ಭಾರತ್ ಜೋಡೋ ಯಾತ್ರೆಯಲ್ಲಿ ಪಾಲ್ಗೊಳ್ಳುವಂತೆ ಕೇಂದ್ರ ಸಚಿವೆ ಸ್ಮೃತಿ ಇರಾನಿಗೆ ಕಾಂಗ್ರೆಸ್ ಆಹ್ವಾನ!!

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಭಾರತ್ ಜೋಡೋ ಯಾತ್ರೆಯಲ್ಲಿ ಪಾಲ್ಗೊಳ್ಳುವಂತೆ ಕೇಂದ್ರ ಸಚಿವೆ ಸ್ಮೃತಿ ಇರಾನಿಗೆ ಕಾಂಗ್ರೆಸ್ ಆಹ್ವಾನ ನೀಡಿದೆ.
ರಾಹುಲ್ ಗಾಂಧಿ ಮತ್ತು ಸ್ಮೃತಿ ಇರಾನಿ
ರಾಹುಲ್ ಗಾಂಧಿ ಮತ್ತು ಸ್ಮೃತಿ ಇರಾನಿ

ನವದೆಹಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಭಾರತ್ ಜೋಡೋ ಯಾತ್ರೆಯಲ್ಲಿ ಪಾಲ್ಗೊಳ್ಳುವಂತೆ ಕೇಂದ್ರ ಸಚಿವೆ ಸ್ಮೃತಿ ಇರಾನಿಗೆ ಕಾಂಗ್ರೆಸ್ ಆಹ್ವಾನ ನೀಡಿದೆ.

ಅರೆ ಇದೇನಿದು ಅಚ್ಚರಿ.. ಬಿಜೆಪಿ ಸಂಸದೆ, ಕೇಂದ್ರ ಸಚಿವೆಗೆ ಕಾಂಗ್ರೆಸ್ ನಿಂದ ಆಹ್ವಾನವೇ ಎಂದುಕೊಳ್ಳಬೇಡಿ.. ಅಚ್ಚರಿಯಾದರೂ ಇದು ನಿಜ.. ಕಾಂಗ್ರೆಸ್ ನಾಯಕ ಮತ್ತು ಉತ್ತರ ಪ್ರದೇಶದ ಮಾಜಿ ಎಂಎಲ್‌ಸಿ ದೀಪಕ್ ಸಿಂಗ್ ಅವರು ಗುರುವಾರ ಅಮೇಥಿಯ ಬಿಜೆಪಿ ಸಂಸದೆ ಸ್ಮೃತಿ ಇರಾನಿ ಅವರಿಗೆ ಪತ್ರ ಬರೆದಿದ್ದು, ರಾಜ್ಯದಲ್ಲಿ ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆಯಲ್ಲಿ ಪಾಲ್ಗೊಳ್ಳುವಂತೆ ಆಹ್ವಾನಿಸಿದ್ದಾರೆ.

ಬುಧವಾರ ಗೌರಿಗಂಜ್‌ನಲ್ಲಿರುವ ಅವರ ಕ್ಯಾಂಪ್ ಕಚೇರಿಯಲ್ಲಿ ಇರಾನಿ ಅವರ ಕಾರ್ಯದರ್ಶಿ ನರೇಶ್ ಶರ್ಮಾ ಅವರಿಗೆ ಆಹ್ವಾನ ಪತ್ರವನ್ನು ಹಸ್ತಾಂತರಿಸಲಾಗಿದೆ ಎಂದು ಸಿಂಗ್ ತಿಳಿಸಿದ್ದಾರೆ. ಭಾರತ್ ಜೋಡೋ ಯಾತ್ರೆಗೆ ಎಲ್ಲರನ್ನೂ ಆಹ್ವಾನಿಸುವಂತೆ ತಮ್ಮ ಪಕ್ಷದ ಹಿರಿಯ ನಾಯಕರು ನನಗೆ ನಿರ್ದೇಶನ ನೀಡಿದ್ದಾರೆ ಎಂದು ಮಾಜಿ ವಿಧಾನಪರಿಷತ್ ಸದಸ್ಯರಾಗಿರುವ ಡಾ.ಸಿಂಗ್ ಹೇಳಿದ್ದಾರೆ.

ಅಮೇಥಿ ಸಂಸದೆ ಸ್ಮೃತಿ ಜುಬಿನ್ ಇರಾನಿ ಅವರಿಗೆ ಎಲ್ಲರಿಗಿಂತ ಮೊದಲು ಆಹ್ವಾನ ಪತ್ರಿಕೆ ನೀಡಬೇಕು ಎಂದು ನಾನು ಭಾವಿಸಿದ್ದೇನೆ. ಹೀಗಾಗಿ ಅವರಿಗೆ ಆಹ್ವಾನಪತ್ರ ನೀಡಿದ್ದೇನೆ ಎಂದು ಅವರು ಹೇಳಿದ್ದಾರೆ.

ಆಹ್ವಾನದ ಬಗ್ಗೆ ಕೇಳಿದ ಪ್ರಶ್ನೆಗೆ ಬಿಜೆಪಿಯ ಜಿಲ್ಲಾಧ್ಯಕ್ಷ ದುರ್ಗೇಶ್ ತ್ರಿಪಾಠಿ, ಅಮೇಥಿ ಸಂಸದ ಅಥವಾ ಪಕ್ಷದ ಇತರ ಯಾವುದೇ ಕಾರ್ಯಕರ್ತರು ಯಾತ್ರೆಗೆ ಸೇರುವ ಪ್ರಶ್ನೆಯೇ ಇಲ್ಲ. ಬಿಜೆಪಿ ಯಾವಾಗಲೂ ಅಖಂಡ ಭಾರತದ ಪರಿಕಲ್ಪನೆಯ ಮೇಲೆ ಕೆಲಸ ಮಾಡುತ್ತದೆ. ಭಾರತ ಎಂದಿಗೂ ಒಡೆದು ಹೋಗಿಲ್ಲ, ಹಾಗಾದರೆ ಒಗ್ಗೂಡಿಸುವ ಈ ಮಾತು ಎಲ್ಲಿಂದ ಬಂತು ಎಂದು ಪ್ರಶ್ನಿಸಿದರು. 

ಇರಾನಿ ಅವರು 2019 ರ ಲೋಕಸಭೆ ಚುನಾವಣೆಯಲ್ಲಿ ಅಮೇಥಿಯಿಂದ ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಸೋಲಿಸಿದ್ದರು. ಇನ್ನು ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆ ಜನವರಿ 3 ರಂದು ಗಾಜಿಯಾಬಾದ್ ಮೂಲಕ ಉತ್ತರ ಪ್ರದೇಶ ಪ್ರವೇಶಿಸಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com