ಎರಡು ಭಾರತ ಸೃಷ್ಟಿ, ಒಂದು ಶ್ರೀಮಂತರಿಗೆ ಮತ್ತೊಂದು ಬಡವರಿಗೆ; ದೇಶ ಇಬ್ಭಾಗವಾಗಿದೆ: ರಾಹುಲ್ ಗಾಂಧಿ
ಕೇಂದ್ರ ಸರ್ಕಾರದ ವಿರುದ್ಧ ಬುಧವಾರ ತೀವ್ರ ವಾಗ್ದಾಳಿ ನಡೆಸಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಎರಡು ಭಾರತ ಸೃಷ್ಟಿಸಲಾಗಿದೆ. ಒಂದು ಶ್ರೀಮಂತರಿಗಾಗಿ, ಮತ್ತೊಂದು ಬಡವರಿಗಾಗಿ. ದೇಶ...
Published: 02nd February 2022 08:35 PM | Last Updated: 02nd February 2022 08:35 PM | A+A A-

ರಾಹುಲ್ ಗಾಂಧಿ
ನವದೆಹಲಿ: ಕೇಂದ್ರ ಸರ್ಕಾರದ ವಿರುದ್ಧ ಬುಧವಾರ ತೀವ್ರ ವಾಗ್ದಾಳಿ ನಡೆಸಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಎರಡು ಭಾರತ ಸೃಷ್ಟಿಸಲಾಗಿದೆ. ಒಂದು ಶ್ರೀಮಂತರಿಗಾಗಿ, ಮತ್ತೊಂದು ಬಡವರಿಗಾಗಿ. ದೇಶ ಎರಡು ಭಾಗಗಳಾಗಿ ವಿಂಗಡನೆಯಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಇಂದು ಲೋಕಸಭೆಯಲ್ಲಿ ರಾಷ್ಟ್ರಪತಿಗಳ ಭಾಷಣದ ಮೇಲಿನ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ರಾಹುಲ್ ಗಾಂಧಿ ಚುನಾವಣಾ ಆಯೋಗ, ಪೆಗಾಸಸ್, ಇವೆಲ್ಲವೂ ರಾಜ್ಯಗಳ ಒಕ್ಕೂಟದ ಧ್ವನಿಯನ್ನು ನಾಶಪಡಿಸುವ ಸಾಧನಗಳಾಗಿವೆ ಎಂದು ಆರೋಪಿಸಿದರು.
ಇದನ್ನು ಓದಿ: ದೇಶಾದ್ಯಂತ ನಿರುದ್ಯೋಗ ತಾಂಡವವಾಡುತ್ತಿದೆ; ಈವರೆಗೆ ಬಿಜೆಪಿ ಎಷ್ಟು ಮಂದಿಗೆ ಉದ್ಯೋಗ ನೀಡಿದೆ?: ಕೇಂದ್ರದ ವಿರುದ್ಧ ಖರ್ಗೆ ವಾಗ್ದಾಳಿ
ಲೋಕಸಭೆಯಲ್ಲಿ ಬಿಜೆಪಿಯ ಕಾರ್ಯತಂತ್ರದ ಬಗ್ಗೆ ಪ್ರಶ್ನಿಸಿದ ರಾಹುಲ್ ಗಾಂಧಿ, ಅಧ್ಯಕ್ಷೀಯ ಭಾಷಣವು ಕಾರ್ಯತಂತ್ರದ ದೃಷ್ಟಿಗೆ ಬದಲಾಗಿ ಅಧಿಕಾರಶಾಹಿ ವಿಚಾರಗಳ ಪಟ್ಟಿ ಎಂದು ನನಗೆ ತೋರಿತು. ದುರದೃಷ್ಟವಶಾತ್, ಅಧ್ಯಕ್ಷೀಯ ಭಾಷಣವು ನಮ್ಮ ದೇಶ ಎದುರಿಸುತ್ತಿರುವ ಕೇಂದ್ರೀಯ ಸವಾಲುಗಳ ಕುರಿತು ಉಲ್ಲೇಖಿಸಿಲ್ಲ ಎಂದರು.
ಅಧ್ಯಕ್ಷೀಯ ಭಾಷಣವು ಮೂರು ವಿಚಾರಗಳನ್ನು ಮರೆತಿದೆ. ಒಂದು ಮುಖ್ಯವಾಗಿ ನಮ್ಮ ದೇಶ ಒಂದೇ ಭಾರತವಾಗಿ ಉಳಿದಿಲ್ಲ. ಬಡವರಿಗಾಗಿ, ಶ್ರೀಮಂತರಿಗಾಗಿ ಎಂದು ಇಬ್ಭಾಗವಾಗಿದೆ. ಇನ್ನು ನಿರುದ್ಯೋಗದ ಬಗ್ಗೆಯೂ ಮಾತನಾಡಲಿಲ್ಲ. ದೇಶಾದ್ಯಂತ ಯುವಕರು ಉದ್ಯೋಗದ ಹುಡುಕಾಟದಲ್ಲಿ ತೊಡಗಿದ್ದಾರೆ. ನಿಮ್ಮ ಸರ್ಕಾರ ಇದುವರೆಗೂ ಉದ್ಯೋಗ ನೀಡುವಲ್ಲಿ ಅಶಕ್ತವಾಗಿದೆ ಎಂದರು. ನೀವು ಉದ್ಯೋಗ ಒದಗಿಸುವ ಬಗ್ಗೆ ಮಾತನಾಡುತ್ತಿದ್ದೀರಿ, 2021ರಲ್ಲಿ 3 ಕೋಟಿ ಯುವಕರು ತಮ್ಮ ಉದ್ಯೋಗವನ್ನು ಕಳೆದುಕೊಂಡರು. ಇಂದು ಭಾರತವು 50 ವರ್ಷಗಳಲ್ಲಿ ಅತಿ ಹೆಚ್ಚು ನಿರುದ್ಯೋಗವನ್ನು ಎದುರಿಸುತ್ತಿದೆ. ನೀವು ಮೇಡ್ ಇನ್ ಇಂಡಿಯಾ, ಸ್ಟಾರ್ಟ್ ಅಪ್ ಇಂಡಿಯಾ ಎಂದು ಮಾತನಾಡುತ್ತೀರಿ, ಆದರೆ ಯುವಕರಿಗೆ ಸಿಗಬೇಕಾದ ಉದ್ಯೋಗ ಸಿಕ್ಕಿಲ್ಲ ಎಂದು ವಾಗ್ದಾಳಿ ನಡೆಸಿದರು.
ಯುಪಿಎ ಸರ್ಕಾರ 10 ವರ್ಷಗಳಲ್ಲಿ 27 ಕೋಟಿ ಜನರನ್ನು ಬಡತನದಿಂದ ಮುಕ್ತಗೊಳಿಸಿದೆ. ಇದು ನಮ್ಮ ದತ್ತಾಂಶ ಅಲ್ಲ, ಇದು ವಾಸ್ತವಿಕ ದತ್ತಾಂಶ. ಆದರೆ ಬಿಜೆಪಿ 23 ಕೋಟಿ ಜನರನ್ನು ಮತ್ತೆ ಬಡತನಕ್ಕೆ ತಳ್ಳಿದೆ. ನೀವು ಮೇಡ್ ಇನ್ ಇಂಡಿಯಾ ಬಗ್ಗೆ ಮಾತನಾಡುತ್ತೀರಿ. ಆದರೆ ಇಂದು ಮೇಡ್ ಇನ್ ಇಂಡಿಯಾ ಸಾಧ್ಯವಿಲ್ಲ. ಏಕೆಂದರೆ ಮೇಡ್ ಇನ್ ಇಂಡಿಯಾದಲ್ಲಿ ಯಾರು ಭಾಗಿಯಾಗಿದ್ದಾರೆ ಎಂಬುದು ಮುಖ್ಯವಾಗುತ್ತದೆ ಎಂದರು.
ಚೀನಿಯರು ಬಹಳ ಸ್ಪಷ್ಟವಾದ ದೃಷ್ಟಿಕೋನವನ್ನು ಹೊಂದಿದ್ದಾರೆ. ಭಾರತದ ವಿದೇಶಾಂಗ ನೀತಿಯ ಏಕೈಕ ದೊಡ್ಡ ಕಾರ್ಯತಂತ್ರದ ಗುರಿ ಎಂದರೆ ಪಾಕಿಸ್ತಾನ ಮತ್ತು ಚೀನಾವನ್ನು ಪ್ರತ್ಯೇಕವಾಗಿ ಇಡುವುದು. ಆದರೆ ಬಿಜೆಪಿ ಇವರಿಬ್ಬರನ್ನು ಒಟ್ಟಿಗೆ ಸೇರಿಸಿದೆ. ಇದು ಭಾರತದ ವಿರುದ್ಧ ಬಿಜೆಪಿ ಕೈಗೊಂಡ ಮಹಾನ್ ಅಪರಾಧ ಎಂದು ದೂರಿದರು.