ದ್ವೇಷ ಭಾಷಣ ಮಾಡಿದವರನ್ನು ಶಿಕ್ಷಿಸಬೇಕು; ಧರ್ಮ ಸಂಸದ್ ಇದಕ್ಕೆ ಹೊರತಲ್ಲ: ಆರ್ಎಸ್ಎಸ್ ಮುಖಂಡ
ಹರಿದ್ವಾರದಲ್ಲಿ ಇತ್ತೀಚೆಗೆ ನಡೆದ ಧರ್ಮ ಸಂಸದ್ ನಲ್ಲಿ ಮುಸ್ಲಿಮರ ಬಗ್ಗೆ ದ್ವೇಷ ಭಾಷಣಗಳನ್ನು ಆರ್ ಎಸ್ ಎಸ್ ನ ಮುಖಂಡ ಇಂದ್ರೇಶ್ ಕುಮಾರ್ ಖಂಡಿಸಿದ್ದಾರೆ.
Published: 03rd February 2022 03:48 PM | Last Updated: 03rd February 2022 04:13 PM | A+A A-

ಆರ್‌ಎಸ್‌ಎಸ್
ನವದೆಹಲಿ: ಹರಿದ್ವಾರದಲ್ಲಿ ಇತ್ತೀಚೆಗೆ ನಡೆದ ಧರ್ಮ ಸಂಸದ್ ನಲ್ಲಿ ಮುಸ್ಲಿಮರ ಬಗ್ಗೆ ದ್ವೇಷ ಭಾಷಣಗಳನ್ನು ಆರ್ ಎಸ್ ಎಸ್ ನ ಮುಖಂಡ ಇಂದ್ರೇಶ್ ಕುಮಾರ್ ಖಂಡಿಸಿದ್ದು, ಪ್ರಚೋದನಕಾರಿ ಹಾಗೂ ದ್ವೇಷ ಭಾಷಣಗಳನ್ನು ಮಾಡುವ ಎಲ್ಲರನ್ನೂ ಕಾನೂನಿನ ಪ್ರಕಾರ ಶಿಕ್ಷಿಸಬೇಕು ಇದಕ್ಕೆ ಯಾರೂ ಹೊರತಲ್ಲ ಎಂದು ಹೇಳಿದ್ದಾರೆ.
ಪಿಟಿಐ ಗೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿರುವ ಅವರು, ದ್ವೇಷದ ರಾಜಕಾರಣವನ್ನು ಭ್ರಷ್ಟತನ ಎಂದು ಹೇಳಿದ್ದು, ಎಲ್ಲಾ ರಾಜಕೀಯ ಪಕ್ಷಗಳು ಹಾಗೂ ಅದರ ನಾಯಕರು ದ್ವೇಷ ಹರಡುವ ಸಮಾಜದ ಒಂದು ವರ್ಗವನ್ನು ಮತ್ತೊಂದು ವರ್ಗದ ಮೇಲೆ ಹತ್ತಿಕ್ಕುವುದರಲ್ಲಿ ತೊಡಗಿಸಿಕೊಳ್ಳುವುದರಿಂದ ದೂರ ಇರಬೇಕು ಎಂದು ಕರೆ ನೀಡಿದ್ದಾರೆ.
ಯಾವುದೇ ಸಮುದಾಯದ ವಿರುದ್ಧ ಒಡಕು ಮೂಡಿಸುವ ಹೇಳಿಕೆಗಳಲ್ಲಿ ತೊಡಗಿಕೊಳ್ಳುವ ಬದಲು ರಾಜಕಾರಣಿಗಳು ಭ್ರಾತೃತ್ವ ಹಾಗೂ ಅಭಿವೃದ್ಧಿಯ ವಿಷಯದ ರಾಜಕಾರಣದತ್ತ ಗಮನ ಹರಿಸಬೇಕು ಇದು ದೇಶದ ಹಿತಾಸಕ್ತಿಗೆ ಒಳ್ಳೆಯದು ಎಂದು ಆರ್ ಎಸ್ ಎಸ್ ನ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯರೂ ಆಗಿರುವ ಇಂದ್ರೇಶ್ ಕುಮಾರ್ ಹೇಳಿದ್ದಾರೆ.
ಇದನ್ನೂ ಓದಿ: ಭಾರತದಲ್ಲಿ ಎಲ್ಲಾ ಧರ್ಮಗಳ ದ್ವೇಷದ ಮಾತೃ ಸಂಸ್ಥೆ ಯಾವುದು? ಆರ್ ಎಸ್ ಎಸ್ ದ್ವೇಷಕ್ಕೆ ಸಿಲುಕಿ ಯುವಕರ ಒದ್ದಾಟ!
ಇದೇ ವೇಳೆ ಮಹಾತ್ಮ ಗಾಂಧಿ ಅವರ ಹತ್ಯೆಯ ವಿಚಾರವಾಗಿ ಆರ್ ಎಸ್ ಎಸ್ ಹಾಗೂ ಅದರ ಸೈದ್ಧಾಂತಿಕ ಸಹ ಸಂಘಟನೆಗಳ ವಿರುದ್ಧ ಆರೋಪ ಹೊರಿಸುವ ಕಾಂಗ್ರೆಸ್ ವಿರುದ್ಧವೂ ಇಂದ್ರೇಶ್ ಕುಮಾರ್ ಅಸಮಾಧಾನ ಹೊರಹಾಕಿದ್ದು, ಅವರ ಆರೋಪಗಳು ಆಧಾರ ರಹಿತ ಅವರ ಆರೋಪವನ್ನು ಸಾಬೀತುಪಡಿಸಲು ಯಾವುದೇ ಸಾಕ್ಷ್ಯಗಳೂ ಇಲ್ಲ ಎಂದಿದ್ದಾರೆ.
ಹಿಂದುತ್ವವಾದಿಗಳು ಮಹಾತ್ಮಾ ಗಾಂಧಿ ಅವರನ್ನು ಹತ್ಯೆ ಮಾಡಿದರು ಎಂಬ ರಾಹುಲ್ ಗಾಂಧಿ ಹೇಳಿಕೆ ಬಗ್ಗೆಯೂ ಕುಮಾರ್ ಆಕ್ಷೇಪ ವ್ಯಕ್ತಪಡಿಸಿದ್ದು ರಾಹುಲ್ ಗಾಂಧಿ ಅವರದ್ದೂ ದ್ವೇಷ ಭಾಷಣ ಎಂದಿದ್ದಾರೆ.