ಪಂಜಾಬ್, ಯುಪಿ ಚುನಾವಣೆಗೆ ಮುನ್ನ ಡೇರಾ ಮುಖ್ಯಸ್ಥ ಗುರ್ಮೀತ್ ರಾಮ್ ರಹೀಮ್‌ಗೆ 21 ದಿನಗಳ ಫರ್ಲೋ
ಪಂಜಾಬ್ ಹಾಗೂ ಉತ್ತರ ಪ್ರದೇಶ ಚುನಾವಣೆಗೆ ಕೆಲವೇ ದಿನಗಳು ಬಾಕಿ ಇರುವಾಗ ಡೇರಾ ಸಚ್ಚಾ ಸೌದಾ ಮುಖ್ಯಸ್ಥ ಗುರ್ಮೀತ್ ರಾಮ್ ರಹೀಮ್ ಅವರು 21 ದಿನಗಳ ಕಾಲ ಫರ್ಲೋ ಮೇಲೆ ಜೈಲಿನಿಂದ ಬಿಡುಗಡೆಯಾಗುತ್ತಿದ್ದಾರೆ.
Published: 07th February 2022 03:04 PM | Last Updated: 07th February 2022 03:04 PM | A+A A-

ಗುರ್ಮೀತ್ ರಾಮ್ ರಹೀಮ್ ಸಿಂಗ್
ಚಂಡೀಗಡ: ಪಂಜಾಬ್ ಹಾಗೂ ಉತ್ತರ ಪ್ರದೇಶ ಚುನಾವಣೆಗೆ ಕೆಲವೇ ದಿನಗಳು ಬಾಕಿ ಇರುವಾಗ ಡೇರಾ ಸಚ್ಚಾ ಸೌದಾ ಮುಖ್ಯಸ್ಥ ಗುರ್ಮೀತ್ ರಾಮ್ ರಹೀಮ್ ಅವರು 21 ದಿನಗಳ ಕಾಲ ಫರ್ಲೋ ಮೇಲೆ ಜೈಲಿನಿಂದ ಬಿಡುಗಡೆಯಾಗುತ್ತಿದ್ದಾರೆ.
ಹರಿಯಾಣ ಸರ್ಕಾರವು ಕೊಲೆ ಮತ್ತು ಅತ್ಯಾಚಾರದ ಅಪರಾಧಿ ಮತ್ತು ರೋಹ್ಟಕ್ ನ ಸುನಾರಿಯಾ ಜೈಲಿನಲ್ಲಿರುವ ಗುರ್ಮೀತ್ ರಾಮ್ ರಹೀಮ್ ಗೆ 21 ದಿನಗಳ ವಿರಾಮ ನೀಡಿದೆ. ಫರ್ಲೋ ಎಂಬುದು ದೀರ್ಘಾವಧಿಯ ಸೆರೆವಾಸದ ಸಂದರ್ಭದ ವೇಳೆ ಜೈಲಿನಿಂದ ನೀಡಲಾಗುವ ಷರತ್ತುಬದ್ಧ ಬಿಡುಗಡೆಯಾಗಿದೆ.
ಈ ಬಗ್ಗೆ ಮಾಹಿತಿ ನೀಡಿದ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್, ಗುರ್ಮೀತ್ ರಾಮ್ ರಹೀಮ್ ಅವರಿಗೆ ಷರತ್ತಿನ ಅನ್ವಯ ಸೆರೆವಾಸದಿಂದ ೨೧ ದಿನಗಳ ಕಾಲ ಫರ್ಲೋ ನೀಡಲಾಗಿದೆ. ಪಂಜಾಬ್ ಚುನಾವಣೆಗೆ ಯಾವುದೇ ಸಂಬಂಧವಿಲ್ಲ ಮತ್ತು ಇದು ಕೇವಲ ಕಾಕತಾಳೀಯವಾಗಿದೆ ಎಂದು ಹೇಳಿದ್ದಾರೆ.
ಗುರ್ಮೀತ್ ರಾಮ್ ರಹೀಮ್ ವಿರುದ್ಧದ ಪ್ರಕರಣ
ಡೇರಾ ಮಾಜಿ ಮ್ಯಾನೇಜರ್ ರಂಜಿತ್ ಸಿಂಗ್ ಹತ್ಯೆ ಪ್ರಕರಣದಲ್ಲಿ ಡೇರಾ ಸಚ್ಚಾ ಸೌದಾ ಮುಖ್ಯಸ್ಥ ಗುರ್ಮೀತ್ ರಾಮ್ ರಹೀಮ್ ಮತ್ತು ಇತರ ನಾಲ್ವರಿಗೆ ಹರಿಯಾಣದ ಪಂಚಕುಲದ ವಿಶೇಷ ಸಿಬಿಐ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ. 2002ರಲ್ಲಿ ರಂಜಿತ್ ಸಿಂಗ್ ಅವರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು.
ಇಬ್ಬರು ಸಾಧ್ವಿಯರ ಅತ್ಯಾಚಾರ ಪ್ರಕರಣದಲ್ಲಿ ರಾಮ್ ರಹೀಮ್‌ಗೆ 2017ರ ಆಗಸ್ಟ್‌ನಲ್ಲಿ ವಿಶೇಷ ಸಿಬಿಐ ನ್ಯಾಯಾಲಯ ಶಿಕ್ಷೆ ವಿಧಿಸಿತ್ತು. ನಂತರ ಪತ್ರಕರ್ತ ರಾಮಚಂದ್ರ ಛತ್ರಪತಿ ಹತ್ಯೆ ಪ್ರಕರಣ ಮತ್ತು ರಂಜಿತ್ ಹತ್ಯೆ ಪ್ರಕರಣದಲ್ಲಿಯೂ ಶಿಕ್ಷೆಗೊಳಗಾದರು.
ಜೈಲು ನಿಯಮಗಳ ಪ್ರಕಾರ, ಯಾವುದೇ ಖೈದಿ ಪೆರೋಲ್ ಅಥವಾ ಫರ್ಲೋ ತೆಗೆದುಕೊಳ್ಳಬಹುದು. ಕಾನೂನು ಮತ್ತು ಸುವ್ಯವಸ್ಥೆ ಅಥವಾ ಇತರ ಆಕ್ಷೇಪಣೆಗಳನ್ನು ನೋಡಿದ ನಂತರ ಅದರ ನಿರ್ಧಾರವನ್ನು ಸರ್ಕಾರ ಮತ್ತು ಜಿಲ್ಲಾಡಳಿತ ತೆಗೆದುಕೊಳ್ಳಬೇಕಾಗುತ್ತದೆ. ಇತ್ತೀಚೆಗೆ, ರಾಮ್ ರಹೀಮ್ ಜೈಲು ಆಡಳಿತದಿಂದ 21 ದಿನಗಳ ಕಾಲಾವಕಾಶ ಕೋರಿದ್ದರು. ಜೈಲು ಆಡಳಿತ, ಸರ್ಕಾರಕ್ಕೆ ಅರ್ಜಿ ಕಳುಹಿಸಿತ್ತು. ಸೋಮವಾರ ರಾಮ್ ರಹೀಮ್ ಫರ್ಲೋಗೆ ಗ್ರೀನ್ ಸಿಗ್ನಲ್ ಸಿಕ್ಕಿದೆ.
ಒಂದು ವರ್ಷದಲ್ಲಿ ಐದು ಬಾರಿ ಜೈಲಿನಿಂದ ಹೊರಬಂದ ರಾಮ್ ರಹೀಮ್
- 12 ಮೇ 2021: ರಾಮ್ ರಹೀಮ್ ರಕ್ತದೊತ್ತಡ ಬಗ್ಗೆ ದೂರು ನೀಡಿದ್ದರು. ಈ ಕಾರಣದಿಂದಾಗಿ ಅವರನ್ನು ಪರೀಕ್ಷೆಗಾಗಿ ಪಿಜಿಐಗೆ ಕರೆತರಲಾಯಿತು.
- 17 ಮೇ 2021: ರಾಮ್ ರಹೀಮ್ ತನ್ನ ತಾಯಿಯನ್ನು ಭೇಟಿಯಾಗಲು ಒಂದು ದಿನದ ಪೆರೋಲ್ ನೀಡಲಾಗಿತ್ತು. ಪೊಲೀಸ್ ರಕ್ಷಣೆಯಲ್ಲಿ ಅವರನ್ನು ಗುರುಗ್ರಾಮಕ್ಕೆ ಕರೆದೊಯ್ಯಲಾಯಿತು.
- ಜೂನ್ 3, 2021: ರಾಮ್ ರಹೀಮ್ ಹೊಟ್ಟೆ ನೋವಿನ ಬಗ್ಗೆ ದೂರು ನೀಡಿದರು, ಇದರಿಂದಾಗಿ ಅವರನ್ನು ಪಿಜಿಐಗೆ ಕರೆತರಲಾಯಿತು.
- ಜೂನ್ 8, 2021: ರಾಮ್ ರಹೀಮ್ ಅವರನ್ನು ಗುರುಗ್ರಾಮ್‌ನ ಮೇದಾಂತ ಆಸ್ಪತ್ರೆಗೆ ಕರೆದೊಯ್ಯಲಾಯಿತು. (ರಾಮ್ ರಹೀಮ್ ಅವರ ಆರೋಗ್ಯ ಪರೀಕ್ಷೆಗಳನ್ನು ಪಿಜಿಐ ರೋಹ್ಟಕ್‌ನಲ್ಲಿ ಮಾಡಲಾಗುವುದಿಲ್ಲ ಎಂದು ವಾದಿಸಲಾಯಿತು. ಹಾಗಾಗಿ ಗುರುಗ್ರಾಮಕ್ಕೆ ಕರೆದುಕೊಂಡು ಹೋಗಬೇಕಾಯಿತು.)
- 09 ಆಗಸ್ಟ್ 2021: ದೆಹಲಿಯ AIIMS ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು.
- ರಾಮ್ ರಹೀಮ್ ಅವರು 21 ದಿನಗಳ ಕಾಲ ಫರ್ಲೋ ಪಡೆಯುವ ಬಗ್ಗೆ ಮಾಹಿತಿ ಪಡೆದಿದ್ದಾರೆ. ಕಾನೂನು ಸುವ್ಯವಸ್ಥೆ ಕುರಿತು ಮೂರು ಬಾರಿ ಪೊಲೀಸ್ ಅಧಿಕಾರಿಗಳಾದ ಉದಯ್ ಸಿಂಗ್ ಮೀನಾ, ಪೊಲೀಸ್ ವರಿಷ್ಠಾಧಿಕಾರಿ ಸಭೆ ನಡೆಸಲಾಗಿದ್ದು, ಜೈಲಿನ ಸುತ್ತ ಕಣ್ಗಾವಲು ಹೆಚ್ಚಿಸಲಾಗಿದೆ.