ದೇಶಾದ್ಯಂತ ನಿರುದ್ಯೋಗ ತಾಂಡವವಾಡುತ್ತಿದೆ; ಈವರೆಗೆ ಬಿಜೆಪಿ ಎಷ್ಟು ಮಂದಿಗೆ ಉದ್ಯೋಗ ನೀಡಿದೆ?: ಕೇಂದ್ರದ ವಿರುದ್ಧ ಖರ್ಗೆ ವಾಗ್ದಾಳಿ
ಉದ್ಯೋಗ ಸೃಷ್ಟಿಯಲ್ಲಿ ಕೇಂದ್ರ ಸರ್ಕಾರ ಸಂಪೂರ್ಣ ವಿಫಲವಾಗಿದ್ದು ದೇಶಾದ್ಯಂತ ನಿರುದ್ಯೋಗ ಸಮಸ್ಯೆ ತಾಂಡವವಾಡುತ್ತಿದೆ ಎಂದು ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
Published: 02nd February 2022 04:13 PM | Last Updated: 02nd February 2022 06:27 PM | A+A A-

ಮಲ್ಲಿಕಾರ್ಜುನ ಖರ್ಗೆ
ನವದೆಹಲಿ: ಉದ್ಯೋಗ ಸೃಷ್ಟಿಯಲ್ಲಿ ಕೇಂದ್ರ ಸರ್ಕಾರ ಸಂಪೂರ್ಣ ವಿಫಲವಾಗಿದ್ದು ದೇಶಾದ್ಯಂತ ನಿರುದ್ಯೋಗ ಸಮಸ್ಯೆ ತಾಂಡವವಾಡುತ್ತಿದೆ ಎಂದು ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ರಾಜ್ಯಸಭೆಯಲ್ಲಿ ಮಾತನಾಡಿದ ಖರ್ಗೆ ಅವರು, 'ದೇಶದಲ್ಲಿ ನಿರುದ್ಯೋಗ ತಾಂಡವವಾಡುತ್ತಿದೆ. ಸರ್ಕಾರಿ ಉದ್ಯೋಗಗಳು ಕಡಿಮೆಯಾಗುತ್ತಿರುವುದರಿಂದ ಯುವಕರು ಸಂಕಷ್ಟದಲ್ಲಿದ್ದಾರೆ. ಉದ್ಯೋಗದ ಭರವಸೆ ನೀಡಿದ್ದ ಬಿಜೆಪಿ ಇದುವರೆಗೆ ಎಷ್ಟು ಮಂದಿಗೆ ಉದ್ಯೋಗದ ಭರವಸೆ ನೀಡಿದ್ದಾರೆ ಎಂದು ಪ್ರಶ್ನಿಸಿದರು. ಅಂತೆಯೇ ಕೇಂದ್ರ ಸರ್ಕಾರದಲ್ಲಿ ಒಂಬತ್ತು ಲಕ್ಷ ಹುದ್ದೆಗಳು ಖಾಲಿ ಇವೆ. ರೈಲ್ವೇಯಲ್ಲಿ 15%, ರಕ್ಷಣೆಯಲ್ಲಿ 40% ಮತ್ತು ಗೃಹ ವ್ಯವಹಾರಗಳಲ್ಲಿ 12% ಹುದ್ದೆಗಳು ಖಾಲಿ ಇವೆ. ಇಂದು ನಗರ ಪ್ರದೇಶಗಳಲ್ಲಿ ನಿರುದ್ಯೋಗ ದರ 9% ಮತ್ತು ಗ್ರಾಮೀಣ ಪ್ರದೇಶದಲ್ಲಿ 7.2%ರಷ್ಟಿದೆ. ಹೀಗಿದ್ದೂ ಕೇಂದ್ರ ಸರ್ಕಾರದ ಇವುಗಳ ಭರ್ತಿಗೆ ಕ್ರಮ ಕೈಗೊಂಡಿಲ್ಲ ಎಂದು ವಾಗ್ದಾಳಿ ನಡೆಸಿದರು.
2014ರಲ್ಲಿ ಬಿಜೆಪಿ ಪ್ರತಿ ವರ್ಷ 2 ಕೋಟಿ ಉದ್ಯೋಗ ನೀಡುವುದಾಗಿ ಭರವಸೆ ನೀಡಿತ್ತು. ಇಷ್ಟೊತ್ತಿಗೆ 15 ಕೋಟಿ ಜನರಿಗೆ ಉದ್ಯೋಗ ನೀಡಬೇಕಿತ್ತು. ಆದರೆ ನಿಜವಾಗಿಯೂ ಬಿಜೆಪಿ ಎಷ್ಟು ಮಂದಿಗೆ ಉದ್ಯೋಗ ನೀಡಿದೆ? ಈ ಬಾರಿಯ ಬಜೆಟ್ ಮುಂದಿನ 5 ವರ್ಷಗಳಲ್ಲಿ ಕೇವಲ 60 ಲಕ್ಷ ಉದ್ಯೋಗಗಳ ಭರವಸೆ ನೀಡಿದೆ ಎಂದು ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡರು.
ಪಿಎಂ ಕೇರ್ಸ್ ಫಂಡ್ ಬಗ್ಗೆ ಏಕೆ ಲೆಕ್ಕ ಪರಿಶೋಧನೆ ಮಾಡಬಾರದು?
ಇದೇ ವೇಳೆ ಪಿಎಂ ಕೇರ್ ಫಂಡ್ನಲ್ಲಿ ನಮ್ಮ ಹಣವೂ ಇದೆ. ಯೋಧರ ಹಣವೂ ಇದೆ. ಎನ್ಜಿಒಗಳು ಮತ್ತು ಕೈಗಾರಿಕೋದ್ಯಮಿಗಳ ಹಣವೂ ಸೇರಿದೆ. ಪಾರದರ್ಶಕತೆಯ ಬಗ್ಗೆ ಮಾತನಾಡುವ ಕೇಂದ್ರ ಸರ್ಕಾರ, ಪಿಎಂ ಕೇರ್ಸ್ ಫಂಡ್ ಏಕೆ ಆಡಿಟ್ ಮಾಡಬಾರದು ಎಂದು ಪ್ರಶ್ನೆ ಮಾಡಿದರು.
“ಏನಿದೆಯೋ ಅದು ತಮ್ಮದು ಎಂದು ನೀವು ತಿಳಿದುಕೊಂಡಿರಬಹುದು. ಆದರೆ ಅದು ತಪ್ಪು, ಅದು ನಿಮ್ಮದಲ್ಲ.. ಅದು ಜನರ ಹಣ. ಈ ಹಣ ಎಲ್ಲಿಂದ ಬಂತು? ಎಷ್ಟು ಬಂದಿದೆ? ಎಂಬುದಕ್ಕೆ ಸರ್ಕಾರ ಉತ್ತರ ನೀಡಬೇಕು ಎಂದು ಮಲ್ಲಿಕಾರ್ಜುನ್ ಖರ್ಗೆ ಆಗ್ರಹಿಸಿದರು.
ಪಿಎಂ ಕೇರ್ಸ್ ಎಂದರೆ ಏನು?
ಕೋವಿಡ್–19 ವಿರುದ್ಧದ ಹೋರಾಟಕ್ಕೆ ಅಗತ್ಯವಿರುವ ಹಣವನ್ನು ಸಾರ್ವಜನಿಕರಿಂದ ಸಂಗ್ರಹಿಸಿ, ಪರಿಹಾರ ಕಾರ್ಯಗಳಿಗೆ ಬಳಸುವ ಉದ್ದೇಶದಿಂದ ಕೇಂದ್ರ ಸರ್ಕಾರವು ‘ಪ್ರಧಾನ ಮಂತ್ರಿಗಳ ನಾಗರಿಕ ನೆರವು ಮತ್ತು ತುರ್ತುಸ್ಥಿತಿಗಳ ಪರಿಹಾರ ನಿಧಿ–ಪಿಎಂ ಕೇರ್ಸ್’ ಅನ್ನು ಸ್ಥಾಪಿಸಿದೆ.