
ಕೇಂದ್ರ ಗೃಹ ಸಚಿವ ಅಮಿತ್ ಶಾ
ಅನುಪ್ ಶಾಹರ್: ಉತ್ತರ ಪ್ರದೇಶದಲ್ಲಿ 2/3ರಷ್ಟು ಬಹುಮತದೊಂದಿಗೆ ಬಿಜೆಪಿ ಸರ್ಕಾರ ರಚಿಸಲಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಉತ್ತರ ಪ್ರದೇಶದ ಅನುಪ್ ಶಾಹರ್ ನಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಅಮಿತ್ ಶಾ, ಪ್ರಧಾನಿ ನರೇಂದ್ರ ಮೋದಿ ನಾಯಕತ್ವದಲ್ಲಿ ಈ ಬಾರಿಯೂ ಉತ್ತರ ಪ್ರದೇಶದಲ್ಲಿ ಬಿಜೆಪಿ ಸರ್ಕಾರ ರಚನೆಯಾಗಲಿದ್ದು, ಮೂರನೇ ಎರಡರಷ್ಟು ಬಹುಮತದೊಂದಿಗೆ ಯೋಗಿ ಆದಿತ್ಯನಾಥ್ ಮುಖ್ಯಮಂತ್ರಿಯಾಗುವುದು ಖಚಿತ ಎಂದರು.
ಪ್ರಸ್ತುತ ಉತ್ತರ ಪ್ರದೇಶದಾದ್ಯಂತ ಮಾಫಿಯಾ ಇಲ್ಲದಂತಾಗಿದೆ. ತಾಯಂದಿರು ಹಾಗೂ ಸಹೋದರಿಯರು ಸುರಕ್ಷಿತರಾಗಿದ್ದಾರೆ. ಕಳೆದ ಐದು ವರ್ಷಗಳ ಬಿಜೆಪಿ ಆಡಳಿತಾವಧಿಯಲ್ಲಿ ಮಾಫಿಯಾವನ್ನು ಸದೆಬಡಿಸಲಾಗಿದೆ. ಈಗ ಉತ್ತರ ಪ್ರದೇಶದ ಮೂರು ಸ್ಥಳಗಳಲ್ಲಿ ಮಾತ್ರ ಮಾಫಿಯಾವಿದೆ. ರಾಜ್ಯದ ಹೊರಗೆ ಅಥವಾ ಜೈಲುಗಳಲ್ಲಿ ಅಥವಾ ಅಖಿಲೇಶ್ ಯಾದವ್ ಪಟ್ಟಿಯಲ್ಲಿ ಶಾಸಕರಾಗಲು ಕಾಯುತ್ತಿರುವವರಿಂದ ಮಾಫಿಯಾ ನಡೆಯುತ್ತಿದೆ. ಯೋಗಿ ಆದಿತ್ಯನಾಥ್ ಕಠಿಣ ಕ್ರಮ ಕೈಗೊಳ್ಳುವ ಮೂಲಕ ಮಾಫಿಯಾವನ್ನು ಮಟ್ಟ ಹಾಕಿದ್ದಾರೆ ಎಂದು ಶಾ ಹೇಳಿದರು.
ಇದನ್ನೂ ಓದಿ: 2ಜಿ, ಸಿಡಬ್ಲ್ಯುಸಿ ಹಗರಣಗಳ ತನಿಖೆ ನಡೆಸಿದ್ದ ಅಧಿಕಾರಿ ಬಿಜೆಪಿ ಟಿಕೆಟ್ ನಿಂದ ಸ್ಪರ್ಧೆ?
ಉತ್ತರ ಪ್ರದೇಶದಲ್ಲಿ ಪಾರದರ್ಶಕ ಆಡಳಿತಕ್ಕಾಗಿ ಪಕ್ಷ ಕೆಲಸ ಮಾಡುತ್ತಿದೆ. ಮೋದಿ ದೇಶದ ಸುರಕ್ಷತೆಗಾಗಿ ಕೆಲಸ ಮಾಡುತ್ತಿದ್ದಾರೆ. ದಾಳಿಯಿಂದ ಕೋಟ್ಯಂತರ ರೂಪಾಯಿಯನ್ನು ವಶಕ್ಕೆ ಪಡೆಯಲಾಗಿದೆ. ಉತ್ತರ ಪ್ರದೇಶದಲ್ಲಿ ಮತ್ತೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದರೆ ಮೋದಿ ಕೈಯನ್ನು ಬಲಪಡಿಸಿದಂತಾಗುತ್ತದೆ ಎಂದು ಅಮಿತ್ ಶಾ ತಿಳಿಸಿದರು.