ದೆಹಲಿ ಮೆಟ್ರೋ ನಿಲ್ದಾಣಗಳ ಎಕ್ಸ್-ರೇ ಯಂತ್ರಗಳಿಂದ ಮಹಿಳೆಯರ ಬ್ಯಾಗ್ ಕದಿಯುತ್ತಿದ್ದ ಅರೆವೈದ್ಯಕೀಯ ಶಿಕ್ಷಕಿಯ ಬಂಧನ
ದೆಹಲಿ ಮೆಟ್ರೋ ನಿಲ್ದಾಣಗಳ ಎಕ್ಸ್-ರೇ ಯಂತ್ರಗಳಿಂದ ಮಹಿಳೆಯರ ಬ್ಯಾಗ್ ಗಳನ್ನು ಕದಿಯುತ್ತಿದ್ದ ಅರೆವೈದ್ಯಕೀಯ ಶಿಕ್ಷಕಿಯನ್ನು ಬಂಧಿಸಲಾಗಿದೆ
Published: 06th February 2022 12:01 AM | Last Updated: 06th February 2022 12:01 AM | A+A A-

ದೆಹಲಿ ಮೆಟ್ರೊ
ನವದೆಹಲಿ: ದೆಹಲಿ ಮೆಟ್ರೋ ನಿಲ್ದಾಣಗಳ ಎಕ್ಸ್-ರೇ ಯಂತ್ರಗಳಿಂದ ಮಹಿಳೆಯರ ಬ್ಯಾಗ್ ಗಳನ್ನು ಕದಿಯುತ್ತಿದ್ದ ಅರೆವೈದ್ಯಕೀಯ ಶಿಕ್ಷಕಿಯನ್ನು ಬಂಧಿಸಲಾಗಿದೆ. 26 ವರ್ಷದ ಶಿಕ್ಷಕಿ ಬಂಧನಕ್ಕೊಳಗಾಗಿದ್ದು, ಈಕೆ ಉತ್ತಮ್ ನಗರದ ನಿವಾಸಿ ಗರೀಮಾ ಪಾಂಡೆ ಎಂದು ಗುರುತಿಸಲಾಗಿದೆ.
ಆರೋಪಿ ಮೈಕ್ರೋಬಯಾಲಜಿ ಸ್ನಾತಕೋತ್ತರ ಪದವೀಧರೆಯಾಗಿದ್ದು, ಖಾಸಗಿ ಸಂಸ್ಥೆಯಲ್ಲಿ ಪ್ಯಾರಾಮೆಡಿಕ್ಸ್ ನಲ್ಲಿ ಶಿಕ್ಷಕಿಯಾಗಿ ಇತ್ತೀಚೆಗಷ್ಟೇ ಸೇರ್ಪಡೆಯಾಗಿದ್ದರು. ಕಳೆದ 15-20 ದಿನಗಳಿಂದ ದೆಹಲಿ ಪೊಲೀಸ್ ಮೆಟ್ರೋ ವಿಭಾಗದ ಠಾಣೆಗಳಲ್ಲಿ ಕಳ್ಳತನದ ಹಲವು ದೂರುಗಳು ದಾಖಲಾಗಿದ್ದವು ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಜ.11 ರಂದು ಮಹಿಳೆಯೊಬ್ಬರು ತಾವು ಉತ್ತಮ್ ನಗರ್ ಮೆಟ್ರೋ ಠಾಣೆಯ ಎಕ್ಸ್-ರೇ ಯಂತ್ರದಲ್ಲಿ ತಮ್ಮ ಬ್ಯಾಗ್ ನ್ನು ಹಾಕಿದ್ದು, ಫ್ರಿಸ್ಕಿಂಗ್ ಬಳಿಕ ಬಂದು ನೋಡಿದ ಬಳಿಕ ಆ ಬ್ಯಾಗ್ ಕಣ್ಮರೆಯಾಗಿತ್ತು ಎಂದು ದೂರು ದಾಖಲಿಸಿದ್ದರು. ಈ ದೂರಿನ ಆಧಾರದಲ್ಲಿ ಸಿಸಿಟಿವಿ ಫುಟೇಜ್ ಪರಿಶೀಲಿಸಲಾಗಿದ್ದು, ಅದರಲ್ಲಿ ಮಹಿಳೆಯೋರ್ವರು, ಬ್ಯಾಗ್ ಕದಿಯುತ್ತಿರುವುದು ಪತ್ತೆಯಾಗಿದೆ.
ಜ.29 ರಂದು ಹಾಗೂ ಜ.30 ರಂದು ಇದೇ ಮಾದರಿಯ ಘಟನೆ ನಡೆದಿತ್ತು. ಜ.24 ರಂದು ರಿಥಾಲ ಮೆಟ್ರೋ ಸ್ಟೇಷನ್ ಗಳಲ್ಲಿ ಇದೇ ಮಾದರಿಯ ಘಟನೆ ವರದಿಯಾಗಿತ್ತು.ಸಿಸಿಟಿವಿಯಲ್ಲಿ ಕಾಣಿಸಿದ್ದ ಮಹಿಳೆಗೆ ಹೋಲಿಕೆಯಾಗುವ ಮಹಿಳೆ ಶುಕ್ರವಾರದಂದು ಉತ್ತಮ್ ನಗರ್ ವೆಸ್ಟ್ ಮೆಟ್ರೋ ಸ್ಟೇಷನ್ ನಲ್ಲಿ ಪೊಲೀಸರಿಗೆ ಪತ್ತೆಯಾಗಿದ್ದರು. ತನಿಖೆಯ ಪ್ರಾರಂಭದಲ್ಲಿ ಮಹಿಳೆ ಆರೋಪವನ್ನು ನಿರಾಕರಿಸಿದರಾದರೂ ಸಿಸಿಟಿವಿ ಫುಟೇಜ್ ತೋರಿಸಿದ ಬಳಿಕ ಪಶ್ಚಾತ್ತಾಪಪಟ್ಟರು ಎಂದು ಡಿಸಿಪಿ ಹೇಳಿದ್ದಾರೆ.