೇಲೆ ಚಾಂಡಿ ಸೇರಿದಂತೆ ಆರು ಜನರ ವಿರುದ್ಧ ಕೇರಳ ಪೊಲೀಸರ ಅಪರಾಧ ವಿಭಾಗವು ಪ್ರಕರಣ ದಾಖಲಿಸಿಕೊಂಡಿತ್ತು. 2012ರಲ್ಲಿ ಈ ಆರೋಪಿಗಳು ನನ್ನ ಮೇಲೆ ಲೈಂಗಿಕ ಶೋಷಣೆ ನಡೆಸಿದ್ದಾರೆ ಎಂದು ಆರೋಪಿತ ಮಹಿಳೆ ಆರೋಪಿಸಿದ್ದರು. ಆದರೆ ದೂರುದಾರರು ಆರೋಪಿಸಿದಂತೆ ಅಪರಾಧ ನಡೆದ ದಿನದಂದು ಅಂದಿನ ಮುಖ್ಯಮಂತ್ರಿ ಕ್ಲಿಫ್ ಹೌಸ್‌ನಲ್ಲಿ (ಮುಖ್ಯಮಂತ್ರಿಯವರ ಅಧಿಕೃತ ನಿವಾಸ) ಹಾಜರಿರಲಿಲ್ಲ. ದೂರುದಾರರ ಹೇಳಿಕೆಗಳಲ್ಲಿ ವ್ಯತ್ಯಾಸಗಳಿವೆ ಎಂದು ವರದಿಯಲ್ಲಿ ಸೇರಿಸಲಾಗಿದೆ.

2021ರಲ್ಲಿ ಸಿಪಿಐ(ಎಂ) ನೇತೃತ್ವದ ಕೇರಳ ಸರ್ಕಾರ ಉಮ್ಮನ್ ಚಾಂಡಿ, ಮಾಜಿ ಕೇಂದ್ರ ಸಚಿವ ಕೆ ಸಿ ವೇಣುಗೋಪಾಲ್ ಮತ್ತು ಇತರ ರಾಜಕಾರಣಿಗಳ ವಿರುದ್ಧದ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಿತ್ತು. ಈ ಕ್ರಮವನ್ನು ಖಂಡಿಸಿದ್ದ ಪ್ರತಿಪಕ್ಷ ಕಾಂಗ್ರೆಸ್, ರಾಜಕೀಯ ಪ್ರೇರಿತ ಎಂದು ಕರೆದಿತ್ತು. ಎಲ್‌ಡಿಎಫ್ ಸರ್ಕಾರಕ್ಕೆ ಕಾಂಗ್ರೆಸ್‌ ನಾಯಕರ ವಿರುದ್ಧದ ಯಾವುದೇ ಆರೋಪ ಸಾಬೀತುಮಾಡಲು ಸಾಧ್ಯವಾಗಿಲ್ಲ. ಚುನಾವಣೆ ಹೊಸ್ತಿಲಲ್ಲಿ ರಾಜಕೀಯ ಉದ್ದೇಶದಿಂದ ತನಿಖೆಯನ್ನು ಸಿಬಿಐಗೆ ವಹಿಸಿದೆ ಎಂದು ಆರೋಪಿಸಿತ್ತು.

ಈ ನಡುವೆ, ಮಹಿಳೆ ಆರೋಪಿಸಿರುವಂತೆ ಆ ಒಂದು ನಿರ್ದಿಷ್ಟ ದಿನ ಅಂದಿನ ಸಿಎಂ ಊಮ್ಮನ್ ಚಾಂಡಿ ಮನೆಗೆ ಅವರು ಹೋಗಿದ್ದರು ಎಂಬುದನ್ನು ಸಾಬೀತುಪಡಿಸುವಂತಹ ಯಾವುದೇ ಸಾಕ್ಷ್ಯ ಸಿಬಿಐ ತನಿಖೆಯಲ್ಲಿ ಪತ್ತೆಯಾಗಿಲ್ಲ. ಆಗ ಕಾಂಗ್ರೆಸ್ ನಾಯಕರಾಗಿದ್ದ ಎಪಿ ಅಬ್ದುಲ್ಲಕುಟ್ಟಿ ವಿರುದ್ಧ ದೂರುದಾರರು ಆರೋಪ ಮಾಡಿದ್ದರು. ಆಗಿನ ಆಡಳಿತಾರೂಢ ಯುಡಿಎಫ್ ಸರ್ಕಾರದ ಹಲವು ಉನ್ನತ ನಾಯಕರ ಜೊತೆಗೆ ದೂರುದಾರರು ಅವರನ್ನು ಹೆಸರಿಸಿದ್ದಾರೆ. ಅಬ್ದುಲ್ಲಕುಟ್ಟಿ ವಿರುದ್ಧದ ಆರೋಪಗಳ ಪ್ರಕಾರ, ಅವರು ತಿರುವನಂತಪುರದ ಮ್ಯಾಸ್ಕಾಟ್ ಹೋಟೆಲ್‌ನಲ್ಲಿ ದೂರುದಾರರ ಮೇಲೆ ಅತ್ಯಾಚಾರ ನಡೆಸಿದ್ದರು. ಆಕೆಯ ದೂರಿನ ಆಧಾರದ ಮೇಲೆ ದಾಖಲಾದ ಮೊದಲ ಪ್ರಕರಣ ಇದಾಗಿದೆ. ಆದರೆ ಈ ಆರೋಪವನ್ನು ಸಾಬೀತುಪಡಿಸಲು ಯಾವುದೇ ಪುರಾವೆಗಳಿಲ್ಲ ಎಂದು ಸಿಬಿಐ ನ್ಯಾಯಾಲಯಕ್ಕೆ ತಿಳಿಸಿದೆ.

ಸಿಬಿಐ ಕೂಡ ಇದೊಂದು ಕಪೋಲಕಲ್ಪಿತ ಪ್ರಕರಣ ಎಂಬ ನಿರ್ಧಾರಕ್ಕೆ ಬಂದಿದೆ ಎಂದು ಮೂಲಗಳು ತಿಳಿಸಿವೆ. ಜುಲೈ 19, 2013ರಂದು ತಿರುವನಂತಪುರದ ಪೊಲೀಸ್ ಕಮಿಷನರ್‌ಗೆ ಪತ್ರ ಬರೆದಿದ್ದ ಮಹಿಳೆ, ಅಂದಿನ ಮುಖ್ಯಮಂತ್ರಿ ಉಮ್ಮನ್ ಚಾಂಡಿ, ಕೆಲವು ಸಚಿವರು ಮತ್ತು ಇಬ್ಬರು ಮಾಜಿ ಕೇಂದ್ರ ಸಚಿವರು ಸೇರಿದಂತೆ ಕಾಂಗ್ರೆಸ್ ಮತ್ತು ಯುಡಿಎಫ್‌ನ ಹಲವು ನಾಯಕರ ಮೇಲೆ ಲೈಂಗಿಕ ಶೋಷಣೆ ಮತ್ತು ಭ್ರಷ್ಟಾಚಾರದ ಆರೋಪಗಳನ್ನು ಹೊರಿಸಿದ್ದರು.

ಸಿಬಿಐನ ತಿರುವನಂತಪುರಂ ಘಟಕವು ನವದೆಹಲಿಗೆ ಆಕ್ಷೇಪಣಾ ವರದಿಯನ್ನು ನೀಡಿದ್ದು, ಸಾಕ್ಷ್ಯಾಧಾರಗಳ ಕೊರತೆ ಹಾಗೂ ದೂರಿನ ಸಂಕ್ಷಿಪ್ತತೆಯ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಕಾರಣ ಪ್ರಕರಣವನ್ನು ಕೈಗೆತ್ತಿಕೊಳ್ಳಬಾರದು ಎಂದು ಶಿಫಾರಸು ಮಾಡಿದೆ. ಆದಾಗ್ಯೂ, ವರದಿಯನ್ನು ಉನ್ನತ ಅಧಿಕಾರಿಗಳು ಕಡೆಗಣಿಸಿದ್ದರಿಂದ ಎಫ್‌ಐಆರ್‌ಗಳ ನೋಂದಣಿಗೆ ಕಾರಣವಾಯಿತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com